ನಮ್ ಏರಿಯಾದ ಮರ ಗಿಡಗಳೆಲ್ಲ ಚಿಗುರಿ ನಗುತ್ತಿವೆ. ಹಾದಿಯ ತುಂಬೆಲ್ಲ ಹೂ ಚೆಲ್ಲಿದೆ. ಹಕ್ಕಿಗಳ ಚಿಲಿಪಿಲಿ ಕಿವಿ ತುಂಬುತ್ತಿದೆ. ಗಲ್ಲಿಯ ನಲ್ಲಿಗಳಲ್ಲಿ ನೀರು ಉಕ್ಕಿ ಬರುತ್ತಿದೆ. ಬೀದಿ ದೀಪಗಳು ಹಗಲಲ್ಲೂ ಬೆಳಗುತ್ತಿವೆ. ಓಣಿಯ ಆಂಟಿಯರು ಮಾತ್ರವಲ್ಲ, ನನ್ನವ್ವನೂ ಸಹ, ತಮ್ಮ ಮಕ್ಕಳಿಗೆ ಮದುವೆ ಮಾಡುವ ಕುರಿತು ಮಾತಾಡತೊಡಗಿದ್ದಾರೆ! ಸುತ್ತಲಿನ ಒಟ್ಟು ಪರಿಸರವೇ ಸಡಗರದಿಂದ ಸಂಭ್ರಮಿಸುತ್ತಿದೆ. ನನಗೊಂದ್ ಅನುಮಾನ ಕಣೆ! ಬಹುಶಃ ನೀನು ಈ ಕಡೆ ಬಂದು ಹೋದೆಯೋ ಹೇಗೆ?
ಕೆಲ ಪ್ರಾಕೃತಿಕ ಘಟನೆಗಳು ಸಂಭವಿಸುವ ಮುನ್ನವೇ ಪಶು ಪಕ್ಷಿಗಳಿಗೆ ತಿಳಿಯುತ್ತವಂತೆ. ಥೇಟ್ ಹಾಗೆಯೇ, ನೀ ಕಾಲೇಜಿಗೆ ಕಾಲಿಡುವ ಮುನ್ನಾ ದಿನವೇ ನನ್ನೆದೆಯ ಗೂಡಿನ ಹಕ್ಕಿ ಆ ಮುನ್ಸೂಚನೆ ಅರಿತು ಬಿಟ್ಟಿತ್ತು. ಆ ದಿನ ನೀ ಬಂದು ನೇರವಾಗಿ ನನ್ನನ್ನೇ ಮಾತನಾಡಿಸಿದಾಗಲಂತೂ ಸುನಾಮಿಯ ಹೊಡೆತಕ್ಕೆ ಸಿಕ್ಕಿ ನನ್ನೆದೆಯ ತುಂಬಾ ಅಲ್ಲೋಲಕಲ್ಲೋಲ !
ಒಲವೇ, ನೀ ಇತ್ತ ಸುಳಿದದ್ದೇ ಸತ್ಯವಾಗಿದ್ದರೆ, ನಾನು ಕಾರಣ ಹುಡುಕುವ ಅಗತ್ಯವಿಲ್ಲ. ಅತ್ತೆ ಮನೆ, ಅಲ್ಲಿನ ಪರಿಸರದ ಪರಿಚಯ ಮಾಡಿಕೊಳ್ಳಲೆಂದೇ ನೀನು ಬಂದು ಹೋಗಿರಬಹುದು ಅಂದುಕೊಳ್ಳಲಾ? ಎಂದು ನಾ ಬಲ್ಲೆ. ಆ ಮನೆ, ಆ ಪರಿಸರ ಹೇಗೇ ಇರಲಿ. ತಲೆ ಕೆಡಿಸಿಕೊಳ್ಳಬೇಡ. ನೀ ಬಂದ ಮರುಘಳಿಗೆಯೇ ಅದೆಲ್ಲ ಬದಲಾಗುತ್ತದೆ. ಎಲ್ಲ ಸುಖ ಸಂತಸ ಸಂಭ್ರಮಕ್ಕೂ ಮೊದಲಾಗುತ್ತದೆ. ಅನುಮಾನವೇ ಬೇಡ. ಬಲಗಾಲಿಟ್ಟು ಬಂದು ಬಿಡು. ಆ ಸಡಗರ, ಸಂಭ್ರಮದ ವಾತಾವರಣ ಬೇಗ ನನ್ನ ಮನೆ ಮನ, ನನ್ನೂರ ಪರಿಸರವ ಆವರಿಸಲಿ.
ನಿನ್ನ ಬರುವಿಕೆಯ ಕಾತುರದ ಕುತೂಹಲಿ
-ಅಶೋಕ ವಿ ಬಳ್ಳಾ