ಕೋಲಾರ: ಅಭಿವೃದ್ದಿಯನ್ನು ಮರೆತಿರುವ ಹಾಲಿ ಶಾಸಕರು ಕಳೆದ 4 ವರ್ಷಗಳಿಂದ ಕ್ಷೇತ್ರಕ್ಕೆ ಬಿಡಿಗಾಸು ತಂದಿಲ್ಲ ಆದರೆ ನಾನು ಮುಖ್ಯಮಂತ್ರಿಯವರಿಗೆ ಮನವಿ ಮಾಡಿ 50 ಕೋಟಿ ಅನುದಾನ ತಂದಿದ್ದೇನೆ. ಪ್ರತಿ ಗ್ರಾಮಕ್ಕೂ ಶುದ್ಧ ನೀರಿನ ಘಟಕ ಒದಗಿಸುವ ಸಂಕಲ್ಪ ಮಾಡಿದ್ದೇನೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.
ನಗರದ ಎನ್‌ಜಿಒ ಬಡಾವಣೆ ನಾಗರಿಕರ ನೀರಿನ ಸಮಸ್ಯೆಗೆ ಸ್ಪಂದಿಸಿ ಕೊಳವೆ ಬಾವಿ ಹಾಕಿಸಿಕೊಟ್ಟ ಹಿನ್ನೆಲೆಯಲ್ಲಿ ಈ ಭಾಗದ ನಾಗರಿಕರು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾಗರಿಕರು ಎಷ್ಟೇ ಮನವಿ ಮಾಡಿದರೂ ಹಾಲಿ ಶಾಸಕ ಶ್ರೀನಿವಾಸಗೌಡರು ಸ್ಪಂದಿಸದಿದ್ದಾಗ ನನ್ನ ಗಮನಕ್ಕೆ ತಂದಿದ್ದಾರೆ, ಅವರ ಸಮಸ್ಯೆಗೆ ಪರಿಹಾರ ನೀಡಿದ್ದೇನೆ, ಕೊಳವೆ ಬಾವಿ ತೋಡಿಸಿ ನೀರು ಕೊಟ್ಟಿದ್ದೇನೆ. ಪ್ರತಿ ಗ್ರಾಮಕ್ಕೆ ಶುದ್ಧ ನೀರಿನ ಘಟಕಗಳು ಡಿಜಿಟಲ್ ಗ್ರಂಥಾಲಯಗಳು ವಿದ್ಯುತ್ ದೀಪಗಳು, ಸಿಸಿ ರಸ್ತೆಗಳು ಇನ್ನು ಯಾವುದೇ ರೀತಿಯ ಕೆಲಸಗಳು ಇದ್ದರೂ ಅವುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನದಾಗಿದೆ ಎಂದು ಹೇಳಿದರು.
ಕೋಲಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ತೊಂದರೆಗಳು ಇರಬಾರದು ಅದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು, ನನ್ನನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.
ಈ ಭಾಗದ ಮುಖಂಡ ಗಣೇಶ್ ಮಾತನಾಡಿ, ಕೋಲಾರ ಸುತ್ತಮುತ್ತ ಕೆರೆಗಳು ತುಂಬಿವೆ, ಕೆಸಿ ವ್ಯಾಲಿ ನೀರು ಹರಿಯುತ್ತಿದೆ ಆದರೆ ನಮ್ಮ ಬಡಾವಣೆಯಲ್ಲಿ ಮಾತ್ರ ಟ್ಯಾಂಕರ್ ನೀರೇ ಆಸರೆಯಾಗಿದ್ದು, ಶಾಸಕರು ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ವರ್ತೂರು ಪ್ರಕಾಶ್ ತಮ್ಮ ಮನವಿಗೆ ಸ್ಪಂದಿಸಿ ನೆರವಾಗಿದ್ದು, ಮುಂದಿನ ಚುನಾವಣೆಯಲ್ಲಿ ಅವರನ್ನು ನಾವೆಲ್ಲ ಬೆಂಬಲಿಸುವ ನಿರ್ಧಾರ ಮಾಡಿದ್ದೇವೆ, ಜನ ಕೇಳುವುದು ನೀರು,ಚರಂಡಿ, ರಸ್ತೆ ಆದರೆ ಇಂತಹ ಮೌಲ ಸೌಲಭ್ಯಗಳು ಹಾಲಿ ಶಾಸಕರ ಆಡಳಿತದಲ್ಲಿ ಮರೀಚಿಕೆಯಾಗಿವೆ ಎಂದು ದೂರಿದರು.
ಬಿಜೆಪಿ ಮುಖಂಡರಾದ ಸೂರ್ಯಪ್ರಕಾಶ್, ಕಾರ್ಯನಿರ್ತರ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು. ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರಗೌಡ, ಎನ್‌ಜಿಒ ಲೇಔಟ್ ಮುಖಂಡರಾದ ನಟರಾಜ, ಮುರಳಿ, ಮಂಜುನಾಥ, ಸುರೇಶ್ ಸಿಂಗ್, ವೆಂಕಟೇಶ್, ಮಣಿ,ಲಕ್ಷ್ಮಣ್, ಕೋಡಿ ಕಣ್ಣೂರು ಬಾಬು, ಅರುಣ್, ಸರಸ್ವತಿ ಮತ್ತಿತರರಿದ್ದರು.