Advertisement

ಯಾಕೋ ಗೊತ್ತಿಲ್ಲ ಕಣೋ, ಕಣ್ತುಂಬಿ ಬರುತ್ತಿದೆ…

06:00 AM Jul 17, 2018 | |

ಅನಾಮಿಕನೆ… ಒಹ್‌ ಹುಡುಗಾ ನಿನ್ನನ್ನ ಮರೆತೇ ಹೋಗಿದ್ದೇ ಕಣೋ! ಮೊನ್ನೆ ನನ್ನ ಕಪಾಟನ್ನೆಲ್ಲ ಸ್ವಚ್ಛಗೊಳಿಸುವಾಗ, ಮುಖಪುಟವಿಲ್ಲದ ಮಾಸಲು ಹಾಳೆಗಳ ನಡುವೆ  ಪಕ್ಕನೆ ಸಿಕ್ಕ ಹೊಳೆವ ನವಿಲುಗರಿಯಂತೆ. ನಿನ್ನದೊಂದು ಪತ್ರ ಸಿಕ್ಕಿತು. ಅವತ್ತು ಅದನ್ನು ಪೂರ್ತಿಕೂಡ ಓದದೆ ಕೈಯಲ್ಲಿದ್ದ ಯಾವುದೋ ಪುಸ್ತಕದೊಳಕ್ಕೆ ತುರುಕಿ, ನಿನ್ನೆಡೆಗೊಂದು ನಿರ್ಲಕ್ಷ್ಯದ ನೋಟ ಎಸೆದು, ಗೆಳತಿಯರೊಂದಿಗೆ ನಗುತ್ತಾ ನಡೆದುಬಿಟ್ಟಿದ್ದೆ. ಅದೆಷ್ಟು ವರ್ಷಗಳು ಕಳೆದುಹೋದವೋ ಹುಡುಗ… ನೀ ಹೋದ ಮೇಲೂ ಸುಮಾರು ಪತ್ರಗಳು ಬಂದವು . ಅವನ್ನೆಲ್ಲಾ  ಓದುವ ಮೊದಲೇ ಹರಿದು ಎಸೆಯುತ್ತಿದ್ದೆ. ಆದರೆ ಯಾಕೋ, ನಿನ್ನ ಪತ್ರವನ್ನು ಹರಿದೆಸೆಯಬೇಕೆನಿಸಲಿಲ್ಲ , ಪತ್ರ ಕೊಡುವಾಗ ನಿನ್ನ ಕಣ್ಣಬಣ್ಣದಲ್ಲಿ ಒಲವಿತ್ತು. 

Advertisement

ನಾ ಯಾವತ್ತೂ ಅಂತ ಚಂದದ ಬಣ್ಣ ಕಂಡವಳಲ್ಲ. ಅದನ್ನ ವಿವರಿಸಲು ಮಾತಿಲ್ಲ. ಬರೆಯಲು ಪದವಿಲ್ಲ. ಸುಮ್ಮನೆ ಸದ್ದೇ ಇಲ್ಲದೇ ನಡೆದುಹೋದ ಘಟನೆಯಿದು. ನೀನು ಒಂದು ಮಾತೂ ಆಡಲಿಲ್ಲ. ನನ್ನೊಳಗೆ ಆ ಕ್ಷಣಕ್ಕೆ ಮೌನವೊಂದೇ ನೆಲೆಯಾಗಿತ್ತು. ಆದರೆ, ಅದೆಲ್ಲವನ್ನೂ ಮೀರಿ ನನ್ನ ಅಹಂ ನಿನ್ನೆಡೆಗೆ ನಿರ್ಲಕ್ಷ್ಯದ ನೋಟ ಎಸೆಯುವಂತೆ ಮಾಡಿತ್ತು. ಅವತ್ತೆಲ್ಲಾ ನಾನು ನಾನಾಗಿರಲಿಲ್ಲ. ಏನೋ ತಳಮಳ. ಸುತ್ತಲೂ ಯಾವುದೋ ಹೊಸ ದನಿಯ ಪಿಸುಮಾತಗಳ ಸಿಂಚನ. ಯಾಕೋ ಒಮ್ಮೊಮ್ಮೆ ತೀರ ಒಂಟಿಯಾಗಿಬಿಟ್ಟೆನಾ ಅಂತ ಹಳಹಳಿ. ಏನೋ ಎಲ್ಲವೂ ಅಪರಿಚತ ಭಾವಗಳ ಸಮ್ಮೇಳನವೇ ಮನದೊಳಗೆ ನಡೆಯುತ್ತಿತ್ತು. 

ಇಲ್ಲ, ನಾನು ಇದಲ್ಲವೇ ಅಲ್ಲ. ನನ್ನ ದಾರಿಯೇ ಬೇರೆ . ಗುರಿಯೇ ಬೇರೆ ಅಂದುಕೊಂಡು ಗಟ್ಟಿ ಮನಸು ಮಾಡಿಕೊಂಡು, ಸ್ಲೇಟಿನ ಮೇಲೆ ಬರೆದು ಅಳಿಸಿದಂತೆ ಎಲ್ಲ ಒಲವ ಅಕ್ಷರಗಳನ್ನೂ ಅಳಿಸಿ ಹಾಕಿಬಿಟ್ಟೆ. ಇವತ್ತು ಈ ನಿನ್ನ ಪತ್ರ ಸಿಗುವತನಕ ಒಮ್ಮೆಯೂ ನಿನ್ನ ನೆನಪಾಗಲೇ ಇಲ್ಲವಲ್ಲೋ ಹುಡುಗ. ಇವತ್ತು ರೂಮಿನ ಆ ತುದಿಯಲ್ಲಿ ಕೂತು, ನಿನ್ನ ಇಡೀ ಪತ್ರವನ್ನು ನೂರು ಸಾರಿ ಓದಿಕೊಂಡೆ. ಒಲವಲ್ಲಿ ಅದ್ದಿ ಒಂದೊಂದು ಅಕ್ಷರ ಬರೆದಿದ್ದೀಯಾ ಗೆಳೆಯಾ, ನೋಡು ನಾ ನಿನ್ನಿಂದ ಸಾವಿರಾರು ಮೈಲಿ ದೂರದ ಅಪರಿಚಿತ ದೇಶದಲ್ಲಿ ಕುಳಿತಿದ್ದೇನೆ. ನಿನ್ನ ನೆನಪು ಮಾಡಿಕೊಳ್ಳುತ್ತಾ ಇದ್ದೇನೆ. ನಾನು ನನ್ನ ಮನಸಿನ ಗುರಿ ತಲುಪಿದೆ. ಆದರೆ ಹೃದಯಕ್ಕೇನು ಬೇಕೆಂಬುದನ್ನು ಕೇಳಲೇ ಇಲ್ಲ. ಒಳಗೇ ಅರಳಿದ್ದ ಒಲವಿನ ಮೊಗ್ಗನ್ನು ನಿಷ್ಕರುಣೆಯಿಂದ ಹೊಸಕಿಬಿಟ್ಟೆ. 

ಇರಲಿ ಬಿಡು, ಅದು ಆಕ್ಷಣಕ್ಕೆ ಅನಿವಾರ್ಯವಿತ್ತು. ನಿಜಕ್ಕೂ ಈಗ ನೀ ಬೇಕೆಂದು ಹಂಬಲಿಸುವುದು ದ್ರೋಹವಾಗುತ್ತದಲ್ಲವಾ ಗೆಳೆಯಾ? ನಿನ್ನ ನೆನಪು ಹೀಗೆ ನನ್ನೊಳಗೆ ಹಸಿರಾಗಿದೆ. ಅದರಲ್ಲಿ ಉಲ್ಲಾಸವಿದೆ. ಏಕಾಂತಕ್ಕೊಂದು ಹಾಡು ಕೊಡುತ್ತದೆ. ಒಂಟಿತನದ ಸಂಜೆಗಳಿಗೊಂದು ಮುದಕೊಡುವ ಸೂರ್ಯನ ಕಿರಣದಂತೆ ಆವರಿಸುತ್ತದೆ. ನೀನು ನನ್ನ ಬದುಕಿನ ಪೂರ್ತಿ ಒಂದೂ ಮಾತಾಡದೆ, ಮಿಂಚಿನಂತೆ ಓಡಿಬಂದು, ಪತ್ರಕೊಟ್ಟು ಹೋದ ಅನಾಮಿಕ ಹುಡುಗನಾಗಿಯೇ ಇರು. ಆ ಸಂಜೆ, ಆ ತಂಪು , ಆ ನಿನ್ನ ಬಣ್ಣದ ಕಣ್ಣು , ಎಲ್ಲವೂ ನನ್ನ ಚಿತ್ತಭಿತ್ತಿಯಲ್ಲಿ ಶಾಶ್ವತ ಚಿತ್ರ ಕಣೋ… ಯಾಕೋ ಅರಿವಾಗುತ್ತಿಲ್ಲ ಗೆಳೆಯ… ಇವತ್ತು ನನ್ನ ಕಣ್ಣು ತುಂಬುತಿದೆ…. ನನ್ನ ಹುಚ್ಚುತನಕ್ಕೆ ತುಟಿಯಂಚಲಿ ನಗುವೂ ತುಳುಕುತಿದೆ. ಓ ಗೆಳೆಯಾ ನಿನ್ನ ಪ್ರೀತಿಗೆ ದೂರದ ಸಿಹಿ ಮುತ್ತುಗಳು. 

ಲವ್‌ ಯೂ ಕಣೋ                                
ಅಮ್ಮು ಮಲ್ಲಿಗೆಹಳ್ಳಿ

Advertisement

ಜೀವ ಮುಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next