ಆದಾಯ ತೆರಿಗೆ ದಾಳಿಗೊಳಗಾದ ಸಚಿವ ಡಿ.ಕೆ. ಶಿವಕುಮಾರ್ ಅವರ ಖಡಕ್ ಮಾತುಗಳಿವು. ನಾಲ್ಕು ದಿನಗಳ ಐಟಿ ದಾಳಿಯ ನಂತರ ಶನಿವಾರ ಸದಾಶಿವನಗರದ “ಕೆಂಕೇರಿ’ ನಿವಾಸದ ಮುಂದೆ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಈ ನೆಲದ ಕಾನೂನು ಮತ್ತು ಸಂವಿಧಾನಕ್ಕೆ ವಿರೋಧವಾಗಿ ನಡೆಯುವ ವ್ಯಕ್ತಿಯಲ್ಲ, ಎಲ್ಲವನ್ನೂ ಎದುರಿಸುತ್ತೇನೆ ಎಂದು ಹೇಳಿದರು.
Advertisement
ಐಟಿ ದಾಳಿಯಿಂದ ಕುಗ್ಗಿದಂತೆ ಕಂಡು ಬರದ ಅವರು, ನಾನು ಈ ಸಂದರ್ಭದಲ್ಲಿ ಏನೇ ಹೇಳಿದರೂ ಅದಕ್ಕೆ ಆರ್ಥ ಇರುವುದಿಲ್ಲ. ಐಟಿ ಇಲಾಖೆಯ ಪಂಚನಾಮೆ ಪ್ರತಿ ಬರಲಿ. ಅದನ್ನು ಇಟ್ಟುಕೊಂಡು ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಅದರಲ್ಲಿ ನನಗ್ಯಾವುದೇ ಅಂಜಿಕೆ ಇಲ್ಲ. ಸತ್ಯಕ್ಕೆ ಜಯವಿದೆ, ಅದನ್ನು ನಂಬಿದ್ದೇನೆ. . ಈಗ ನಾನು ನಂಬಿರುವ ಶಕ್ತಿ ದೇವತೆಯ ಹತ್ತಿರ ಹೋಗಬೇಕು ಎಂದು ತಿಳಿಸಿದರು. ಹಳ್ಳಿಯಿಂದ ಕಿವಿ ಮೇಲೆ ಹೂ ಇಟ್ಟು ಬೆಂಗಳೂರಿಗೆ ಬಂದವನಲ್ಲ ನಾನು. ರಾಜಕಾರಣ ಮಾಡೋಕೆ ಬಂದವನು, ಏನೇ ಬಂದರೂ ಎದುರಿಸುತ್ತೇನೆ.ನ್ಯಾಯಾಂಗದ ಮೇಲೆ ವಿಶ್ವಾಸವಿದೆ ಎಂದು ತಿಳಿಸಿದರು. ನನಗೆ ಯಾರ್ಯಾರು ಪ್ರೋತ್ಸಾಹ ಬೆಂಬಲ ನೀಡಿದ್ದೀರೋ, ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು, ಮುಖಂಡರು, ಕಾರ್ಯಕರ್ತರು, ವಿವಿಧ ಪಕ್ಷದ ನಾಯಕರು, ಅಧಿಕಾರಿಗಳು ಸೇರಿ ಬಹಳ ಜನ ನನ್ನ ಕಷ್ಟಕಾಲದಲ್ಲಿ ನಿಂತಿದ್ದರು. ನನ್ನ ಮನೆ ಕಾಯ್ದ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಮಿತ್ರರು, ರಾಜ್ಯದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.