ಬೆಂಗಳೂರು: ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು, ಹಣೆಬರಹದ ಮುಂದೆ ಯಾರ್ ಏನ್ ಮಾಡಿದ್ರೂ ನಡೆಯಲ್ಲ. ನಾನು ಚೆಂಡು ಆಡಲ್ಲ, ಚೆಸ್ ಗೇಮ್ ಆಡುವವನು ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ ಸರ್ಕಾರದ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿ ಹಾಗೂ ಪರಮೇಶ್ವರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ.
ಮತ್ತೊಂದೆಡೆ ಡಿಸಿಎಂ ಹುದ್ದೆಗೆ ಪಟ್ಟು ಹಿಡಿದಿರುವ ಡಿಕೆ ಶಿವಕುಮಾರ್ ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು.
ಈ ಹಿನ್ನೆಲೆಯಲ್ಲಿ ಹಿಲ್ಟನ್ ಹೋಟೆಲ್ ಬಳಿ ಆಗಮಿಸಿದ್ದ ಡಿಕೆಶಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾನು ಯಾವ ಹುದ್ದೆ ಬೇಕೆಂದು ಅರ್ಜಿ ಹಾಕಿಲ್ಲ. ಕೆಪಿಸಿಸಿ ಅಧ್ಯಕ್ಷಗಾದಿ ಆಕಾಂಕ್ಷಿಯೂ ಅಲ್ಲ. ನನಗೆ ಸದ್ಯ ಕ್ಷೇತ್ರದ ಶಾಸಕನಾಗಿರಲು ಹೇಳಿದ್ದಾರೆ. ನಾನು ನನ್ನ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದೇನೆ ಎಂದರು.
ಎಲ್ಲದಕ್ಕೂ ಶುಭಕಾಲ, ರಾಹುಕಾಲ, ಗುಳಿಕ ಕಾಲ ಬರಬೇಕು. ನಾನು ಚೆಂಡು ಆಡುವವನಲ್ಲ, ಗೇಮ್ ಚೇಂಜರ್ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದ ಬೆಳವಣಿಗೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.