Advertisement

ನನ್ನ ಮನೆಯಲ್ಲಿ “ಉಗ್ರ’ರಿರಲು ಇಚ್ಛಿಸಲ್ಲ

08:00 AM Nov 29, 2017 | Harsha Rao |

ನವದೆಹಲಿ: ಲವ್‌ ಜಿಹಾದ್‌ ಸಂತ್ರಸ್ತೆ ಎನ್ನಲಾದ ಕೇರಳದ ಯುವತಿ ಹದಿಯಾಳಿಗೆ ವಿದ್ಯಾಭ್ಯಾಸ ಮುಂದುವರಿಸುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಆಕೆಯ ತಂದೆ ಕೆ.ಎಂ.ಅಶೋಕನ್‌ ಸ್ವಾಗತಿಸಿದ್ದಾರೆ. ಸುಪ್ರೀಂ ನಿರ್ಧಾರದ ಕುರಿತು ಮಂಗಳವಾರ ಪ್ರತಿಕ್ರಿಯಿಸಿದ ಅವರು, “ನ್ಯಾಯಾಲಯದ ಆದೇಶ ಸ್ವಾಗತಾರ್ಹ. ಹದಿಯಾ ಇಸ್ಲಾಂಗೆ ಮತಾಂತರ ಆದ ಬಳಿಕ ಸಿರಿಯಾಗೆ ಹೋಗಲು ಬಯಸಿದ್ದಾಳೆ. ಅವಳಿಗೆ ಸಿರಿಯಾದ ಬಗ್ಗೆ ಮಾಹಿತಿಯೇ ಇಲ್ಲ. ನನ್ನ ಕುಟುಂಬದಲ್ಲಿ “ಭಯೋತ್ಪಾದಕ’ರು ಇರುವುದು ನನಗೆ ಇಷ್ಟವಿಲ್ಲ,’ ಎಂದಿದ್ದಾರೆ.

Advertisement

ಇದೇ ವೇಳೆ, ಅಂತರ್‌ಧರ್ಮ ಮದುವೆಯ ಕುರಿತು ನಿಮ್ಮ ನಿಲುವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅಶೋಕನ್‌, “ನಾನು ಒಂದೇ ಧರ್ಮವನ್ನು ಮತ್ತು ಏಕ ದೇವನನ್ನು ನಂಬಿದ್ದೇನೆ ಅಷ್ಟೆ,’ ಎಂದಿದ್ದಾರೆ. “ಈ ಎಲ್ಲ ಕೆಟ್ಟ ಸನ್ನಿವೇಶಗಳಿಂದಾಗಿ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಆತಂಕ ನನಗಿತ್ತು. ಈಗ ಸುಪ್ರೀಂ ಕೋರ್ಟ್‌ ಆಕೆಯ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿರುವ ಕಾರಣ ನನಗೆ ಸಂತಸವಾಗಿದೆ. ತಮಿಳುನಾಡಿನ ಸೇಲಂನಲ್ಲಿ ಅವಳು ಸುಪ್ರೀಂ ಕೋರ್ಟ್‌ನ ನಿಗಾದಲ್ಲಿರುತ್ತಾಳೆ. ಹಾಗಾಗಿ ಅವಳ ಭದ್ರತೆಯ ಬಗ್ಗೆ ನನಗೆ ಚಿಂತೆ ಇಲ್ಲ’ ಎಂದೂ ಅಶೋಕನ್‌ ಹೇಳಿದ್ದಾರೆ. 

ಪತಿ ಭೇಟಿಗಿಲ್ಲ ಅವಕಾಶ: ಈ ನಡುವೆ, ಹದಿಯಾಳು ಕಾಲೇಜಿನಲ್ಲಿ ಅಖೀಲಾ ಎಂಬ ತನ್ನ ಮೂಲ ಹೆಸರಿನಿಂದಲೇ ವ್ಯಾಸಂಗ ಮುಂದುವರಿಸಲಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ. ಆಕೆ ಅಖೀಲಾ ಹೆಸರಿನಲ್ಲೇ ಕಾಲೇಜಿಗೆ ಸೇರಿದ್ದಳು. ಹಾಗಾಗಿ ಅದೇ ಹೆಸರು ಮುಂದುವರಿಯುತ್ತದೆ ಎಂದು ಪ್ರಾಂಶುಪಾಲ ಜಿ. ಕಣ್ಣನ್‌ ಹೇಳಿದ್ದಾರೆ. ಅಲ್ಲದೆ, ಪತಿ ಶಫೀನ್‌ ಜಹಾನ್‌ರನ್ನು ಭೇಟಿಯಾಗಲೂ ಆಕೆಗೆ ಅವಕಾಶ ನೀಡುವುದಿಲ್ಲ. ಹೆತ್ತವರ ಭೇಟಿಗಷ್ಟೇ ಅನುಮತಿ ನೀಡುತ್ತೇವೆ ಎಂದೂ ಅವರು ತಿಳಿಸಿದ್ದಾರೆ. ಮಂಗಳವಾರ ಕೇರಳ ಪೊಲೀಸರ ಭದ್ರತೆಯಲ್ಲಿ ಸೇಲಂ ತಲುಪಿದ ಹದಿಯಾಳಿಗೆ ಸುದ್ದಿಗಾರರ ಜತೆಗೆ ಮಾತನಾಡಲೂ ಪೊಲೀಸರು ಅವಕಾಶ ನೀಡಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next