Advertisement

‘ನನ್ನ ಕುರ್ಚಿಯಿಂದ ಎದ್ದ ಕ್ಷಣದಲ್ಲೇ ನಾನದನ್ನು ಮರೆತುಬಿಡುತ್ತಿದ್ದೆ’: ನ್ಯಾಯಮೂರ್ತಿ ಬೊಬ್ಡೆ

09:46 AM Nov 10, 2019 | Hari Prasad |

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ವಿಚಾರಣೆಗೆಂದು ನಿಯೋಜನೆಗೊಂಡಿದ್ದ ಪಂಚ ಸದಸ್ಯ ಸಾಂವಿಧಾನಿಕ ಪೀಠದ ಐವರು ನ್ಯಾಯಮೂರ್ತಿಗಳಲ್ಲಿ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರೂ ಕೂಡಾ ಒಬ್ಬರು. ನ್ಯಾಯಮೂರ್ತಿ ರಂಜನ್ ಗೊಗೊಯ್ ಅಧಿಕಾರಾವಧಿ ಮುಗಿದ ಬಳಿಕ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಬೊಬ್ಡೆ ಅವರು ಸತತ 40 ದಿನಗಳ ಕಾಲ ನಡೆದ ಅಯೋಧ್ಯೆ ತೀರ್ಪಿನ ವಿಚಾರಣೆ ಸಂದರ್ಭದಲ್ಲಿ ತಮ್ಮ ಅನುಭವವನ್ನು ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.

Advertisement

‘ಪ್ರತೀದಿನದ ವಿಚಾರಣೆ ಮುಗಿಸಿ ನನ್ನ ಕುರ್ಚಿಯಿಂದ ಎದ್ದ ಕ್ಷಣದಲ್ಲೇ ನಾನು ಎಲ್ಲವನ್ನೂ ಅಲ್ಲೇ ಮರೆತುಬಿಡುತ್ತಿದ್ದೆ, ಮತ್ತು ನಿರಾಳ ಮನಸ್ಸಿನಿಂದ ಹೊರಬರುತ್ತಿದ್ದೆ’ ಎಂದು ನ್ಯಾಯಮೂರ್ತಿ ಬೊಬ್ಡೆ ಅವರು ಮ್ಯಾರಥಾನ್ ವಿಚಾರಣಾ ಸಂದರ್ಭದ ತಮ್ಮ ಅನಭವವನ್ನು ಹಂಚಿಕೊಂಡಿದ್ದಾರೆ.

40 ದಿನಗಳ ಅಯೋಧ್ಯಾ ಜನ್ಮಭೂಮಿ ವಿವಾದದ ವಿಚಾರಣೆ ಮುಕ್ತಾಯಗೊಂಡ ಎರಡು ದಿನಗಳ ಬಳಿಕ ಮತ್ತು ತೀರ್ಪು ಪ್ರಕಟಗೊಂಡ 10 ದಿನಗಳ ಮುಂಚೆಯಷ್ಟೇ 63 ವರ್ಷದ ಬೊಬ್ಡೆ ಅವರು ಸರ್ವೋಚ್ಛ ನ್ಯಾಯಾಲಯದ ಮುಂದಿನ ನ್ಯಾಯಮೂರ್ತಿ ಪದಕ್ಕೆ ನಾಮಾಂಕಿತಗೊಂಡಿದ್ದರು. ಮತ್ತು ಈ ಪ್ರಸ್ತಾವನೆಗೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಅಕ್ಟೋಬರ್ 29ರಂದು ತಮ್ಮ ಅಂಕಿತವನ್ನು ಹಾಕಿದ್ದರು.

ನ್ಯಾಯಮೂರ್ತಿ ಬೊಬ್ಡೆ ಅವರು ನವಂಬರ್ 18ರಂದು ಸರ್ವೋಚ್ಛ ನ್ಯಾಯಾಲಯದ 47ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿಯಾಗಿ ಅವರ ಕಾರ್ಯಾವಧಿ 17 ತಿಂಗಳುಗಳಾಗಿದ್ದು 2021ರ ಎಪ್ರಿಲ್ 23ರಂದು ಬೊಬ್ಡೆ ಅವರು ನಿವೃತ್ತರಾಗಲಿದ್ದಾರೆ.

ನ್ಯಾಯಮೂರ್ತಿ ಬೊಬ್ಡೆ ಅವರು ವಿಚಾರಣಾ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಪಕ್ಷಗಳ ಅರ್ಜಿದಾರರಿಗೆ ಸತತ ಪ್ರಶ್ನೆಗಳನ್ನು ಕೇಳುತ್ತಿದ್ದರು. ಬೊಬ್ಡೆ ಅವರು ಮಹಾರಾಷ್ಟ್ರ ಮೂಲದವರಾಗಿದ್ದು ವಕೀಲರ ಕುಟುಂಬ ಹಿನ್ನಲೆಯನ್ನು ಹೊಂದಿದ್ದಾರೆ.

Advertisement

ಖಾಸಗೀತನವನ್ನು ವ್ಯಕ್ತಿಯೊಬ್ಬರ ಮೂಲಭೂತ ಹಕ್ಕು ಎಂದು ಘೋಷಿಸಿದ್ದ ಸುಪ್ರೀಂ ಕೋರ್ಟಿನ ಒಂಭತ್ತು ಸದಸ್ಯರ ಪೀಠದ ಭಾಗವಾಗಿದ್ದರು ನ್ಯಾಯಮೂರ್ತಿ ಬೊಬ್ಡೆ. ಇದು ಮಾತ್ರವಲ್ಲದೇ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಮೇಲೆ ಮಾಡಲಾಗಿದ್ದ ಲೈಂಗಿಕ ಕಿರುಕುಳ ಆರೋಪವನ್ನು ಪರಾಮರ್ಶಿಸಿ ಅವರನ್ನು ದೋಷಮುಕ್ತಗೊಳಿಸಿದ್ದ ತ್ರಿಸದಸ್ಯ ಬಲದ ಆಂತರಿಕ ಕಮಿಟಿಯ ಸದಸ್ಯರಲ್ಲಿ ಒಬ್ಬರಾಗಿದ್ದವರು ನ್ಯಾಯಮೂರ್ತಿ ಬೊಬ್ಡೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next