ಮುಳಬಾಗಿಲು: ತೋಟಗಾರಿಕೆ ಇಲಾಖೆ ಖಾತೆ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಸಚಿವ ಮುನಿರತ್ನ ಹೇಳಿದರು. ಕೋಲಾರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ನಂತರ ಮೊದಲು ಬಾರಿಗೆ ತಾಲೂಕಿನ ಕುರುಡುಮಲೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ
ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂದಿನ ದಿನ ಗಳಲ್ಲಿ ಪಕ್ಷದ ಹಿರಿಯರ ಮಾರ್ಗದರ್ಶನದಂತೆ ಅಭಿವೃದ್ಧಿ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದರು. ತೋಟಗಾರಿಕೆ ಇಲಾಖೆ ಖಾತೆ ನೀಡಿದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಧನ್ಯವಾದ ತಿಳಿಸಿದ ಅವರು, ಜನರ ಸೇವೆ ಮಾಡಲು ಖಾತೆ ಯಾವುದಾದರೂ ಸರಿ. ಹಿರಿಯರ ಅನುಭವ ಪಡೆದು ಕೆಲಸ ಮಾಡುವೆ, ಖಾತೆ ಇರುವುದು ಜನರ ಸೇವೆಗೆ, ಹೀಗಾಗಿ ಅತೃಪ್ತಿಯ ಪ್ರಶ್ನೆ ಇಲ್ಲ, ರೈತರ ಸೇವೆ ಮಾಡಲು ಸಿಕ್ಕಿರುವ ಖಾತೆ ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸುವೆ ಎಂದು ಹೇಳಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಮುಂದೆ ಅವರಿಗೆ ಒಳ್ಳೆಯದಾಗುತ್ತೆ ಎಂದ ಅವರು, ಪಕ್ಷದಲ್ಲಿ ಅಸಮಾಧಾನ ಇರುವ ಬಗ್ಗೆ ನನಗೆ ಮಾಹಿತಿ ಇಲ್ಲ,ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಮನೆ ಮೇಲೆ ಇ.ಡಿ. ದಾಳಿ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರತಿ ಬಾರಿ ದಾಳಿ ಆದಾಗ ಕಾಂಗ್ರೆಸ್ ಆರೋಪ ಮಾಡೋದು ಸಹಜ. ನಾವೆಲ್ಲರೂ ಕಾನೂನು ಚೌಕಟ್ಟಿನಲ್ಲಿ ಇದ್ದೀವಿ, ತನಿಖೆ ಆದ ಮೇಲೆ ಎಲ್ಲವೂ ಗೊತ್ತಾಗಲಿದೆ ಎಂದರು.
ನನ್ನ ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದರು. ವಿನಾಯಕ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ದೇವಾಲಯ ಪ್ರದಕ್ಷಿಣೆ ಹಾಕುವ ಸಂದರ್ಭದಲ್ಲಿ ಸಂಸದ ಎಸ್. ಮುನಿಸ್ವಾಮಿ ಅವರು ಶಾಸಕ ಎಚ್.ನಾಗೇಶ್ ಅವರನ್ನು ಕಂಡು ಅಣ್ಣ ದೇವಾಲಯದ ಒಳಗೆ ಬಂದಾಗ ಶೂ ಜೊತೆ ಸಾಕ್ಸ್ ಅನ್ನು ಹೊರಗೆ ಬಿಟ್ಟು ಬರಬೇಕು. ಬರಿಗಾಲಲ್ಲಿ ದೇವಾಲಯ ಪ್ರದಕ್ಷಿಣೆ ಮಾಡಿದರೆ ಮಾಡಿದ ಪಾಪಗಳು ಕಳೆದು ಹೋಗುತ್ತವೆ ಎಂದು ವ್ಯಂಗ್ಯವಾಡಿದರೆ.ನಾನುಪಾಪಗಳು ಮಾಡಿದರೆ
ತಾನೇ ಅವು ಪರಿಹಾರ ಆಗುವುದು ಎಂದು ಶಾಸಕ ನಾಗೇಶ್ ನಗು ನಗುತ್ತಲೇ ಪ್ರತ್ಯುತ್ತರ ನೀಡಿದರು. ಈ ಮಾತು ಗಳು ಕೆಲಕಾಲ ನಗುವಿನಲ್ಲಿ ತೇಲಾಡಿಸಿದ್ದು ವಿಶೇಷವಾಗಿತ್ತು.
ಶಾಸಕ ಎಚ್.ನಾಗೇಶ್,ಸಂಸದಎಸ್.ಮುನಿಸ್ವಾಮಿ, ತಹಶೀಲ್ದಾರ್‌ಕೆ.ಎನ್.ರಾಜಶೇಖರ, ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ, ತಾಲೂಕು ಮಾಜಿ ಅಧ್ಯಕ್ಷ ದೊಡ್ಡ ಹತ್ತಿಹಳ್ಳಿ ವೆಂಕಟರವಣ, ಪುಣ್ಯಹಳ್ಳಿ ನಾಗಾರ್ಜುನ, ಜಿಲ್ಲಾ ಒಬಿಸಿ ಮೋರ್ಚಾಧ್ಯಕ್ಷ ಕೋಳಿ ನಾಗರಾಜ್, ಹೆಬ್ಬಣಿ ರವಿ, ರೈತ ಮೋರ್ಚಾ ಸೋಮಶೇಖರ, ಕೃಷ್ಣಮೂರ್ತಿ, ಪಲ್ಲಿಗರಪಾಳ್ಳ ರಮೇಶ್ ಇತರರಿದ್ದರು