ಇಂಫಾಲ್/ ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಉತ್ತರ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿರುವ ವೇಳೆಯಲ್ಲೇ ಗಲಭೆ ಪೀಡಿತ ರಾಜ್ಯದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ದೂರು ತಡವಾಗಿ ದಾಖಲಾಗಿದೆ.
ಜನಾಂಗೀಯ ಘರ್ಷಣೆಯ ಸಂದರ್ಭದಲ್ಲಿ ಬದುಕುಳಿದು ಪರಿಹಾರ ಶಿಬಿರದಲ್ಲಿರುವ ಸಂತ್ರಸ್ತ ಮಹಿಳೆಯೊಬ್ಬರು ಬುಧವಾರ (ಆ.9)ಪೊಲೀಸ್ ಕೇಸ್ ದಾಖಲಿಸಿದ ನಂತರ ಲೈಂಗಿಕ ದೌರ್ಜನ್ಯದ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯರು ತಾವು ಅನುಭವಿಸಿದ ಸಂಕಷ್ಟ ಮತ್ತು ದೌರ್ಜನ್ಯಗಳನ್ನು ವಿವರಿಸಲು ಪೊಲೀಸರ ಎದುರಿಗೆ ಒಬ್ಬೊಬ್ಬರಾಗಿ ಮುಂದೆ ಬರುತ್ತಿದ್ದಾರೆ.
ಇತ್ತೀಚಿನ ಪ್ರಕರಣದಲ್ಲಿ, ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ 37 ವರ್ಷದ ಮಹಿಳೆ ತಮ್ಮ ಇಬ್ಬರು ಪುತ್ರರು, ಸೊಸೆ ಮತ್ತು ಅತ್ತಿಗೆಯೊಂದಿಗೆ ಸುಟ್ಟುಹೋಗುತ್ತಿದ್ದ ಮನೆಯಿಂದ ಓಡಿಹೋಗುತ್ತಿದ್ದಾಗ ಎಡವಿ ಬಿದ್ದಿದ್ದು, ಆ ವೇಳೆ ಪುರುಷರ ಗುಂಪಿನ ಕೈಗೆ ಸಿಕ್ಕಿಬಿದ್ದೆ. ಐದಾರು ದುಷ್ಕರ್ಮಿಗಳು ನನ್ನನ್ನು ಹಿಡಿದರು, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಪ್ರಾರಂಭಿಸಿದರು. ನನ್ನ ಪ್ರತಿರೋಧದ ಹೊರತಾಗಿಯೂ, ನನ್ನನ್ನು ಬಲವಂತವಾಗಿ ಎಳೆದೊಯ್ದ ನಂತರ, ಪುರುಷರು ನನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಪ್ರಾರಂಭಿಸಿದರು” ಎಂದು ಆರೋಪಿಸಿದ್ದಾರೆ.
“ನನ್ನ ಮತ್ತು ನನ್ನ ಕುಟುಂಬದ ಗೌರವ, ಘನತೆ ಮತ್ತು ಸಾಮಾಜಿಕ ಬಹಿಷ್ಕಾರದಿಂದ ನಮ್ಮನ್ನು ಉಳಿಸಿಕೊಳ್ಳಲು ನಾನು ಘಟನೆಯನ್ನು ಬಹಿರಂಗಪಡಿಸಲಿಲ್ಲ. ಸಾಮಾಜಿಕ ಕಳಂಕದಿಂದಾಗಿ ಈ ದೂರು ಸಲ್ಲಿಸಲು ವಿಳಂಬವಾಗಿದೆ …ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದೆ” ಎಂದು ಮಹಿಳೆ ಹೇಳಿಕೊಂಡು ಬಿಷ್ಣುಪುರ ಪೊಲೀಸ್ ಠಾಣೆಗೆ ಸಲ್ಲಿಸಿದ ‘ಶೂನ್ಯ ಎಫ್‌ಐಆರ್’ ನೊಂದಿಗೆ ಹೇಳಿಕೆಯನ್ನು ಲಗತ್ತಿಸಲಾಗಿದೆ. ಎಫ್‌ಐಆರ್ ಪ್ರಕಾರ, ಮೇ 3 ರಂದು ಸಂಜೆ 6.30ರ ಬಳಿಕ ಘಟನೆ ನಡೆದಿದೆ.