ಮುಂಬೈ: ಭಾರತ ಕ್ರಿಕೆಟ್ ತಂಡವೆಂದರೆ ದೇವರುಗಳೇ ತುಂಬಿರುವ ಜಾಗ. ಒಮ್ಮೆ ತಂಡದಲ್ಲಿ ಪಡೆದರೂ ಸಾಕು ಅನ್ನುವಷ್ಟು ಪ್ರತಿಭಾವಂತರಿಂದ ತುಂಬಿ ತುಳುಕುತ್ತಿದೆ ತಂಡ. ಅಂತಹದ್ದರಲ್ಲಿ ತಂಡಕ್ಕೆ ಆಯ್ಕೆಯಾಗಿ ಭರ್ಜರಿ ಯಶಸ್ಸನ್ನೂ ಕಂಡರೆ ಆತನ ವರ್ತನೆ ಹೇಗಿರಬಹುದು? ಆದರೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ಹಾಗಿಲ್ಲವೇ ಇಲ್ಲ. ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ಮುಗಿದ ಟಿ20 ಸರಣಿಯಲ್ಲಿ ವೇಗದ ಬೌಲಿಂಗ್ ಮೂಲಕ ಮಿಂಚಿ ಭಾರೀ ಭರವಸೆ ಮೂಡಿಸಿದ ಅವರು ಮುಂಬೈ ನಿಲ್ದಾಣಕ್ಕೆ ಬಂದಿಳಿದ ನಂತರ ಮನೆಗೆ ತೆರಳಿದ್ದು ಅಲ್ಲಿನ ಸ್ಥಳೀಯ ಟ್ರೈನ್ ಮೂಲಕ!
ಸದಾ ಜನರಿಂದ ತುಂಬಿ ತುಳುಕುವ ಮುಂಬೈ ಟ್ರೈನ್‌ಗಳು ವಿಶ್ವಪ್ರಸಿದ್ಧ! ಅದೇ ಟ್ರೈನ್‌ನಲ್ಲಿ ಶಾರ್ದೂಲ್ ಠಾಕೂರ್ ವರ್ಷಗಟ್ಟಲೆ ಅಭ್ಯಾಸಕ್ಕಾಗಿ ಅಲೆದಾಡಿದ್ದಾರೆ. ಪಾಲರ್‌ನಲ್ಲಿರುವ ತಮ್ಮ ಮನೆಯಿಂದ ಮುಂಬೈನಲ್ಲಿರುವ ವಾಂಖೇಡೆ ಮೈದಾನಕ್ಕೆ ಪ್ರಯಾಣಿಸಿದ್ದಾರೆ. ಅವರು ವಿಶ್ವಪ್ರಸಿದ್ಧರಾದ ನಂತರವೂ ಈ ಅಭ್ಯಾಸ ಬಿಟ್ಟಿಲ್ಲ. ನಾನ್ಯಾವತ್ತೂ ಯಶಸ್ಸಿನ ಪಿತ್ಥ ತಲೆಗೇರಿಸಿಕೊಳ್ಳುವುದಿಲ್ಲ, ನೆಲದಲ್ಲೇ ಇರುತ್ತೀನಿ ಎಂದು ಹೇಳಿದ್ದಾರೆ.
ಹಾಗಾದರೆ ಶಾರ್ದೂಲ್ ಪ್ರಯಾಣ ಹೇಗಿತ್ತು ಎಂಬುದು ನಿಮ್ಮ ಕುತೂಹಲವಾಗಿದ್ದರೆ… ಅದನ್ನು ಅವರ ಮಾತಿನಲ್ಲೇ ಕೇಳಿ. ನಾನು ಅಂಧೇರಿಯಲ್ಲಿ ಟ್ರೈನ್ ಹತ್ತಿದೆ. ಕೆಲವರು ನನ್ನನ್ನೇ ನೋಡುತ್ತಿದ್ದರು. ನಾನು ಶಾರ್ದೂಲ್ ಹೌದೇ ಎಂದು ಪರೀಕ್ಷಿಸುತ್ತಿದ್ದರು. ಕೆಲ ಹುಡುಗರು ಗೂಗಲ್‌ನಲ್ಲಿ ನನ್ನ ಚಿತ್ರವನ್ನು ವೀಕ್ಷಿಸಿ ಖಚಿತಪಡಿಸಿಕೊಳ್ಳುವುದಕ್ಕೆ ಯತ್ನಿಸುತ್ತಿದ್ದರು. ಖಚಿತವಾದ ನಂತರ ಅಲ್ಲಿದ್ದವರೆಲ್ಲ ಸೆಲ್ಫಿಗಾಗಿ ಮುಗಿಬಿದ್ದರು. ದಯವಿಟ್ಟು ಪಾಲರ್ ಬರುವವರೆಗೆ ಕಾಯಿರಿ ಎಂದು ನಾನು ವಿನಂತಿಸಿಕೊಂಡೆ. ಅನಂತರ ಎಲ್ಲರೊಂದಿಗೂ ಸೆಲ್ಫಿಗೆ ತೆಗೆಸಿಕೊಂಡೆ ಎಂದು ಅವರು ಹೇಳಿಕೊಂಡಿದ್ದಾರೆ.
ಕೆಲವು ಹಳೆಯ ಪ್ರಯಾಣಿಕರು ನಾನು ವರ್ಷಗಟ್ಟಲೆ ಇದೇ ಟ್ರೈನ್‌ನಲ್ಲಿ ಓಡಾಡುತ್ತಿದ್ದುದನ್ನು ನೆನಪಿಸಿಕೊಂಡರು. ಇನ್ನು ಕೆಲವರು ನಾನು ಅವರೊಂದಿಗೆ ಈಗಲೂ ಪ್ರಯಾಣಿಸುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದರು. ಅದೇನೆ ಇರಲಿ ನನ್ನ ಕಾಲುಗಳು ಈಗಲೂ ನೆಲದ ಮೇಲಿವೆ. ನಾನು ಯಾವುದನ್ನೂ ಸುಲಭವಾಗಿ ಪಡೆದುಕೊಳ್ಳಲಿಲ್ಲ. ಅದಕ್ಕಾಗಿ ಬಹಳ ಶ್ರಮ ಹಾಕಿದ್ದೇನೆ ಎಂದು ಶಾರ್ದೂಲ್ ಹೇಳಿಕೊಂಡಿದ್ದಾರೆ.
ಹಿಂದೆ ತನ್ನನ್ನು ಅಣಕಿಸುತ್ತಿರುವವರನ್ನೂ ಶಾದೂìಲ್ ನೆನಪಿಸಿಕೊಂಡರು. ನೀನು ಯಾಕೆ ಅಷ್ಟು ದೂರದಿಂದ ಬಂದು ಭಾರತ ತಂಡದ ಪರ ಆಡುತ್ತೇನೆಂದು ಒದ್ದಾಡುತ್ತೀಯಾ. ಸಮಯ ಯಾಕೆ ಹಾಳು ಮಾಡಿಕೊಳ್ತೀಯಾ ಎಂದು ಪ್ರಶ್ನಿಸಿದ್ದರು. ಆಗ ನನಗೆ ಏನು ಮಾಡಬೇಕೆಂದು ಗೊತ್ತಿತ್ತು. ಕ್ರಿಕೆಟ್‌ಗಾಗಿಯೇ ನನ್ನ ಜೀವನವನ್ನು ಒಪ್ಪಿಸಿಕೊಂಡಿದ್ದೇನೆಂದು ಠಾಕೂರ್ ಹೇಳಿದ್ದಾರೆ.