ಮೊಹಾಲಿ : ”ಮಹೇಂದ್ರ ಸಿಂಗ್ ಧೋನಿ ಮತ್ತು ಕ್ರಿಸ್ ಗೇಲ್ ಅವರಲ್ಲಿರುವ ಪವರ್ ನನ್ನಲ್ಲಿಲ್ಲ; ಕೇವಲ ಶಾಟ್‌ಗಳನ್ನು ಟೈಮಿಂಗ್ ಮಾಡುವುದಷ್ಟೇ ನನಗೆ ಗೊತ್ತು” ಎಂದು ನಿನ್ನೆ ಬುಧವಾರ ಇಲ್ಲಿನ ಐಎಸ್ ಬಿಂದ್ರಾ ಪಿಸಿಎ ಸ್ಟೇಡಿಯಂನಲ್ಲಿ ನಡೆದಿದ್ದ ಪ್ರವಾಸಿ ಲಂಕಾ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ತನ್ನ ಮೂರನೇ ಡಬಲ್ ಸೆಂಚುರಿಯನ್ನು ಅಜೇಯವಾಗಿ ಬಾರಿಸಿದ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರ ಅಜೇಯ 208ರನ್‌ಗಳಲ್ಲಿ 12 ಸಿಕ್ಸರ್‌ಗಳು, 13 ಬೌಂಡರಿಗಳು ಇದ್ದವು. ಅವರ ಈ ದ್ವಿಶತಕದ ಎರಡನೇ ನೂರು ರನ್‌ಗಳು ಕೇವಲ 36 ಎಸೆತಗಳಲ್ಲಿ ಬಂದಿದ್ದವು. ಈ ರೀತಿಯ ಹೊಡಿ ಬಡಿಯ ಆಟ ಪ್ರದರ್ಶಿಸುವ ಮೂಲಕ ರೋಹಿತ್ ಶರ್ಮಾ ಇಡಿಯ ಕ್ರೀಡಾಂಗಣಕ್ಕೇ ರನ್ ಬೆಂಕಿಯನ್ನು ಹೊತ್ತಿಸಿದ್ದರು.
ತಂಡದ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರೊಂದಿಗಿನ ವಿಡಿಯೋ ಮಾತುಕತೆಯಲ್ಲಿ ರೋಹಿತ್ ಶರ್ಮಾ ಹೇಳಿದ್ದು ಇಷ್ಟು :
ಧೋನಿ ಮತ್ತು ಗೇಲ್ ಅವರಲ್ಲಿರುವ ಪವರ್ ನನ್ನಲ್ಲಿ ಇಲ್ಲ. ನಾನು ಕೇವಲ ಶಾಟ್‌ಗಳನ್ನು ಟೈಮಿಂಗ್ ಮಾತ್ರವೇ ಮಾಡಬಲ್ಲೆ. ಮತ್ತು ನನ್ನ 3ನೇ ದ್ವಿಶತಕ ಪಡೆಯುವಲ್ಲಿ ನಾನು ಇದನ್ನೇ ಮಾಡಿರುತ್ತೇನೆ. ಎಸೆತಗಳನ್ನು ಟೈಮಿಂಗ್ ಮಾಡುವುದೇ ನನ್ನ ನೈಜ ಶಕ್ತಿಯಾಗಿದೆ’
“ತಂಡದ ಶಕ್ತಿ ಮತ್ತು ಸೂಕ್ತ ತಾಲೀಮಿಗೆ ಕೋಚ್ ಶಂಕರ್ ಬಸು ಅವರಿಗೆ ನಾನು ಕೃತಜ್ಞ; ನಮ್ಮೆಲ್ಲರೊಂದಿಗೆ ಅವರು ತುಂಬ ಪರಿಶ್ರಮ ಪಟ್ಟಿದ್ದಾರೆ’.
ಭಾರತ ನಿನ್ನೆಯ ಎರಡನೇ ಏಕದಿನವನ್ನು 141 ರನ್‌ಗಳ ಮೂಲಕ ಭರ್ಜರಿಯಾಗಿ ಜಯಿಸಿ 3ಪಂದ್ಯಗಳ ಈ ಒನ್‌ಡೇ ಸರಣಿಯಲ್ಲಿ 1-1ರ ಸಮಬಲವನ್ನು ಸ್ಥಾಪಿಸಿದೆ.