Advertisement

ನನಗೆ ಪ್ರತಿಷ್ಠೆ ಇಲ್ಲ, ಅಭಿವೃದ್ಧಿ ಮುಖ್ಯ

09:19 AM May 31, 2019 | Sriram |

ಮಂಡ್ಯ: ‘ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ಜಿಲ್ಲೆಯ ರೈತರು ಹಾಗೂ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕೆ ನಿಮ್ಮ ಮನೆಗಳಿಗೆ ಬರಲು ಸಿದ್ಧನಿದ್ದೇನೆ. ಏನು ಮಾಡಬೇಕು ಎಂದು ನನಗೆ ಸಲಹೆ-ಮಾರ್ಗದರ್ಶನ ಕೊಡಿ. ಅದರಂತೆ ನಾನು ನಡೆಯುತ್ತೇನೆ’ ಎಂದು ನೂತನ ಸಂಸದೆ ಸುಮಲತಾ ಅಂಬರೀಶ್‌ ಜನರಲ್ಲಿ ಮನವಿ ಮಾಡಿದ್ದಾರೆ.

Advertisement

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕ್‌ನಲ್ಲಿ ಬುಧವಾರ ಆಯೋಜಿಸಿದ್ದ ದಿ. ಅಂಬರೀಶ್‌ ಜಯಂತ್ಯುತ್ಸವ ಹಾಗೂ ಜಿಲ್ಲೆಯ ಮತದಾರರ ಸ್ವಾಭಿಮಾನದ ವಿಜಯೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಚುನಾವಣೆ ಮುಗಿದ ಅಧ್ಯಾಯ. ಎಂಟು ಕ್ಷೇತ್ರಗಳ ಶಾಸಕರೂ ನನ್ನ ಜೊತೆಗೆ ಬನ್ನಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರ ಕೆಲಸ ಮಾಡುವುದಕ್ಕೆ ನಾನು ಸಿದ್ಧಳಿದ್ದೇನೆ. ನನಗೆ ಕಾಲಾವಕಾಶ ಕೊಡಿ. ಬಾಯಲ್ಲಿ ಮಾತ ನಾಡುವುದು ಸುಲಭ. ಅದನ್ನು ಕ್ರಿಯೆಯಲ್ಲಿ ತೋರಿಸು ವುದು ಕಷ್ಟ. ಈಗ ನಮ್ಮೆದುರು ಕುಡಿಯುವ ನೀರಿನ ಸಮಸ್ಯೆ ಇದೆ. ಅದನ್ನು ಪರಿಹರಿಸಲು ಏನು ಮಾಡಬೇಕೆಂದು ಎಲ್ಲರೂ ಕುಳಿತು ಚರ್ಚಿಸೋಣ. ಸಮಸ್ಯೆಗಳಿಗೆ ಪರಿಹಾರ ಹುಡುಕೋಣ’ ಎಂದು ಟೀಕಾಕಾರರಿಗೆ ತಿಳಿಸಿದರು.

‘ಚುನಾವಣಾ ಪೂರ್ವದಲ್ಲಿ ರೈತಸಂಘದವರು ನನ್ನೆದುರು ಹಲವು ಬೇಡಿಕೆಗಳನ್ನು ಇಟ್ಟಿದ್ದರು. ಅವುಗಳನ್ನು ಈಡೇರಿಸುವುದಕ್ಕೆ ನಾನು ಬದ್ಧಳಿದ್ದೇನೆ. ರಾಜಕೀಯದಲ್ಲಿ ನನಗೆ ಅಂಬರೀಶ್‌ ತೋರಿಸಿರುವ ಮಾರ್ಗವಿದೆ. ಕಾವೇರಿ ವಿಚಾರದಲ್ಲೂ ನಾನು ಯಾವುದೇ ಕಾರಣಕ್ಕೂ ಬೆನ್ನು ತೋರಿಸುವುದಿಲ್ಲ. ಕಾವೇರಿ ಕಣಿವೆ ರೈತರ ಹಿತ ಕಾಪಾಡುವ ಜವಾಬ್ದಾರಿಯನ್ನು ಸರ್ವಪಕ್ಷದವರೆಲ್ಲರೊಂದಿಗೆ ಸೇರಿ ಜನಪರವಾಗಿ ನಿರ್ವಹಿಸುತ್ತೇನೆ’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಚಿತ್ರನಟರಾದ ದರ್ಶನ್‌, ಯಶ್‌, ಅಭಿಷೇಕ್‌ ಅಂಬರೀಶ್‌, ಪ್ರೇಮ್‌, ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಿರ್ದೇಶಕ ರಾಜೇಂದ್ರಸಿಂಗ್‌ ಬಾಬು, ಡಾ.ಎಚ್.ಎನ್‌.ರವೀಂದ್ರ, ಸುನೀತಾ ಪುಟ್ಟಣ್ಣಯ್ಯ, ಬಿಜೆಪಿ ಮುಖಂಡ ಅಶ್ವಥನಾರಾಯಣ ಇತರರಿದ್ದರು.

Advertisement

ಮಂಡ್ಯದಲ್ಲೇ ಅಂಬಿ ಹುಟ್ಟುಹಬ್ಬ
ಇನ್ನು ಪ್ರತಿ ವರ್ಷ ಅಂಬರೀಶ್‌ ಹುಟ್ಟುಹಬ್ಬವನ್ನು ಮಂಡ್ಯದಲ್ಲೇ ಆಚರಿಸುತ್ತೇನೆ. ಮೂವತ್ತು ವರ್ಷ ಅಂಬರೀಶ್‌ ಜೊತೆ ಜೀವನ ಕಳೆದಿದ್ದೇನೆ. ಪ್ರತಿ ವರ್ಷ ಮಂಡ್ಯದಿಂದ ಸಾವಿರಾರು ಜನರು ನಮ್ಮ ಮನೆ ಎದುರು ಮಧ್ಯರಾತ್ರಿಯಿಂದಲೇ ಆಗಮಿಸಿ ಇಡೀ ದಿನ ಅಂಬರೀಶ್‌ ಜೊತೆ ಇದ್ದು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಅಂಬರೀಶ್‌ ಇಲ್ಲದೆ ಇಂದು ನಮ್ಮ ಮನೆ ದೇವರಿಲ್ಲದ ಗುಡಿಯಾಗಿದೆ. ಅಭಿಮಾನಿ ಗಳಿಲ್ಲದೆ ಮೌನ ಆವರಿಸಿದೆ. ಅದಕ್ಕಾಗಿ ಇನ್ನು ಮುಂದೆ ನಾನು ಅಂಬರೀಶ್‌ ಹುಟ್ಟುಹಬ್ಬವನ್ನು ಮಂಡ್ಯದಲ್ಲೇ ಆಚರಿಸುತ್ತೇನೆ. ಅವರ ನೆಚ್ಚಿನ ಅಭಿಮಾನಿ ಗಳ ಸಮ್ಮುಖದಲ್ಲಿ ಆಚರಿಸುತ್ತೇನೆ ಎಂದು ಸುಮಲತಾ ಭರವಸೆ ನೀಡಿದರು.

ಚುನಾವಣಾ ಯುದ್ಧ ಮುಗಿದಿದೆ. ಇನ್ನೇನಿದ್ದರೂ ಶಾಂತಿ ಸಾರೋಣ. ಹುಟ್ಟಿನಿಂದಲೇ ಎಲ್ಲರೂ ಎಲ್ಲವನ್ನೂ ಕಲಿತುಕೊಂಡು ಬರುವುದಿಲ್ಲ. ವೇಗದ ಓಟಗಾರ ಹುಸೇನ್‌ ಬೋಲ್r ಕೂಡ ಹುಟ್ಟಿದಾಗ ಅಂಬೆಗಾಲಿಟ್ಟುಕೊಂಡು ಬೆಳೆದಿದ್ದಾರೆ. ಅದೇ ರೀತಿ ಸುಮಲತಾ ಈಗಷ್ಟೇ ರಾಜಕಾರಣ ಪ್ರವೇಶಿಸಿದ್ದಾರೆ. ಕೆಲಸ ಮಾಡುವುದಕ್ಕೆ ಸಹಕಾರ, ಮಾರ್ಗದರ್ಶನ ನೀಡಿ, ಜನರ ದನಿಯಾಗಿ ನಿಲ್ಲುವುದಕ್ಕೆ ಸಹಕರಿಸಿ.
– ಯಶ್‌, ಚಿತ್ರನಟ

ಇಂದು ಅಂಬರೀಶ್‌ ಹುಟ್ಟುಹಬ್ಬವಲ್ಲ. ಅಂಬರೀಶ್‌ ಕುಟುಂಬಕ್ಕೆ ಮರುಹುಟ್ಟು ನೀಡಿದ ಜನರ ಹುಟ್ಟುಹಬ್ಬ. ಜನರ ಋಣವನ್ನು ಎಂದಿಗೂ ತೀರಿಸಲಾಗುವುದಿಲ್ಲ.
– ದರ್ಶನ್‌, ಚಿತ್ರನಟ

Advertisement

Udayavani is now on Telegram. Click here to join our channel and stay updated with the latest news.

Next