ಮೈಸೂರು: ಹತ್ತು ವರ್ಷದಿಂದ ನೀವು ನಮ್ಮೂರಿಗೆ ಭೇಟಿ ಕೊಟ್ಟಿಲ್ಲ, ನಮ್ಮೂರಿಗೆ ಏನೂ ಮಾಡಿಲ್ಲವೆಂದು ಹೇಳತೊಡಗಿದ್ದರಿಂದ, ನಾನು ಸಾಲುಂಡಿಗೆ ಹತ್ತಾರು ಬಾರಿ ಬಂದಿದ್ದೇನೆ. ನೀವು ನನ್ನ ಪರವಾಗಿ ಓಡಾಡಿದ್ದರೆ ಗೊತ್ತಾಗುತ್ತಿತ್ತು ಎಂದು ಹೇಳಿದ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಗುರುವಾರ ಕೆ.ಸಾಲುಂಡಿಯಲ್ಲಿ ನಡೆದ ಘಟನೆಯನ್ನು ಸಮರ್ಥಿಸಿಕೊಂಡರು.
ಕೆಲವರು ಬಂದು ನಮ್ಮ ಮುಂದಿನ ರಸ್ತೆ ನೋಡ ಬನ್ನಿ ಎಂದು ಕರೆಯುತ್ತಾರೆ, ಇನ್ನು ಕೆಲವರು ನೀವು ಊರಿಗೇ ಬಂದಿಲ್ಲ ಅನ್ನುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗನ ವಿರುದ್ಧ ಕಿಡಿಕಾರಿದರು. ಹಲವಾರು ವರ್ಷಗಳಿಂದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿಯನ್ನೇ ಕಂಡಿರಲಿಲ್ಲ.
ಕೆ.ಸಾಲುಂಡಿ, ಮೂಗನಹುಂಡಿ ಮೊದಲಾದ ಗ್ರಾಮಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಬೇಕಾಗಿತ್ತು. ಈಗಿನ ನಗರಾಭಿವೃದ್ಧಿ ಸಚಿವರು ಈ ಕಾಮಗಾರಿಗೆ ಅನುದಾನ ಕೊಡುವುದು ಬೇಡವೆಂದು ತಡೆ ಹಿಡಿದಿದ್ದಾರೆ. ಹಾಗಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೆ.ಸಾಲುಂಡಿ ಗ್ರಾಮದಲ್ಲಿ 8 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಮೂಗನಹುಂಡಿಯಿಂದ ಆರ್.ಟಿ.ನಗರಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು 2.5ಕೋಟಿ ಅನುದಾನದಲ್ಲಿ ಕಾಮಗಾರಿ ಆರಂಭಿಸಲಾಗಿದೆ. ರಸ್ತೆಯೇ ಇಲ್ಲದ ಕಾರಣ ಯುಜಿಡಿ ಪೈಪ್‌ಲೇನ್‌ಗೆ ತೊಂದರೆಯಾಗಿತ್ತು. ಈಗ ರಸ್ತೆ ಕಾಮಗಾರಿಯನ್ನು ಶುರು ಮಾಡಲಾಗಿದೆ. ಆದರೆ, ಇದ್ಯಾವುದು ಗೊತ್ತಿಲ್ಲದ ಕೆಲವರು ಹಾರಾಡುತ್ತಾರೆ. ಅದಕ್ಕೆ ಉತ್ತರ ನೀಡಿ ಬಂದಿದ್ದೇನೆ. ಈ ಘಟನೆಯಿಂದ ಮುಜುಗರವೇನು ಆಗಿಲ್ಲ ಎಂದರು.
“ನೀವೇನ್ ನಂಗೆ ವೋಟ್ ಹಾಕಿದ್ದೀರಾ? ನೀವೆಲ್ಲಾ ಸಿದ್ದರಾಮಯ್ಯಂಗೆ ವೋಟ್ ಹಾಕಿದ್ದೀರಿ ಈಗ ನಾನ್ಯಾಕೆ ಬಂದು ನೋಡಲಿ, ನೀನ್ ಯಾರ್ಗೆ ವೋಟ್ ಹಾಕ್ದೋ ಅವರತ್ರನೇ ಕೆಲಸ ಮಾಡಿಸ್ಕೋ’ ಎಂದು ಗುರುವಾರ ಕೆ.ಸಾಲುಂಡಿ ಗ್ರಾಮದಲ್ಲಿ ಸಿದ್ದರಾಮಯ್ಯ ಬೆಂಬಲಿರ ವಿರುದ್ಧ ಸಚಿವ ಜಿ.ಟಿ.ದೇವೇಗೌಡ ಹರಿಹಾಯ್ದಿದ್ದರು. ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.