ಕಾಲೇಜಿನ ಪ್ರಾರಂಭದ ದಿನಗಳು. ಬಾಲ್ಯದಿಂದ ಜೊತೆಗೇ ಓದಿದ ಹುಡುಗಿಯರು ಕೂಡಾ ಹೊಸ ರೀತಿ ಕಾಣುತ್ತಿದ್ದರು. ಚಿಕ್ಕವರಿದ್ದಾಗ ನಮ್ಮೊಂದಿಗೆ ಜಗಳವಾಡಲಿಕ್ಕೇ ಹುಟ್ಟಿದವರಂತಿದ್ದ ಅವರು ಈಗೀಗ ದೂರವಾದರೆ ಏನೋ ಬೇಸರ ಕಾಡುತ್ತಿತ್ತು. ಸದಾ ಅವರ ಸುತ್ತ ಸುತ್ತುವುದು, ಅವರ ಚಲನ ವಲನವನ್ನು ಗಮನಿಸುವುದು, ಗೆಳತಿಯರ ಮಧ್ಯೆ ಮಾತನಾಡುತ್ತ ಅವರು ನಗುತ್ತಿದ್ದರೆ ಆ ಮಾತುಗಳು ನನ್ನದೇ ಕುರಿತಾಗಿರಬಹುದಾ?ಎಂಬ ಪ್ರಶ್ನೆ ಮೂಡಿಸಿಕೊಳ್ಳುವುದು, ಹೀಗೆ ಏನೇನೋ ಆಗೋದು. ಸೂರ್ಯನ ಸುತ್ತ ಎಲ್ಲಾ ಗ್ರಹಗಳು ಸುತ್ತೋ ಹಾಗೆ ನಾನು ಅವರೆಲ್ಲರ ಸುತ್ತ ತಿರುಗೋ ಉಪಗ್ರಹ ಆಗಿºಟ್ಟಿದ್ದೆ.
ಅವರನ್ನು ಇಷ್ಟೊಂದು ಗಮನಿಸಿದ ಕಾರಣಕ್ಕೇ ಇರಬೇಕು; ನೀನು ನನ್ನ ಕಣ್ಣಿನ ಭಾಷೆಗೆ ಮಾತಾಗತೊಡಗಿದ್ದೆ. ಕೆಲ ದಿನ ಕಣ್ಣಲ್ಲೇ ಸಾಗಿದ್ದ ಮಾತು ಕೊನೆಗೂ ಶಬ್ದದ ರೂಪ ಪಡೆದಿತ್ತು. ಮಾತುಗಳು ಭೇಟಿಗೆ ಮುನ್ನುಡಿಯಾದವು. ಭೇಟಿಗೆ ಪಾರ್ಕು, ಕ್ಯಾಂಟೀನುಗಳು ವೇದಿಕೆಯಾದವು.
ಆ ನಗು, ಹರಟೆ, ತಮಾಷೆಯ ಸ್ನೇಹಕ್ಕೆ ಒಲವಿನ ರಂಗು ಮೂಡಿತು. ಒಳಗೊಳಗೆ ಪ್ರೇಮಲೋಕದ ಕನಸು ಚಿಗುರೊಡೆದು ಹಾಡಿ ಕುಣಿದ ಅನುಭವವಾಯ್ತು. ಇನ್ನೇನು ಒಬ್ಬರಿಗೊಬ್ಬರು ಪ್ರೇಮ ನಿವೇದನೆ ಮಾಡಿಕೊಂಡು ಪರಸ್ಪರ ಪ್ರೀತಿಗೆ ಒಪ್ಪಿಗೆಯ ಮುದ್ರೆ ಒತ್ತಿ, ಅಧಿಕೃತ ಪ್ರೇಮಿಗಳಾಗಿ ಹಾರಾಡಬೇಕು ಅನ್ನುವಷ್ಟರಲ್ಲಿ ನಮ್ಮಿಬ್ಬರ ಲವ್ ಮ್ಯಾಟ್ರಾ ಅದು ಹೇಗೋ ಲೀಕಾಗಿ, ಪ್ರಿನ್ಸಿಪಾಲ್, ನಮ್ಮಪ್ಪ, ನಿಮ್ಮಪ್ಪನ ಕಿವಿಗೆ ಬಿತ್ತು. “ಕಾಲೇಜಿಗೆ ಬಂದಿದ್ದು ಓದೋಕಾ, ಪ್ರೀತಿ ಗೀತಿ ಅಂತಾ ಓಡಾಡೋಕಾ?’ ಅಂತ ಇಬ್ಬರನ್ನೂ ಚೇಂಬರಿಗೆ ಕರೆಸಿ ಕ್ಲಾಸ್ ತಗೊಳ್ಳೋ ಹಾಗಾಯ್ತು.
ಅವತ್ತು ಎಲ್ಲರೂ ಸೇರಿ ಒತ್ತಾಯದಿಂದ ನಮ್ಮ ಬ್ರೇಕ್‌ಅಪ್ ಮಾಡಿಸಿಬಿಟ್ಟರು. ಆವತ್ತಿಂದ ನೀನು ಮಾತ್ರ ಅಲ್ಲ; ಯಾವ ಹುಡುಗಿಯೂ ನನ್ನತ್ತ ತಿರುಗಿ ನೋಡುತ್ತಿಲ್ಲ. “ಇವ್ನಿಗೆ ಪ್ರೀತ್ಸೋ ಯೋಗ್ಯತೇನೇ ಇಲ್ಲ, ಗೌಪ್ಯತೆ ಕಾಪಾಡೋದು ಹೇಗಂತ ಗೊತ್ತಿಲ್ಲದ ಪೆದ್ದು’ ಅಂತ ಬೆನ್ನ ಹಿಂದೆ ಮುಸಿಮುಸಿ ನಗುತ್ತಿದ್ದಾರೆ. ನಿಜ ಹೇಳ್ತೀನಿ ಕಣೆ, ನಮ್ಮಿಬ್ಬರ ವಿಷಯವನ್ನು ನಾನಂತೂ ಬಾಯಿಬಿಟ್ಟು ಯಾರಿಗೂ ಹೇಳಿಲ್ಲ. ಅದ್ಯಾರು ಪ್ರಿನ್ಸಿಪಾಲ್ ಹತ್ರ ಫಿಟ್ಟಿಂಗ್ ಇಟ್ಟರೋ ನಂಗೊತ್ತಿಲ್ಲ. ನನ್ನನ್ನು ಕ್ಷಮಿಸಿಬಿಡು!
ಅಶೋಕ ವಿ ಬಳ್ಳಾ