Advertisement

ಡಬ್ಬಿಂಗ್‌ ವಿರೋಧಿ ಹೋರಾಟಕ್ಕೂ ನನಗೂ ಸಂಬಂಧವಿಲ್ಲ: ಜಗ್ಗೇಶ್‌

11:23 AM Dec 02, 2018 | |

ಕನ್ನಡ ಚಿತ್ರರಂಗದ ಡಬ್ಬಿಂಗ್‌ ವಿರೋಧಿ ಹೋರಾಟದಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿದ್ದ, ಡಬ್ಬಿಂಗ್‌ ವಿರೋಧಿಸಿದ್ದಕ್ಕಾಗಿ ದಂಡ ಕೂಡ ಹಾಕಿಸಿಕೊಂಡಿದ್ದ ನಟ ಜಗ್ಗೇಶ್‌ ಈಗ ಡಬ್ಬಿಂಗ್‌ ಕುರಿತಾಗಿ ತಟಸ್ಥ ನಿಲುವು ತಾಳಲು ನಿರ್ಧರಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನು ಪೋಸ್ಟ್‌ ಮಾಡಿರುವ ಜಗ್ಗೇಶ್‌, “ಡಬ್ಬಿಂಗ್‌ ಹೋರಾಟಕ್ಕೂ ನನಗೂ ಇನ್ನು ಮುಂದೆ ಸಂಬಂಧವಿಲ್ಲ. ಕನ್ನಡಿಗರು ಅವರಿಗೆ ಇಷ್ಟವಾದುದನ್ನು ಪಡೆಯಬಹುದು’ ಎಂದು ಹೇಳಿದ್ದಾರೆ. 

Advertisement

ಜಗ್ಗೇಶ್‌ ಟ್ವೀಟರ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ; “ಮಾನ್ಯರೆ 36 ವರ್ಷ ಕನ್ನಡ ಚಿತ್ರರಂಗದಲ್ಲಿ ದುಡಿದ ನಾನು ಚಿತ್ರರಂಗದ ಸಮಸ್ಯೆಗೆ ಸ್ಪಂದಿಸುವುದು ನನ್ನ ಕರ್ತವ್ಯ. ಉದ್ಯಮ ಕರೆದ ಡಬ್ಬಿಂಗ್‌ ವಿರುದ್ಧದ ಸಭೆಗೆ ನಾನು ಹೋದದ್ದು ನಿಜ. ನಮ್ಮ ಆಕ್ರೋಶವು ನಿಜ. ಆದರೆ ಅದಷ್ಟು ನಿಮ್ಮ ಕಲಾವಿದರು, ತಂತ್ರಜ್ಞರಿಗಾಗಿ ಮಾತ್ರವೆ ವಿನಃ ಯಾವ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ಸಂವಿಧಾನವೇ ಸರಿ ಅಂದ ಮೇಲೆ ನಮ್ಮದೇನು ಇಲ್ಲಾ. ಕನ್ನಡಿಗರಿಗೆ ಏನು ಇಷ್ಟವೋ ಅದನ್ನ ನೋಡಲು ಪಡೆಯಲು ಕನ್ನಡಿಗರು ಸರ್ವಸ್ವತಂತ್ರರು.

ಇನ್ನು ಮುಂದೆ ನನಗೂ ಡಬ್ಬಿಂಗ್‌ಗೂ ಯಾವ ಸಂಬಂಧವು ಇರುವುದಿಲ್ಲ. ನಾನಾಯಿತು ನನ್ನ ಕಲಾ ಕರ್ತವ್ಯವಾಯಿತು. ನನ್ನ ಹಿಂದಿನ ನಡಾವಳಿಗೆ ನಿಮಗೆ ನೋವಾಗಿದ್ದರೆ ಕ್ಷಮೆಯಿರಲಿ. ನಾನು ನಿಮ್ಮವನು. ವಯಸ್ಸಿನಲ್ಲಿ ಹಿರಿಯನಾದರೆ ಸಹೋದರನು ಎಂದು ಭಾವಿಸಿ. ನಗುತ ಸಂತೋಷವಾಗಿ ಬಾಳಿ. ಶುಭಹಾರೈಕೆ ಕನ್ನಡದ ಮನಗಳಿಗೆ. ನಾನು ಬದುಕಿನಲ್ಲಿ ಶ್ರಮದಿಂದ ಮುಂದೆ ಬಂದವನು. ಕನಸಿನಲ್ಲಿಯು ಯಾರಿಗೂ ಕೆಟ್ಟದ್ದು ಬಯಸಿಲ್ಲ, ಬಯಸಲ್ಲಾ.

ರಾಯರ ಭಕ್ತರು ತಪ್ಪು ಮಾಡುವವರಲ್ಲಾ. ನನಗೆ ನನ್ನ ಕನ್ನಡ ಭಾಷೆ ಹಾಗೂ ಕನ್ನಡ ಜನರೇ ದೇವರು ಎಂದು ಭಾವಿಸಿ ಶ್ರದ್ಧೆಯಿಂದ ಯಾವ ತಪ್ಪೂ ಮಾಡದೆ ಬದುಕಿರುವೆ. ನನ್ನ ಮೇಲಿನ ಅಪಾರ್ಥ ಸರಿಪಡಿಸಲು ಹೀಗೆ ಬರೆದಿದ್ದೇನೆ. ಭಿನ್ನಾಭಿಪ್ರಾಯ ಇದ್ದರೆ ಮರೆತುಬಿಡಿ’ ಅಂತ ಜಗ್ಗೇಶ್‌ ಟ್ವೀಟ್‌ ಮಾಡಿದ್ದಾರೆ. ಡಬ್ಬಿಂಗ್‌ ವಿರುದ್ಧ ಧ್ವನಿ ಎತ್ತುತ್ತಿದ್ದ ಜಗ್ಗೇಶ್‌, ಇದೀಗ “ಡಬ್ಬಿಂಗ್‌ ವಿರೋಧಿ ಹೋರಾಟ ಮಾಡಲ್ಲ’ ಎಂದು ಬಹಿರಂಗವಾಗಿ ಹೇಳಿ ಚಿತ್ರೋದ್ಯಮದ ಮಂದಿಗೆ ಅಚ್ಚರಿ ಮೂಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next