ಹೊಸದಿಲ್ಲಿ: ಮುಖ್ಯಮಂತ್ರಿ ನಿವಾಸದ ಅದ್ದೂರಿ ನವೀಕರಣದ ಬಗ್ಗೆ ಆಮ್ ಆದ್ಮಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ನಾಲ್ಕು ಕೋಟಿ ಜನರಿಗೆ ವಸತಿ ಒದಗಿಸಿದ್ದರೂ ನಾವು ಶೀಶ್ ಮಹಲ್ ನಿರ್ಮಿಸಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಸರ್ಕಾರವು ಭ್ರಷ್ಟಾಚಾರ ಮತ್ತು ನಗರದ ಮೂಲಸೌಕರ್ಯವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಪ್ರಧಾನಿ, ಆಡಳಿತ ಪಕ್ಷವನ್ನು ವಿಪತ್ತು ಎಂದು ಪ್ರಧಾನಿ ಬಣ್ಣಿಸಿದರು.
ದೆಹಲಿಯಲ್ಲಿ ಕೊಳೆಗೇರಿ ನಿವಾಸಿಗಳಿಗೆ ವಸತಿ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ, “ನಾನು ಶೀಶ್ ಮಹಲ್ ನಿರ್ಮಿಸಬಹುದಿತ್ತು, ಆದರೆ ನನ್ನ ಕನಸು ನನ್ನ ದೇಶವಾಸಿಗಳಿಗೆ ಶಾಶ್ವತ ಮನೆಗಳನ್ನು ಪಡೆಯಬೇಕು ಎನ್ನುವುದು” ಎಂದು ಹೇಳಿದರು.
“ಮೋದಿ ಎಂದಿಗೂ ತಮಗಾಗಿ ಮನೆಯನ್ನು ನಿರ್ಮಿಸಿಲ್ಲ ಎಂದು ದೇಶಕ್ಕೆ ಚೆನ್ನಾಗಿ ತಿಳಿದಿದೆ. ಆದರೆ, ಕಳೆದ 10 ವರ್ಷಗಳಲ್ಲಿ, ಬಡವರಿಗಾಗಿ ನಾಲ್ಕು ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ, ಅವರ ಕನಸುಗಳನ್ನು ಈಡೇರಿಸಲಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಮುಖ್ಯಮಂತ್ರಿಯಾಗಿದ್ದಾಗ ಅರವಿಂದ ಕೇಜ್ರಿವಾಲ್ ಅವರು ತಮ್ಮ ಅಧಿಕೃತ ನಿವಾಸದ ನವೀಕರಣಕ್ಕೆ ಸರಿಸುಮಾರು 45 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂಬ ಹೇಳಿಕೆಗಳನ್ನು ಉಲ್ಲೇಖಿಸಿ ಪಿಎಂ ಮೋದಿ ಅವರ ಹೇಳಿಕೆಗಳು ಬಂದಿದೆ. ಇದರಲ್ಲಿ ಪರದೆಗಳಿಗೆ 1 ಕೋಟಿ ಮತ್ತು ನೆಲಹಾಸಿಗೆ 6 ಕೋಟಿ ರೂಪಾಯಿಗಳಂತಹ ಅದ್ದೂರಿ ವೆಚ್ಚಗಳು ಸೇರಿವೆ.