ವಿಧಾನಸಭೆ : ನೀವೆಲ್ಲ ಸಿಎಂ ಆಗೋಕೆ ಟ್ರೈ ಮಾಡಿದಿರಿ ಆದರೆ ಸಿಕ್ಕಿಲ್ಲ ಸುಮ್ನಿರಪ್ಪಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಂದಾಯ ಸಚಿವ ಅಶೋಕ್ ಅವರ ಕಾಲೆಳೆದಿದ್ದಾರೆ.
ಆಯವ್ಯಯದ ಮೇಲಿನ ಚರ್ಚೆ ಸಂದರ್ಭದಲ್ಲಿ ಕಲಾಪ ಬಿಟ್ಟು ಹೊರಟ ಕಂದಾಯ ಸಚಿವ ಆರ್.ಅಶೋಕ ಅವರನ್ನು ಹಾಸ್ಯ ಚಟಾಕಿ ಮೂಲಕ ಕಟ್ಟಿ ಹಾಕಿದ ಅವರು, ಬೊಬ್ಮಾಯಿ ಒರಿಜನಲ್ ಬಿಜೆಪಿ ಅಲ್ಲ, ಆದರೂ ಸಿಎಂ ಅಗಿದ್ದಾರೆ. ಅಶೋಕ, ಈಶ್ವರಪ್ಪ ಯಾರಿಗೂ ಅವಕಾಶ ಸಿಕ್ಕಿಲ್ಲ ಎಂದರು.
ದೇವರ ಆಶೀರ್ವಾದದಿಂದ ಅವರು ಸಿಎಂ ಆಗಿದ್ದಾರೆ ಎಂದು ಅಶೋಕ್ ಹೇಳುದಾಗ ” ಯೇ ಸುಮ್ನಿರಪ್ಪ ನೀವೆಲ್ಲ ಟ್ರೈ ಮಾಡಿದ್ದು ನನಗೆ ಗೊತ್ತಿಲ್ಲವೇ ? ಆಗಿಲ್ಲ ಅದಕ್ಕೆ ಸುಮ್ಮನೆ ಇದ್ದೀರಿ. ಇದನ್ನೆಲ್ಲ ಹೇಳಿದರೆ ನೀವು ಕೇಳಿಸಿಕೊಳ್ಳುವುದೇ ಇಲ್ಲ. ಬೇಡದೇ ಇರುವುದನ್ನು ಕಿವಿಗೆ ಹಾಕಿಕೊಳ್ಳದೇ ಇರುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಬೊಮ್ಮಾಯಿ ಬಜೆಟ್ ಓದುವಾಗ ನಾವೆಲ್ಲ ಕುಳಿತು ಕೇಳಿದ್ದೇವೆ. ಈಗ ನಾನು ಮಾತನಾಡುವಾಗ ನೀವು ಕುಳಿತುಕೊಳ್ಳಬೇಕು ಎಂದರು. ನಾನು ನೀರು ಕುಡಿಯಲು ಹೋಗುತ್ತೇನೆ ಎಂದಾಗ, ನೀರು ಇಲ್ಲೇ ಸಿಗುತ್ತದೆ. ಯೇ ಅಶೋಕಗೆ ಇಲ್ಲೇ ನೀರು ತಂದು ಕೊಡ್ರಪ್ಪ ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಆಗ ಮಧ್ಯ ಪ್ರವೇಶ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ, ನೀರು ಇಲ್ಲೆ ಸಿಗುತ್ತದೆ. ಅಶೋಕ ಎದ್ದು ಹೊರಟಿದ್ದರು. ನೀವು ಇಲ್ಲೇ ಕೂರಿಸಿ ಎಂದರು.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಕಾಲೆಳೆದ ಸಿದ್ದರಾಮಯ್ಯ ನನಗೂ ನಿಮಗೂ ಸ್ನೇಹವಿದೆ. ಆದರೆ ನಮ್ಮ ಹಿನ್ನೆಲೆ ಬೇರೆ , ನಿಮ್ಮ ಹಿನ್ನೆಲೆ ಬೇರೆ. ನೀವು ಆರ್ ಎಸ್ ಎಸ್ ಹಿನ್ನೆಲೆಯವರು. ನಾನಲ್ಲ. ಆದರೂ ಸ್ನೇಹಿತರಲ್ಲವೇ ? ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಅವರಿಗೆ ಅವರ ತಂದೆಯವರ ಪ್ರಭಾವ ಜಾಸ್ತಿ ಇದೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಅವರ ಮೇಲೆ ಈಗ ಆರ್ ಎಸ್ ಎಸ್ ಪ್ರಭಾವ ಜಾಸ್ತಿ ಇದ್ದ ಹಾಗೆ ಕಾಣುತ್ತಿದೆ. ಸಂಘದ ಹಿನ್ನೆಲೆ ಇರುವವರು ಇಂಥ ಬಜೆಟ್ ಮಂಡಿಸಿದರೆ ನನಗೆ ಆಘಾತವಾಗುತ್ತಿರಲಿಲ್ಲ. ಆದರೆ ಬೊಮ್ಮಾಯಿ ಬಜೆಟ್ ಆಘಾತ ತಂದಿದೆ ಎಂದರು.