ಹಾಯ್ ಅಪರಿಚಿತೆ,
ನೀ ಯಾರೆಂದು ನನಗೆ ತಿಳಿಯದು, ನಾ ಯಾರೆಂದು ನಿನಗೂ ತಿಳಿಯದು. ಆದರೂ ಮೊದಲ ನೋಟದಲ್ಲೇ ನಿನಗೆ ಮನಸೋತುಬಿಟ್ಟೆ. ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ, ಹಾಗೆ.
ಆವತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನೀನು ಎನ್.ಸಿ.ಸಿ. ಪರೇಡ್‌ನಲ್ಲಿ ಭಾಗವಹಿಸಲು ಬಂದಿದ್ದೆ. ನಾನು ಫೋಟೋ ಕವರೇಜ್ ಮಾಡಲು ಫೋಟೋಗ್ರಾಫರ್ ಆಗಿ ಅಲ್ಲಿಗೆ ಬಂದಿದ್ದೆ. ನನ್ನ ಪಾಡಿಗೆ ನಾನು ಫೋಟೋ ತೆಗೆಯುತ್ತಿದ್ದಾಗ. ನೂರಾರು ಜನರ ಮಧ್ಯೆ ನೀನೊಬ್ಬಳು ಮಾತ್ರ ಕ್ಯಾಮೆರಾ ಕಣ್ಣಿಗೆ ವಿಶೇಷ ಆಕರ್ಷಣೆಯಾಗಿ ಕಾಣಿಸಿದೆ. ಯಾಕಂದ್ರೆ, ಕ್ಯಾಮೆರಾ ಕಡೆ ತಿರುಗಿ ನೋಡುತ್ತಾ ನೀನು ಚಿತ್ರ-ವಿಚಿತ್ರವಾಗಿ ಪೋಸ್ ಕೊಡುತ್ತಿದ್ದುದೇ ನಿನ್ನ ಮೇಲೆ ನನ್ನ ಕಣ್ಣು ಬೀಳಲು ಕಾರಣ. ನೀನು ಸ್ವಲ್ಪ ಮರೆಯಾದರೂ, ನನ್ನ ಕ್ಯಾಮೆರಾವಷ್ಟೇ ಅಲ್ಲ, ಕಣ್ಣುಗಳೂ ನಿನ್ನನ್ನು ಹುಡುಕಲು ಶುರುಮಾಡುತ್ತಿದ್ದವು.
ಹಾಗೆ ಬೆಳಗ್ಗೆ 9 ಗಂಟೆಯಲ್ಲಿ ನಮ್ಮಿಬ್ಬರ ನಡುವೆ ಸಂಭವಿಸಿದ ಆ ಆಕರ್ಷಣೆ, ಮಧ್ಯಾಹ್ನ 2 ಗಂಟೆಯೊಳಗೆ ಮಾತಿನ ದಾರಿ ಕಂಡುಕೊಂಡಿತ್ತು. ನೀನೇ ಬಳಿಗೆ ಬಂದು, ನೀವು ತುಂಬಾ ಫೋಟೋಸ್ ತೆಗೆದಿದ್ದೀರಲ್ವಾ? ಅದ್ರಲ್ಲಿ ನಾನಿರೋ ಎಲ್ಲ ಫೋಟೋಗಳನ್ನು ನನಗೆ ಕಳಿಸಿ ಪ್ಲೀಸ್ ಎಂದು ಹೇಳಿ ಜಿಂಕೆಯಂತೆ ಓಡಿಹೋದೆ. ನಾನು ಮಾತು ಶುರು ಮಾಡುವುದರೊಳಗೆ ನೀನು ಕಣ್ಮರೆಯಾಗಿದ್ದೆ.
ಆ ಜನಸಾಗರದಲ್ಲಿ ನಿನ್ನನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಾಗಿರಲಿಲ್ಲ. ನಿನ್ನ ಹೆಸರು ಗೊತ್ತಿಲ್ಲ, ಯಾವ ಕಾಲೇಜಿನವಳೆಂದೂ ಗೊತ್ತಿಲ್ಲ. ಫೋಟೋ ಕಳಿಸಿ ಅಂತ ಹೇಳಿ ಓಡಿ ಹೋದರೆ, ಕಳಿಸುವುದಾದರೂ ಎಲ್ಲಿಗೆ? ಅವತ್ತಿನಿಂದ, ನಾನೂ ನಿನ್ನನ್ನು ಹುಡುಕಲು ಬಹಳಷ್ಟು ಪ್ರಯತ್ನ ಮಾಡಿದ್ದೇನೆ. ಯಾವ್ಯಾವುದೋ ನೆಪ ಮಾಡಿಕೊಂಡು ಐದಾರು ಕಾಲೇಜುಗಳ ಮೆಟ್ಟಿಲು ಹತ್ತಿ ಇಳಿದಿದ್ದೇನೆ. ಆದರೂ ನಿನ್ನನ್ನು ಪತ್ತೆ ಹಚ್ಚಲಾಗಲಿಲ್ಲ. ನೀನು ಬೇಗ ಸಿಗಲೇಬೇಕು. ಯಾಕಂದ್ರೆ, ನಿನ್ನ ಫೋಟೋಸ್ ನನ್ನ ಹತ್ತಿರ ಇದೆ, ನನ್ನ ಹೃದಯ ನಿನ್ನ ಬಳಿ ಉಳಿದುಕೊಂಡಿದೆ.
ಯಾರಿಗೆ, ಯಾರ ಮೇಲೆ, ಯಾವ ಸಮಯದಲ್ಲಿ ಪ್ರೀತಿ ಉಂಟಾಗುತ್ತದೆ ಅಂತ ಯಾರಿಗೂ ಹೇಳಲಾಗುವುದಿಲ್ಲ. ನನಗೆ ನಿನ್ನ ಮೇಲೆ ಅರ್ಧ ದಿನದಲ್ಲಿ ವಿಪರೀತವಾಗಿ ಪ್ರೀತಿಯಾಗಿದೆ. ಮುದ್ದಾದ ನಿನ್ನ ಮುಖವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಅದನ್ನು ಕಣ್ಣೊಳಗೆ ಮತ್ತು ಮನದೊಳಗೆ ಶಾಶ್ವತವಾಗಿ ಉಳಿಸಿಕೊಂಡಿದ್ದೇನೆ. ಒಂದು ಎಕ್ಸ್‌ಟ್ರಾ ಕಾಪಿಗಷ್ಟೇ ಫ್ರೆಮ್ ಹಾಕಿಸಿ, ಅದನ್ನು ಕೊಡುವ ಉದ್ದೇಶದಿಂದ ನಿನಗಾಗಿ ಕಾಯ್ತಾ ಇದ್ದೀನಿ. ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಡಿಪಿ,ಸ್ಟೇಟಸ್ ಹಾಕೋಕೆ ಒಂದು ವರ್ಷಕ್ಕಾಗುವಷ್ಟು ಫೋಟೋಸ್ ಇದೆ ಮಾರಾಯ್ತಿ… ಅದರ ಆಸೆಗಾದ್ರೂ ನೀನೇ ನನ್ನನ್ನು ಹುಡುಕಿಕೊಂಡು ಬಾ..
ಇಂತಿ ನಿನಗಾಗಿ ಕಾಯುತ್ತಿರುವ
ಗಿರೀಶ್ ಚಂದ್ರ ವೈ.ಆರ್.