ಬೆಂಗಳೂರು: ಹೊಸಕೋಟೆ ಕ್ಷೇತ್ರದ ಉಪಚುನಾವಣೆ ಯಲ್ಲಿ ಶರತ್ ಬಚ್ಚೇಗೌಡ ಪಕ್ಷೇತರ ರಾಗಿ ಸ್ಪರ್ಧಿಸುವು ದಾಗಿ ಹೇಳಿಕೊಂಡು ಈಗಾಗಲೇ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೂ ನನಗೂ ಸಂಬಂಧವಿಲ್ಲ. ನಾನು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆಂದು ಅನರ್ಹತೆ ಗೊಂಡ ಶಾಸಕ ಎಂ.ಟಿ.ಬಿ.ನಾಗರಾಜ್ ಹೇಳಿದರು.
ಗೃಹ ಕಚೇರಿ “ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿಯಾಗಿ ಚರ್ಚೆ ನಡೆಸಿದ ಬಳಿಕ ಮಾತ ನಾಡಿದ ಅವರು, ನಾವು ಬಿಜೆಪಿ ಸೇರುವುದು ಎಲ್ಲರಿಗೂ ಗೊತ್ತು ಎಂದ ಅವರು, ಟಿಪ್ಪು ಜಯಂತಿ ಆಚರಣೆ ಕುರಿತ ಹೇಳಿಕೆಗೆ ಸಂಬಂಧಪಟ್ಟಂತೆ ಶರತ್ ಬಚ್ಚೇಗೌಡ ಅವರೇ ಸಮರ್ಥನೆ ನೀಡಬೇಕೆಂದು ತಿಳಿಸಿದರು.
ವಿಧಾನಸಭೆಗೆ ಮಧ್ಯಂತರ ಚುನಾವಣೆ ಬರಲಿದೆ ಎಂಬುದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿ ಯಿಸಿದ ನಾಗರಾಜ್, ಸಿದ್ದರಾಮಯ್ಯ ಅವರು ಕನಸು ಕಾಣುತ್ತಿ ದ್ದಾರೆ. ಬಿಜೆಪಿ ಸರ್ಕಾರ ಇನ್ನೂ 3 ವರ್ಷ ಕಾಲ ಸುಭದ್ರವಾಗಿರುತ್ತದೆ. ಗುಂಪುಗಾರಿಕೆಯಿಂದಾಗಿಯೇ ಕಾಂಗ್ರೆಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಸ್ಥಾನವನ್ನಷ್ಟೇ ಗೆದ್ದಿದೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಬದಲಾಗಿದೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇದ್ದು, ನಾಯಕತ್ವದ ಕೊರತೆ ಇದೆ ಎಂದು ತಿಳಿಸಿದರು.
ಶರತ್ ಬಚ್ಚೇಗೌಡ ನಡೆ ಬಗ್ಗೆ ಚರ್ಚೆ: ಯಡಿಯೂರಪ್ಪ ಅವರನ್ನು ಭೇಟಿಯಾದ ಎಂ.ಟಿ.ಬಿ. ನಾಗರಾಜ್, ಹೊಸಕೋಟೆ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಶರತ್ ಬಚ್ಚೇಗೌಡ ಹೇಳುತ್ತಿದ್ದು, ತಮ್ಮ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಅವರನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ಅವರು ಸದ್ಯದಲ್ಲೇ ಸಮಾಧಾನಪಡಿಸುವ ಭರವಸೆ ನೀಡಿದರು ಎನ್ನಲಾಗಿದೆ.