ದಾವಣಗೆರೆ: ಜನಾರ್ದನ ರೆಡ್ಡಿ ಅವರ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಬಿಜೆಪಿಗೆ ಯಾವುದೇ ತೊಂದರೆ ಇಲ್ಲ. ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲ ೧೦ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಬಳ್ಳಾರಿ ನಗರ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ವಿಜಯನಗರ, ಬಳ್ಳಾರಿ ಜಿಲ್ಲೆಯ ಎಲ್ಲ ವಿಧಾನ ಸಭಾ ಕ್ಷೇತ್ರಗಳು ಬಿಜೆಪಿ ಭದ್ರಕೋಟೆಯಾಗಿವೆ. ಮತದಾರರು, ಅಭಿಮಾನಿಗಳು ಈಗಲೂ ನಮ್ಮೊಂದಿಗೆ ಇದ್ದಾರೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಪುನರುಚ್ಚರಿಸಿದರು.
ಜನಾರ್ದನ್ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷಕ್ಕೂ ಬಿಜೆಪಿಗೂ ಯಾವುದೇ ಸಂಬಂಧವೇ ಇಲ್ಲ. ನಮ್ಮದು ಕಮಿಟ್‌ಮೆಂಟ್ ಆಗುವ ಕುಟುಂಬವೇ ಅಲ್ಲ. ಬಳ್ಳಾರಿಯಲ್ಲಿ ನನ್ನ ಸಹೋದರ(ಜನಾರ್ದನ ರೆಡ್ಡಿ) ಪತ್ನಿ ಸ್ಪರ್ಧೆ ಮಾಡುತ್ತಿದ್ದಾರೆ. ಕೌಟಂಬಿಕ ಸಂಬಂಧವೇ ಬೇರೆ. ರಾಜಕಾರಣವೇ ಬೇರೆ. ಕರುಣಾಕರ ರೆಡ್ಡಿಯವರು ಸದಾ ನಮ್ಮೊಂದಿಗೇ ಇದ್ದಾರೆ. ಜನಾರ್ದನ ರೆಡ್ಡಿ ಪತ್ನಿ ಸ್ಪರ್ಧೆಯಿಂದ ನನಗೆ ಯಾವುದೇ ತೊಂದರೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಳ್ಳಾರಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಸ್ಪರ್ಧೆ ಮಾಡುವುದಾಗಿ ಬುಧವಾರ ಹೇಳಿವುದರಿಂದ ನನಗೆ ಇನ್ನಷ್ಟು ಆನೆ ಬಲ ಬಂದಿದೆ. ನನ್ನ ಕ್ಷೇತ್ರದ ಪಕ್ಕದಲ್ಲೇ ಶ್ರೀರಾಮುಲು ಇರುವುದರಿಂದ ಅನುಕೂಲ ಆಗಲಿದೆ. ಸಂಡೂರುನಲ್ಲಿ ಸ್ಪಽಸುವುದಾಗಿ ಶ್ರೀರಾಮುಲು ಹೇಳಿರಲಿಲ್ಲ. ಪಕ್ಷವನ್ನ ಇನ್ನಷ್ಟು ಬಲಪಡಿ ಸುವ ಉದ್ದೇಶದಿಂದ ಅಮಿತ್ ಶಾ ಅವರ ಕಾರ್ಯಕ್ರಮವನ್ನ ಸಂಡೂರಿನಲ್ಲಿ ನಡೆಸಲಾಯಿತು ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ೧೪ ರಿಂದ ೧೬ ಸಾವಿರದಷ್ಟು ಪಕ್ಕಾ ಪಟ್ಟಾಗಳನ್ನು ಮನೆ ಬಾಗಿಲಿಗೆ ತಲುಪಿಸಿರುವುದರಿಂದ ಜನರು ಬಹಳ ಸಂತೋಷವಾಗಿದ್ದಾರೆ. ಈವರೆಗೆ ಯಾರೂ ಸಹ ಮನೆ ಬಾಗಿಲಿಗೆ ಪಟ್ಟ ತಂದುಕೊಟ್ಟಿರಲಿಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ನನ್ನ ಗೆಲುವಿಗೆ ಯಾವುದೇ ಅಡ್ಡಿಯಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದಿಂದ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂಬ ಭಯದಿಂದ ಜನಾರ್ದನ ರೆಡ್ಡಿ ವಿರುದ್ಧ ಇಡಿ ದಾಳಿ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ ಎಂಬ ಪ್ರಶ್ನೆಗೆ, ಅದೊಂದು ಸ್ವತಂತ್ರ ಸಂಸ್ಥೆ. ಇಡಿ ದಾಳಿಗೂ, ಬಿಜೆಪಿ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ ಪ್ರತಿಕ್ರಿಯಿಸಿದರು.