ಮೈಸೂರು: ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರಪ್ಪ, ‘ಸಂತೋಷ್ ಯಾರು ಎಂದೇ ನನಗೆ ಗೊತ್ತಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ’ ಎಂದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, “ಇದರಲ್ಲಿ ನನ್ನ ಪಾತ್ರ ಇಲ್ಲ. ಆತ ಯಾರೆಂಬುದೇ ನನಗೆ ಗೊತ್ತಿಲ್ಲ” ಎಂದರು.
“ಆತ ನಮ್ಮ ಇಲಾಖೆಯ ಮೇಲೆ ಆರೋಪ ಮಾಡಿದ್ದ. ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ. ಆತನ ಮೇಲೆ ಮತ್ತು ಒಂದು ಖಾಸಗಿ ಚಾನಲ್ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯದಿಂದ ಆತನಿಗೆ ನೋಟಿಸ್ ಬಂದಿದೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆತ ನಮ್ಮ ಇಲಾಖೆಯಿಂದ ಯಾವುದೇ ಟೆಂಡರ್ ಪಡೆದುಕೊಂಡಿಲ್ಲ. ನಾನು ರಾಜೀನಾಮೆ ನೀಡಲ್ಲ” ಎಂದು ಈಶ್ವರಪ್ಪ ಹೇಳಿದರು.
ಇದನ್ನೂ ಓದಿ:ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ: ಸಿಎಂ ಬೊಮ್ಮಾಯಿ ಈಶ್ವರಪ್ಪ ಕುರಿತು ಹೇಳಿದ್ದೇನು ?
ಗುತ್ತಿಗೆದಾರ ಸಂತೋಷ್ ಪಾಟೀಲ್ ಇಂದು ಉಡುಪಿಯ ಖಾಸಗಿ ಲಾಡ್ಜೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಸಾವಿಗೆ ಸಚಿವ ಈಶ್ವರಪ್ಪ ಕಾರಣ ಎಂದು ಸಂತೋಷ್ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ.