Advertisement

ತಪ್ಪಿತಸ್ಥನಲ್ಲ ಎಂದು ತೋರಿಸಲು ಸಾಕಷ್ಟು ಸಾಕ್ಷ್ಯ ನನ್ನಲ್ಲಿದೆ: ಮಲ್ಯ

10:35 AM Jun 14, 2017 | Team Udayavani |

ಲಂಡನ್‌: ಭಾರತದ ಬ್ಯಾಂಕುಗಳಲ್ಲಿ ಬಹುಕೋಟಿ ಮೊತ್ತದ ಸಾಲ ಮಾಡಿ ಇಂಗ್ಲೆಂಡ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ, ತಾವು ತಪ್ಪಿತಸ್ಥ ಅಲ್ಲ ಎಂಬುದನ್ನು ಸಾಬೀತು ಪಡಿಸಲು ಸಾಕಷ್ಟು ಸಾಕ್ಷ್ಯವಿದೆ ಎಂದು ಹೇಳಿದ್ದಾರೆ. 

Advertisement

ಗಡೀಪಾರು ವಿಚಾರದ ಕುರಿತಂತೆ, ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾದ ಬಳಿಕ ಹೊರಗಡೆ ಮಾಧ್ಯಮ ಮಂದಿ ಜೊತೆ ಮಾತನಾಡಿದ ಮಲ್ಯ, “ನನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದೇನೆ. ತಪ್ಪಿತಸ್ಥರಲ್ಲ ಎಂದು ಹೇಳಿಕೊಳ್ಳಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ’ ಎಂದು ಹೇಳಿದ್ದಾರೆ. 

ಎಪ್ರಿಲ್‌ನಲ್ಲಿ ಬಂಧನಕ್ಕೊಳಗಾಗಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಲ್ಯ, ಮಂಗಳವಾರ, ಕೋರ್ಟ್‌ಗೆ ಹಾಜರಾದರು. ಇದೇ ವೇಳೆ ಕೋರ್ಟ್‌ ಅವರ ಜಾಮೀನನ್ನು ಡಿಸೆಂಬರ್‌ 4ರವರೆಗೆ ವಿಸ್ತರಿಸಿದೆ. ಜೊತೆಗೆ ಗಡೀಪಾರು ಕುರಿತ ಮುಂದಿನ ವಿಚಾರಣೆ ಯನ್ನು ಜು.6ಕ್ಕೆ ನಿಗದಿಪಡಿಸಲಾಗಿದೆ. 

ಮಾಧ್ಯಮ ಮಂದಿ ಜೊತೆ ಮಾತನಾಡುತ್ತ  ತಮ್ಮನ್ನು ಸಮರ್ಥಿಸಿಕೊಂಡ ಅವರು, “ಈ ವಿಚಾರದಲ್ಲಿ ನಾನು ಏನೂ ಹೇಳುವುದಿಲ್ಲ. ಆದರೆ, ಈ ಬಗ್ಗೆ ಕೋರ್ಟ್‌ಗೆ ನೀಡಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ’ ಎಂದು ಹೇಳಿದರು. ಅಲ್ಲದೇ “ನಾನು ಯಾವುದೇ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುವುದಿಲ್ಲ. ಯಾಕೆಂದರೆ, ನಾನು ಏನೇ ಹೇಳಿದರೂ ಅದನ್ನು ತಿರುಚಲಾಗುತ್ತದೆ. ನನ್ನತ್ರ ಬೇಕಾದಷ್ಟು ಸಾಕ್ಷ್ಯಗಳಿವೆ. ಅವುಗಳೇ ಮಾತನಾಡಲಿವೆ’ ಎಂದು ಹೇಳಿದ್ದಾರೆ. 

ಜೊತೆಗೆ “ಇತ್ತೀಚೆಗೆ ನಾನು ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಲು ಹೋಗಿದ್ದೆ. ಇದು ಮಾಧ್ಯಮಗಳಲ್ಲಿ ಒಂದು ಬಗೆಯ ಉನ್ಮಾದಕ್ಕೆ ಕಾರಣವಾಯಿತು. ಇದೇ ಕಾರಣಕ್ಕೆ ನಾನು ಏನನ್ನೂ ಹೇಳದೇ ಇರುವುದು ಉತ್ತಮ ಎಂದು ಕೊಂಡಿದ್ದೇನೆ’ ಎಂದು ಮಲ್ಯ ಹೇಳಿದ್ದಾರೆ. 

Advertisement

ಇತ್ತ ಭಾರತದ ಅಧಿಕಾರಿಗಳು ಎರಡನೇ ಬಾರಿಗೆ ಗಡೀಪಾರು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮಲ್ಯ ಅವರ ಪರ ವಕಾಲತ್ತು ನಡೆಸುವ ಜೋಸೆಫ್ ಹೇಗ್‌ ಆರೋನ್‌ಸನ್‌ ಎಲ್‌ಎಲ್‌ಪಿ ಹೇಳಿದೆ. ಭಾರತದ ಪರ ಕ್ರೌನ್‌ ಪ್ರಾಸಿಕ್ಯೂಷನ್‌ ಸರ್ವೀಸ್‌ (ಸಿಪಿಎಸ್‌) ವಾದ ಮಂಡಿಸುತ್ತಿದೆ. 

9000 ಸಾವಿರ ಕೋಟಿ ರೂ. ಸಾಲ ಮಾಡಿ ಪರಾರಿಯಾದ ವಿಚಾರದಲ್ಲಿ ಭಾರತೀಯ ತನಿಖಾ ಸಂಸ್ಥೆಗಳಿಗೆ ಮಲ್ಯ ಬೇಕಾಗಿದ್ದಾರೆ. ಈ ಬಗ್ಗೆ ಗಡೀಪಾರು ವಾರೆಂಟ್‌ ಹೊರಡಿಸಿದ್ದ ಹಿನ್ನೆಲೆಯಲ್ಲಿ ಸ್ಕಾಟ್ಲೆಂಡ್‌ ಯಾರ್ಡ್‌ ಪೊಲೀಸರು ಅವರನ್ನು ಎ.18ರಂದು ಬಂಧಿಸಿದ್ದರು. ಬಳಿಕ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಲಾಗಿತ್ತು. ಗಡೀಪಾರು ಕುರಿತಂತೆ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ ಪ್ರಕರಣವಿದ್ದು, ವಿಚಾರಣೆಯನ್ನು ಈ ಮೊದಲು ಮೇ 17ಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ, ಬಳಿಕ ಅದನ್ನು ಜೂ.13ಕ್ಕೆ ಮುಂದೂಡಲಾಗಿತ್ತು. 

ಕೋಟಿ ಹಣದ ಬಗ್ಗೆ ಕನಸು ಕಾಣಾ¤ ಇರಿ: ಮಲ್ಯ ಧಿಮಾಕು!
“ಕೋಟಿ ಗಟ್ಟಲೆ ಹಣದ ಬಗ್ಗೆ ಕನಸು ಕಾಣಾ¤ ಇರಿ’ ನನ್ನಿಂದ ಏನೂ ಪಡೆಯಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಉದ್ಯಮಿ ವಿಜಯ್‌ ಮಲ್ಯ ಕೂಗಿ ಹೇಳಿದ್ದಾರೆ. ಕೋರ್ಟ್‌ಗೆ ವಿಚಾರಣೆಗೆ ಹಾಜರಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ಎದುರಾದ ಅವರು, ಹೀಗೆ ಕೂಗಿ ಹೇಳಿದ್ದಾರೆ!  

ಮಲ್ಯ ಕರೆತರಲು ಪೂರಕ ಕ್ರಮ 
ಮಲ್ಯರನ್ನು ಭಾರತಕ್ಕೆ ಕರೆತರಲು, ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವುದಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್‌ ಹೇಳಿದ್ದಾರೆ. ಆದರೆ ಅವರ ಗಡೀಪಾರಿಗೆ ಎಷ್ಟು ಸಮಯ ಹಿಡಿಯು ತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. “ಮಲ್ಯ ಗಡೀಪಾರು ಬಗ್ಗೆ ಬೇಕಾದ ಎಲ್ಲ ದಾಖಲೆಗಳನ್ನು ಇಂಗ್ಲೆಂಡ್‌ಗೆ ಕಳಿಸಲಾಗಿದೆ. ಈ ಬಗ್ಗೆ ಅವರು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ನಾವು ಕಾಯುತ್ತಿದ್ದೇವೆ. ಇಂಗ್ಲೆಂಡ್‌ ಈ ಬಗ್ಗೆ ಹಸುರು ನಿಶಾನೆ ತೋರಿದಂತೆಯೇ, ನಾವು ಮರಳಿ ಭಾರತಕ್ಕೆ ಕರೆತರಲಿದ್ದೇವೆ’ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next