ಬೆಂಗಳೂರು: ಭಾರತೀಯ ಮೂಲದವನಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ ಎಂದು ಪೋರ್ಚುಗಲ್ ಪ್ರಧಾನಿ ಅಂಟೋನಿಯಾ ಕೋಸ್ಟಾ ಹೇಳಿದ್ದಾರೆ.
ಪ್ರವಾಸಿ ಭಾರತೀಯ ದಿವಸದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾನೂ ಭಾರತೀಯ ಮೂಲದವನು. ಗೋವಾದ ಮಡಗಾಂವ್‌ನ ಪೋರ್ಚುಗೀಸ್ ಕಾಲೋನಿಯಲ್ಲಿ ನನ್ನ ಸಂಬಂಧಿಕರು ಇದ್ದಾರೆ. ಭಾರತಕ್ಕೆ ಬಂದಾಗಲೆಲ್ಲಾ ನಾನು ಅಲ್ಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.
ಭಾಷಣ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ಹೊಂದಿರುವ ಪಿಐಓ (ಪೀಪಲ್ ಆಫ್ ಇಂಡಿಯನ್ ಓರಿಜಿನ್) ಕಾರ್ಡ್ ಪ್ರದರ್ಶಿಸಿದ ಅವರು, ನನ್ನ ಮೂಲ ಬೇರುಗಳು ಇಲ್ಲೇ ಇವೆ. ನನ್ನ ತಂದೆ ಮಡಗಾಂವ್‌ನಲ್ಲಿ ವಾಸವಿದ್ದರು. ನಾನು ನನ್ನ ಬಾಲ್ಯವನ್ನು ಅಲ್ಲೇ ಕಳೆದಿದ್ದೇನೆ. ನನ್ನ ಮನೆಯೂ ಅಲ್ಲಿದೆ. ನನ್ನ ತಂದೆ ತೀರಿ ಹೋದ ಮೇಲೆ ಸಂಪರ್ಕ ಕಡಿಮೆಯಾಯಿತು ಎಂದು ತಿಳಿಸಿದರು.
ಉದ್ಯಮ, ಶಿಕ್ಷಣ ಹಾಗೂ ವಾಸಕ್ಕೆ ಪ್ರಶಸ್ತವಾದ ದೇಶ ಪೋರ್ಚುಗಲ್. ಅನಿವಾಸಿ ಭಾರತೀಯರು ಪೋರ್ಚುಗಲ್‌ನ ಅಭಿವೃದ್ಧಿಗೆ ಸಾಕಷ್ಟು ರೀತಿಯ ಕೊಡುಗೆ ನೀಡಿದ್ದಾರೆ. ಭಾರತೀಯ ಮೂಲದ ಮೊದಲ ಪೋರ್ಚುಗಲ್ ಪ್ರಧಾನಿಯೂ ನಾನಾಗಿದ್ದೇನೆ. ಭಾರತೀಯರು ಪೋರ್ಚುಗಲ್‌ನಲ್ಲಿ ಬಂಡವಾಳ ಹೂಡಿಕೆಗೆ ಮುಂದಾಗಬೇಕು ಎಂದು ಆಹ್ವಾನ ನೀಡಿದರು.
ಪೋರ್ಚುಗಲ್ ಮತ್ತು ಭಾರತ ಮೊದಲಿನಿಂದಲೂ ಉತ್ತಮ ಸಂಬಂಧ ಹೊಂದಿದ್ದು ಇದು ಮತ್ತಷ್ಟು ಗಟ್ಟಿಯಾಗಿಸಲು ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.