ಬೆಳಗಾವಿ: ನಾನು ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಲ್ಲ. ನಾನು ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ನನ್ನ ಅ ಧಿಕಾರವಧಿ ಯಲ್ಲಿ ಒಂದೇ ಜಾತಿ, ಧರ್ಮದವರಿಗಾಗಿ ಯೋಜನೆಗಳನ್ನು ರೂಪಿಸಿಲ್ಲ. ನಾನು ಬದುಕುವವರೆಗೂ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಶೆಫರ್ಡ್ಸ್ ಇಂಡಿಯಾ ಇಂಟರ್‌ನ್ಯಾಶನಲ್‌ನ 9ನೇ ವಾರ್ಷಿಕ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಬೆಳ್ಳಿ ಖಡ್ಗ, ಬೆಳ್ಳಿ ಕಿರೀಟ ಹಾಗೂ ಕುರಿ ಮರಿಯ ಆತ್ಮೀಯ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದ ಬಡವರಿಗೆ ನ್ಯಾಯ ನೀಡಲು ಯೋಜನೆಗಳನ್ನು ರೂಪಿಸಿದ್ದೇನೆ. ಇದರಲ್ಲಿ ನಾವು ಜಾತಿ ಮಾಡುತ್ತಿದ್ದೇವಾ? ಆದರೆ ನನ್ನ ವಿರೋಧಿ ಗಳು ಸಿದ್ದರಾಮಯ್ಯ ಜಾತಿವಾದಿ ಎಂದು ಟೀಕೆ ಮಾಡುತ್ತಾರೆ. ನನ್ನ ರಾಜಕೀಯ ಜೀವನದಲ್ಲಿ, ನಾನು ಬದುಕಿರುವವರೆಗೂ ಜಾತಿ ಮಾಡುವುದಿಲ್ಲ.
ಜಾತಿ ಮಾಡುವ ಮಠಗಳನ್ನು ಬೆಂಬಲಿಸುವುದಿಲ್ಲ. ಮಠಗಳು ಜಾತ್ಯತೀತವಾಗಿರಬೇಕು. ಮನುಷ್ಯನನ್ನು ನೋಡುವ ಪ್ರವೃತ್ತಿ ಇದ್ದರೆ ಜಾತ್ಯತೀತ ಸಮಾಜ, ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು. ಪ್ರೀತಿ ಬೆಳೆದಾಗ ಮಾತ್ರ ನಾಯಕತ್ವ ಬೆಳೆಯುತ್ತದೆ. ಅನೇಕ ರಾಜ್ಯಗಳಲ್ಲಿ ಸಂಘಟನೆ ಕೊರತೆ ಇದೆ. ಸಂಘಟನಾ ಶಕ್ತಿಯಿಂದ ಮಾತ್ರ ನಾಯಕತ್ವ ರೂಪಿಸಲು ಸಾಧ್ಯ. ಸಂಘಟನೆ ಇಲ್ಲದಿದ್ದರೆ ಕರ್ನಾಟಕದಲ್ಲಿ ಕನಕಪೀಠ ಸ್ಥಾಪಿಸಲು ಸಾಧ್ಯವಾಗುತ್ತಿರಲಿಲ್ಲ. ಅನ್ಯಾಯಕ್ಕೆ, ತುಳಿತಕ್ಕೆ ಒಳಗಾದವರಿಗೆ ಕನಕಪೀಠ ಆಧಾರಸ್ತಂಭವಿದೆ. ರಾಜಕೀಯ ಶಕ್ತಿ ಬೇಕು. ಸಂಘಟನೆ, ನಾಯಕತ್ವ ಬೆಳೆಸಿಕೊಳ್ಳಬೇಕು ಎಂದರು.
ಸಮಾವೇಶ ಉದ್ಘಾಟಿಸಿದ ಹರಿಯಾಣ ರಾಜ್ಯಪಾಲ ಭಂಡಾರು ದತ್ತಾತ್ರೇಯ ಮಾತನಾಡಿ, ಕುರುಬ ಸಮಾಜದಲ್ಲಿ ಜನಿಸಿದ್ದು ನನ್ನ ಸೌಭಾಗ್ಯ. ರಾಜಕಾರಣದಲ್ಲಿ ಇಷ್ಟು ಬೆಳೆಯುತ್ತೇನೆಂದು ನಿರೀಕ್ಷಿಸಿರಲಿಲ್ಲ. ಇಡೀ ದೇಶದ ಕುರುಬ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡಿದ್ದು ಶ್ಲಾಘನೀಯ. ಇನ್ನೂ ಹೆಚ್ಚೆಚ್ಚು ಸಚಿವರು, ಶಾಸಕರು ಆಯ್ಕೆ ಆಗಲಿ ಎಂದರು.
ಶೆಫರ್ಡ್ಸ್ ಇಂಡಿಯಾ ಇಂಟರನ್ಯಾಶನಲ್ ಸಂಸ್ಥಾಪಕ ಅಧ್ಯಕ್ಷ ಎಚ್. ವಿಶ್ವನಾಥ ಮತ್ತು ಸಚಿವರು, ಶಾಸಕರು, ಮುಖಂಡರು ಉಪಸ್ಥಿತರಿದ್ದರು.