ಗೋಕಾಕ್: ಉಪ ಚುನಾವಣೆಯಲ್ಲಿ ಮಾವ-ಅಳಿಯನ ವಿರುದ್ಧ ನಾವು ಗೆದ್ದಿದ್ದೇವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದಾಗಿ ಸೋತಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು.
ರವಿವಾರ ಕಾಂಗ್ರೆಸ್ ಕಾರ್ಯಕರ್ತರ ಅಭಿನಂದನ ಸಮಾರಂಭದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಬಳಿ 45 ಸಾವಿರ ಮತಗಳು ಮಾತ್ರ ಇದ್ದವು. ಇನ್ನುಳಿದ 40 ಸಾವಿರ ಮಂದಿ ತಮ್ಮ ಮತಗಳನ್ನು ಯಡಿಯೂರಪ್ಪನವರನ್ನು ನೋಡಿ ಹಾಕಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೆ ಸ್ಪರ್ಧೆ ಮಾಡುವುದು ಖಚಿತ ಎಂದರು.
ರಮೇಶ್‌ಗೆ ಡಿಸಿಎಂ ಪಟ್ಟ ಕೊಡುವುದಿಲ್ಲ. ನೀರಾವರಿ ಸಚಿವರಾಗುತ್ತಾರೆಂದು ಹೇಳಲಾಗುತ್ತಿದೆ. ಒಂದು ವೇಳೆ ರಮೇಶ್‌ಗೆ ನೀರಾವರಿ ಖಾತೆ ಕೊಟ್ಟರೆ ಬಿಜೆಪಿ ಪಕ್ಷವನ್ನೇ ನೀರಿನಲ್ಲಿ ಮುಳುಗಿಸಿ ಬಿಡುತ್ತಾನೆ. ಅದಕ್ಕೆ ಆತನಿಗೆ ಪೌರಾಡಳಿತ ಖಾತೆ ಕೊಟ್ಟರೆ ಬಿಜೆಪಿ ಸರಕಾರ ಮೂರೂವರೆ ವರ್ಷಗಳ ಸುಭದ್ರವಾಗಿರಲು ಸಾಧ್ಯವಾಗುತ್ತದೆ. ಇಲ್ಲದಿದ್ದರೇ ಮತ್ತೆ ಆರು ತಿಂಗಳುಗಳಲ್ಲಿ ಎಸ್‌ಸಿ, ಎಸ್‌ಟಿ ಶಾಸಕರನ್ನು ಹಿಡಿದುಕೊಂಡು “ಅದೇ ರಾಗ-ಅದೇ ಹಾಡು’ ಎನ್ನುವಂತೆ ಮತ್ತೆ ಗದ್ದಲ ಎಬ್ಬಿಸುತ್ತಾನೆ. ಆತನ ಸ್ವಭಾವ ನನಗೆ ಗೊತ್ತಿದೆ ಎಂದರು.
ಜಾರಕಿಹೊಳಿ ಕುಟುಂಬದವರು ಒಂದೇ ಎಂದು ಬಿಂಬಿಸುತ್ತಾ ಹಾಗೂ ಮಾವ-ಅಳಿಯ ಇಬ್ಬರು ವಾಮಮಾರ್ಗದಿಂದ ಮುಗ್ಧ ಜನರನ್ನು ಮೋಸ ಮಾಡಿ ಮತ ಹಾಕಿಸಿಕೊಂಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ರಮೇಶ್ ಜಾರಕಿಹೊಳಿ ಗೆದ್ದು ಬಂದಿದ್ದಾರೆ. ರಮೇಶ್ ಅವರೊಂದಿಗೆ ನಾನು ಎಂದಿಗೂ ಹೋಗುವುದಿಲ್ಲ.
ನಮ್ಮ ನಡೆಯೇ ಬೇರೆ. ಅವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.