ದಾವಣಗೆರೆ: ನಮ್ಮ ದೇಶದ ಜನರ ಆರೋಗ್ಯ ಸ್ಥಿತಿ ಗಣನೀಯವಾಗಿ ಸುಧಾರಣೆ ಕಂಡಿದೆ. ಕಳೆದ 2 ದಶಕಗಳಲ್ಲಿ ಅನೇಕ ಮಾರಕ ರೋಗಗಳು ಕಣ್ಮರೆಯಾಗಿವೆ. ಲಕ್ಷಾಂತರ ಭಾರತೀಯರನ್ನು ಸಂಹರಿಸಿದ ಪ್ಲೇಗ್, ಮಕ್ಕಳ ಆರೋಗ್ಯ ಕುಂಟಿತಗೊಳಿಸಿದ್ದ ಪೋಲಿಯೋ ಈಗ ಮನುಜ ಕುಲದಿಂದ ದೂರಾಗಿವೆ. ಇದೀಗ ಭಾರತ ಪೋಲಿಯೋಮುಕ್ತ ದೇಶವಾಗಿ ಮಾರ್ಪಟ್ಟಿದೆ.
ಪೋಲಿಯೋದಂತೆಯೇ ಈಗ ದಡಾರಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಎಂಎಂಆರ್ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಪೋಷಕರು ತಮ್ಮ 9 ತಿಂಗಳಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕಸರ್ಕಾರದ ಈ ಪ್ರಯತ್ನಕ್ಕೆ ಬೆಂಬಲ ನೀಡಬೇಕಿದೆ ಎಂಬುದಾಗಿ ಮನವಿ ಮಾಡಿರುವ ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹಿರಿಯ ಮಕ್ಕ ತಜ್ಞ ಡಾ| ಜಿ. ಗುರುಪ್ರಸಾದ್, ದಡಾರ-ರುಬೆಲ್ಲಾ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.
ದಡಾರ ಅಂದರೇನು?: ಆಡುಭಾಷೆಯಲ್ಲಿ ಮೈ ಮೇಲೆ ಅಮ್ಮ ಕಾಣಿಸಿಕೊಳ್ಳುವುದು ಎಂದು ಕರೆಸಿಕೊಳ್ಳುವ ಈ ಕಾಯಿಲೆ ಮಕ್ಕಳು ಮರಣ ಹೊಂದುವ ಸಾಧ್ಯತೆ ಸಹ ಇರುತ್ತದೆ. ಈ ಕಾಯಿಲೆ ಆರಂಭವಾದಾಗ ಶೀತ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತವೆ. ನಂತರ ಮೈ ತುಂಬಾ ಕೆಂಪು ಬಣ್ಣದ ದುಂಡಾಕಾರದ ಗುಳೆ Û(ಅಮ್ಮ) ಗೋಚರಿಸುತ್ತವೆ. ಇದರಿಂದ ಚೇತರಿಸಿಕೊಂಡರೂ ಅನೇಕ ಮಕ್ಕಳು ನಿಮೋನಿಯಾ, ವಾಂತಿ-ಬೇಧಿಯಿಂದ ನರಳುತ್ತಾರೆ. ಇದು ಮಕ್ಕಳು ಸಾವಿಗೆ ಕಾರಣವಾಗಲಿದೆ.
ರುಬೆಲ್ಲಾ ಕುರಿತು ಒಂದಿಷ್ಟು: ಜರ್ಮನ್ ರುಬೆಲ್ಲಾ ಒಂದು ಅತೀ ಸಾಮಾನ್ಯ ಕಾಯಿಲೆ. ಸ್ವಲ್ಪಮಟ್ಟಿನ ಜ್ವರ, ಶೀತ, ಕೆಮ್ಮಿನಿಂದ ಆರಂಭವಾಗುವ ಕಾಯಿಲೆ ಬಂದಾಗ ಕುತ್ತಿಗೆ ಇತರೆ ಜಾಗಗಳಲ್ಲಿ ಗಂಟು ಕಾಣಿಸಿಕೊಳ್ಳುತ್ತವೆ. ಈ ಕಾಯಿಲೆ ಕಾಣಿಸಿಕೊಂಡಾಗ ಮಕ್ಕಳು ಸಾಯುವುದಿಲ್ಲ. ಆದರೆ, ಗರ್ಬಿಣಿಯ ಹೊಟ್ಟೆಯಲ್ಲಿರುವ ಹಸುಳೆಯ ಮೇಲೆ ದುಷ್ಪರಿಣಾಮ ಬೀರಬಹುದು. ಇದರಿಂದ ಮಗು ಸಾವನ್ನಪ್ಪಬಹುದು. ಇಲ್ಲವೇ ಮಗುವಿನ ಬೆಳವಣಿಗೆ ಕುಂಟಿತಗೊಳ್ಳಬಹುದು.ಹೃದಯ, ಕಣ್ಣು, ಕಿವಿ ಮೇಲೆ ದುಷ್ಪರಿಣಾಮ ಬೀರಬಹುದು.
ಎಂಎಂಆರ್ ಚುಚ್ಚುಮದ್ದು: ದಡಾರ ಹಾಗೂ ಜರ್ಮನ್ ರುಬೆಲ್ಲಾ ಕಾಯಿಲೆಗಳನ್ನು ಲಸಿಕೆ ನೀಡುವುದರ ಮೂಲಕ ನಿಯಂತ್ರಿಸಬಹುದು ಮತ್ತುತಡೆಗಟ್ಟಬಹುದು. ಕಳೆದ 2 ದಶಕಗಳಿಂದ ಎಂಎಂಆರ್ ಲಸಿಕೆಯನ್ನು ಚುಚ್ಚುಮದ್ದು ರೂಪದಲ್ಲಿ ನೀಡುವ ಮೂಲಕ ಇದನ್ನು ತಡೆಯಬಹುದು. ಈಗಾಗಲೇದೇಶದ ಶೇ.70-80ರಷ್ಟು ಮಕ್ಕಳಿಗೆ ಈ ಲಸಿಕೆ ಹಾಕಿಸಲಾಗಿದೆ. 9ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ಹಾಕಿಸಬೇಕು. ಆಗ ಕಾಯಿಲೆ ಕಾಣಿಸಿಕೊಳ್ಳುವುದಿಲ್ಲ.
ಲಸಿಕೆ ಯಾವಾಗ? ಎಲ್ಲಿ ಹಾಕ್ತಾರೆ?: ಸರ್ಕಾರದಿಂದ ಫೆ.7ರಿಂದ 28ರ ವರೆಗೆ ಉಚಿತ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲಾ ಮಕ್ಕಳ ಆರೋಗ್ಯ ಕೇಂದ್ರ, ಮಕ್ಕಳ ತಜ್ಞರು ಎಂಎಂಆರ್ ಲಸಿಕೆ ನೀಡಲಿದ್ದಾರೆ. ಈಗಾಗಲೇ ಲಸಿಕೆ ಕೊಡಿಸಿದ್ದರೂ ಇನ್ನೊಮ್ಮೆ ಲಸಿಕೆ ಕೊಡಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಬೀರದು. ಲಸಿಕೆ ನೀಡಿದಾಗ ಒಂದಿಷ್ಟು ಜ್ವರ ಕಾಣಸಿಕೊಳ್ಳಬಹುದಷ್ಟೇ. ಎಲ್ಲಾ ಪೋಷಕರು ತಮ್ಮ ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಈ ಲಸಿಕೆ ಕೊಡಿಸಬೇಕು.