Advertisement

ಜನಪ್ರಿಯತೆಯ ಜೊತೆಗೆ ಹೊಸ ಬದುಕು ಸಿಕ್ತು

11:34 AM Jan 31, 2017 | Team Udayavani |

ಇದು ನನ್ನ ಗೆಲುವಲ್ಲ ಕನ್ನಡಿಗರ ಗೆಲುವು ಎಂದು ಸೇವ್‌ ಆದಾಗಲ್ಲೆಲ್ಲಾ ಹೇಳುತ್ತಾ, ತಪ್ಪಾದಾಗ “ಖಂಡಿಸ್ತೀನಿ’ ಎಂದು ಕೂಗುತ್ತಾ, “ಬಿಗ್‌ ಬಾಸ್‌’ ಮನೆಯಲ್ಲಿ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆದ ಪ್ರಥಮ್‌ “ಬಿಗ್‌ ಬಾಸ್‌ ಸೀಸನ್‌-4’ನ ವಿನ್ನರ್‌ ಆಗಿದ್ದಾರೆ. ಮನೆಯ ಬಹುತೇಕರ ವಿರೋಧ ಕಟ್ಟಿಕೊಂಡೇ ಬಂದ ಪ್ರಥಮ್‌ಗೆ ಹೊರಗಡೆ ಅಭಿಮಾನಿಗಳು ಸಂಘ ಕಟ್ಟಿದ್ದಾರೆ. ಗೆದ್ದ ದುಡ್ಡನ್ನು ಒಳ್ಳೆಯ ಕೆಲಸಗಳಿಗಾಗಿ ಬಳಸುವುದಾಗಿ “ಬಿಗ್‌ ಬಾಸ್‌’ ವೇದಿಕೆಯಲ್ಲೇ ಘೋಷಿಸಿದ ಪ್ರಥಮ್‌ ಉದಯವಾಣಿಯ “ಚಿಟ್‌ ಚಾಟ್‌’ನಲ್ಲಿ ಮಾತನಾಡಿದ್ದಾರೆ.

Advertisement

* “ಬಿಗ್‌ ಬಾಸ್‌’ ಗೆದ್ದಿದ್ದೀರಿ ಹೇಗನಿಸ್ತಾ ಇದೆ?
ಕೊಳ್ಳೇಗಾಲ ಟಿ.ನರಸೀಪುರದ ನಾನು ಇವತ್ತು “ಬಿಗ್‌ ಬಾಸ್‌’ ಗೆದ್ದಿದ್ದೇನೆಂದರೆ ಅದರರ್ಥ ಒಬ್ಬ ಸಾಮಾನ್ಯ ಕೂಡಾ “ಬಿಗ್‌ ಬಾಸ್‌’ಗೆ ಹೋಗಬಹುದು, ಟ್ರೋಫಿ ಗೆಲ್ಲಬಹುದೆಂದು ತೋರಿಸುತ್ತದೆ. ಕನ್ನಡಿಗರ ಪ್ರೀತಿ, ನನ್ನ ಮೇಲೆ ಅವರಿಟ್ಟ ವಿಶ್ವಾಸದಿಂದ ಇವತ್ತು ನಾನು ಗೆದ್ದಿದ್ದೇನೆ.

* ಪ್ರಥಮ್‌ ಇರೋದೇ ಹೀಗೇನಾ?
ಖಂಡಿತಾ. ನಾನು ಇರೋದೇ ಹೀಗೆ. ಜನ ನೋಡುವ ರಿಯಾಲಿಟಿ ಶೋ ಅದು. ಅಲ್ಲಿ ಮುಖವಾಡ ಹಾಕಿಕೊಂಡು ಬದುಕಲು ಸಾಧ್ಯವಿಲ್ಲ. ನಾನು ಯಾವತ್ತೂ ಯಾರ ಬಗ್ಗೇನೂ ಹಿಂದಿನಿಂದ ಮಾತನಾಡಿಲ್ಲ. ಜನ ನನ್ನನ್ನು ಉಳಿಸಿಕೊಂಡು ಬರುತ್ತಿರುವಾಗ ನಾನು ಕೂಡಾ ಅವರಿಗೆ ಪ್ರಾಮಾಣಿಕವಾಗಿರಬೇಕಲ್ವಾ?

* ನಿಮಗೆ ಅಭಿಮಾನಿ ಸಂಘಗಳೇ ಹುಟ್ಟಿಕೊಂಡಿವೆ?
ನಾನು ಅವರನ್ನೆಲ್ಲಾ ಅಭಿಮಾನಿ ಎಂದು ಕರೆಯಲು ಇಚ್ಛಿಸುವುದಿಲ್ಲ. ನನ್ನನ್ನು ಪ್ರೀತಿಸುವ ಮಂದಿ ಎನ್ನುತ್ತಾರೆ. ಅವರ ಪ್ರೀತಿಗೆ ನಾನು ಆಭಾರಿ

* “ಬಿಗ್‌ ಬಾಸ್‌’ನಿಂದ ಬಂದ ಹಣವನ್ನು ದಾನ ಮಾಡುವ ಬಗ್ಗೆ?
“ಬಿಗ್‌ ಬಾಸ್‌’ನಲ್ಲಿ ನನ್ನಷ್ಟು ಬಾರಿ ಯಾರು ಎಲಿಮೇಟ್‌ ಆದಂತಿಲ್ಲ. ಆದರೆ, ಅಷ್ಟು ಬಾರಿ ಎಲಿಮೇಟ್‌ ಆದರೂ ನಾನು ಸೇವ್‌ ಆದೆ. ಕಾರಣ ಕನ್ನಡಿಗರ ಪ್ರೀತಿ. ಅವರು ತಮ್ಮ ದುಡ್ಡು ಹಾಕಿ ಮೆಸೇಜ್‌ ಮಾಡಿದ್ದರಿಂದ ತಾನೇ ನಾನು ಸೇವ್‌ ಆಗಿದ್ದು. ಕನ್ನಡಿಗರ ಪ್ರೀತಿ ದೊಡ್ಡದು. ಆಗ ನನಗೆ ಅನಿಸಿತು, ಕನ್ನಡಿಗರಿಗಾಗಿ, ಕಷ್ಟದಲ್ಲಿರುವವರಿಗಾಗಿ “ಬಿಗ್‌ ಬಾಸ್‌’ನಿಂದ ಬಂದ ದುಡ್ಡನ್ನು ಬಳಸಬೇಕೆಂದು ನಿರ್ಧರಿಸಿದೆ.

Advertisement

ಸಮಾಜದ ಎಲ್ಲಾ ವರ್ಗದಲ್ಲೂ ಕಷ್ಟದಲ್ಲಿರುವ ಮಂದಿ ಇದ್ದಾರೆ. ಅದರಲ್ಲಿ ಅಂಗವಿಕಲ ಹೆಣ್ಣುಮಕ್ಕಳನ್ನು ಮದುವೆಯಾಗುವವರಿಗೆ 50 ಸಾವಿರ ಹಾಗೂ ಇವತ್ತಿಗೂ ವಿದ್ಯುತ್‌ ಕಾಣದ ಕೆಲವು ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ನಿರ್ಧರಿಸಿದ್ದೇನೆ. ಜೊತೆಗೆ ರೈತರಿಗೆ ಹಾಗೂ ಹುತಾತ್ಮ ಸೈನಿಕರ ಕುಟುಂಬಗಳಿಗೂ ನೆರವು ನೀಡಬೇಕೆಂದು ನಿರ್ಧರಿಸಿದ್ದೇನೆ. ಬಿಗ್‌ಬಾಸ್‌ನಿಂದ ನಾನು ಗೆದ್ದ ಹಣ ಒಳ್ಳೆಯ ಕಾರ್ಯಕ್ಕೆ ಉಪಯೋಗವಾಗಬೇಕೆಂಬುದು.

* ನಿಮ್ಮ ಆರ್ಥಿಕ ಸ್ಥಿತಿ ಹೇಗಿದೆ?
ನಿಜ ಹೇಳಬೇಕೆಂದರೆ ನಾನು ತುಂಬಾ ಶ್ರೀಮಂತ ಅಲ್ಲ. ಇವತ್ತಿಗೂ ವ್ಯವಸಾಯ ಮಾಡಿಕೊಂಡಿರುವ ಕುಟುಂಬ ನಮ್ಮದು. ಆದರೆ ನನಗೆ ಸಿನಿಮಾ ಮೇಲೆ ಆಸಕ್ತಿ. ಒಳ್ಳೆಯ ಉದ್ದೇಶದೊಂದಿಗೆ ಹೋಗಿದ್ದೆ. ಅದು ಈಗ ಈಡೇರಿದೆ. 

* ನೀವು “ಬಿಗ್‌ ಬಾಸ್‌’ ಮನೆಯೊಳಗೆ ಹೋದ ಉದ್ದೇಶವೇನು?
ನನಗೆ ಸಿನಿಮಾ ಮೇಲೆ ಕ್ರೇಜ್‌ ಇತ್ತು. ಆದರೆ, ಸಿನಿಮಾ ಮಾಡಬೇಕೆಂದರೆ ಒಳ್ಳೆಯ ಸ್ಕ್ರಿಪ್ಟ್ ಜೊತೆಗೆ ಪಬ್ಲಿಸಿಟಿನೂ ಬೇಕು. “ಬಿಗ್‌ ಬಾಸ್‌’ನಲ್ಲಿ ಆ ಪಬ್ಲಿಸಿಟಿ ಸಿಗುತ್ತದೆಂಬ ವಿಶ್ವಾಸವಿತ್ತು. ಜೊತೆಗೆ ಹೊಸ ಬದುಕು ಕಟ್ಟಿಕೊಳ್ಳಬೇಕೆಂಬ ಆಸೆಯಿಂದ ನಾನು “ಬಿಗ್‌ ಬಾಸ್‌’ಗೆ ಹೋದೆ. 

* ಅಷ್ಟೂ ಬಾರಿ ನಾಮಿನೇಟ್‌ ಆದ್ರು ಗೆಲ್ಲೋ ವಿಶ್ವಾಸ ನಿಮಗಿತ್ತಾ?
ನಾನು 14 ಬಾರಿ ನಾಮಿನೇಟ್‌ ಆಗಿದ್ದೆ. ಆದರೆ ಅಷ್ಟೂ ಬಾರಿಯೂ ಜನ ನನ್ನನ್ನು ಸೇವ್‌ ಮಾಡಿದ್ದರು. ಪ್ರತಿ ಸೇವ್‌ ಆಗುತ್ತಾ ಬಂದಾಗಲೂ ನನ್ನ ಎನರ್ಜಿ ಹೆಚ್ಚಾಗುತ್ತಿತ್ತು. ಜನ ಪ್ರೀತಿಯಿಂದ ನನ್ನನ್ನು ಉಳಿಸಿಕೊಳ್ಳುತ್ತಿದ್ದಾರೆಂದರೆ ನಾನು ಕೂಡಾ ಚೆನ್ನಾಗಿ ಆಡಬೇಕು. ಅವರನ್ನು ಮನರಂಜಿಸುತ್ತಲೇ ಮುನ್ನಡೆಯಬೇಕೆಂದು ನಿರ್ಧರಿಸಿದೆ. 

* ಪ್ರಥಮ್‌ನನ್ನು ಇಡೀ ಮನೆ ವಿರೋಧಿಸ್ತಾ ಇತ್ತಲ್ವಾ?
ಶ್ರೀಕೃಷ್ಣ ನನ್ನು ಕೆಲವರು ಪರಮಾತ್ಮ ಅಂತಾರೆ, ಇನ್ನು ಕೆಲವರು ಕಳ್ಳ ಅಂತಾರೆ. ಅದು ಅವರವರ ಭಾವಕ್ಕೆ ಬಿಟ್ಟಿದ್ದು. ಅನೇಕರಿಗೆ ನನ್ನ ಚಟುವಟಿಕೆಗಳು ಇಷ್ಟವಾದರೆ ಕೆಲವರಿಗೆ ಅತಿರೇಕದಂತೆ ಕಂಡಿರಬಹುದು. ಕೋಪ ಬಂದಾಗ ನಾನು ರೇಗಿದ್ದೇನೆ. ಕೆಲವೊಮ್ಮೆ ಅತಿ ಎನಿಸಿರಬಹುದು. ಆದರೆ ಒಂದಂತೂ ಸತ್ಯ ನಾನು ಮುಖವಾಡ ಹಾಕಿಲ್ಲ. ಮುಖವಾಡ ಹಾಕಿ “ಬಿಗ್‌ ಬಾಸ್‌’ ಮನೆಯೊಳಗೆ ಒಂದು ದಿನವೂ ಇರಲಿಲ್ಲ.  

* ರಾಜಕಾರಣಿಗಳಿಂದ ಬೈಟ್‌ ಕೊಡಿಂದ್ರಿ?
ವೈಯಕ್ತಿಕವಾಗಿ ನಾನು ಮಾಜಿ ಪ್ರಧಾನಿ ದೇವೇಗೌಡರನ್ನು ತುಂಬಾ ಗೌರವಿಸುತ್ತೇನೆ. “ಬಿಗ್‌ ಬಾಸ್‌’ಗೆ ಹೋಗುತ್ತೇನೆ ಎಂದಾಗ “ಹೋಗಿ ಬಾ’ ಎಂದು ಹಾರೈಸಿದರು. ಅಂತಹ ದೊಡ್ಡ ಮನುಷ್ಯನ ಆಶೀರ್ವಾದ ಕೂಡಾ ಮುಖ್ಯ ಅಲ್ವಾ? ಅದೇ ರೀತಿ ಶೋಭಾ ಕರಂದ್ಲಾಜೆ, ಯಡಿಯೂರಪ್ಪ, ಕುಮಾರಣ್ಣ ಸೇರಿದಂತೆ ಎಲ್ಲಾ ನಾಯಕರು ಆಶೀರ್ವದಿಸಿದರು. ಅದು ಖುಷಿಯ ವಿಚಾರ ಅಲ್ವಾ?

* ರಾಜಕೀಯಕ್ಕೆ ಹೋಗುವ ಆಸಕ್ತಿ ಇದೆಯಾ?
ಖಂಡಿತಾ ಇಲ್ಲ. ಮುಂದೇನಿದ್ದರೂ ಮನರಂಜನಾ ಕ್ಷೇತ್ರದಲ್ಲೇ ಮುಂದುವರೆ ಯುತ್ತೇನೆ. ಕಿರುತೆರೆ, ಸಿನಿಮಾ ಎರಡರಲ್ಲೂ ತೊಡಗಿಸಿಕೊಳ್ಳುವ ಆಸೆ ಇದೆ. 

* “ದೇವ್ರವ್ನೆ ಬುಡು ಗುರು’ ಸಿನಿಮಾ ಬಿಡುಗಡೆ ಯಾವಾಗ?
ಈಗಷ್ಟೇ “ಬಿಗ್‌ ಬಾಸ್‌’ ಮನೆಯಿಂದ ಹೊರ ಬಂದಿದ್ದೇನೆ. ಸ್ವಲ್ಪ ಸಮಯ ಬೇಕು. ಆ ನಂತರ ಸಿನಿಮಾ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಏಪ್ರಿಲ್‌ ಹೊತ್ತಿಗೆ ಆಡಿಯೋ ರಿಲೀಸ್‌ ಮಾಡಿ, ಮೇನಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ. 

* ಜನಪ್ರಿಯತೆಯನ್ನು ಯಾವುದಕ್ಕೆ ಬಳಸಿಕೊಳ್ಳುತ್ತೀರಿ?
 “ಬಿಗ್‌ ಬಾಸ್‌’ನಿಂದ ಬಂದ ಹಣವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸುತ್ತೇನೆಂದು ಆ ವೇದಿಕೆಯಲ್ಲೇ ಘೋಷಿಸಿದೆ. ಈ ಜನಪ್ರಿಯತೆಯನ್ನೂ ಕೂಡಾ ಸದುದ್ದೇಶ ಕ್ಕಾಗಿಯೇ ಬಳಸುತ್ತೇನೆ. 

Advertisement

Udayavani is now on Telegram. Click here to join our channel and stay updated with the latest news.

Next