ಗಂಗಾವತಿ: ಗಂಗಾವತಿ ಕ್ಷೇತ್ರದಿಂದ ಎರಡು ಭಾರಿ ಗೆದ್ದಿರುವ ತಾವು 2023 ರ ವಿಧಾನಸಭೆಯ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಪುನಹ ಸ್ಪರ್ಧಿಸುವುದಾಗಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ನಮ್ಮ ಬಿಜೆಪಿ ಪಕ್ಷ ಸಿದ್ಧಾಂತಗಳ ಪಕ್ಷ ಹೈಕಮಾಂಡ್ ತತ್ವ ಸಿದ್ಧಾಂತಗಳಿಂದಾಗಿ ಎಲ್ಲಾ ಚುನಾವಣೆಯಲ್ಲಿ ವಿಕ್ಟರಿ ಸಾಧಿಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಚುನಾವಣಾ ಚಾಣಕ್ಯ ಅಮಿತ್ ಶಾ ಸೇರಿದಂತೆ ಪಕ್ಷದ ಮುಖಂಡರು ಹಿರಿಯ ತತ್ವಾದರ್ಶಗಳಲ್ಲಿ ನಂಬಿಕೆ ಇಟ್ಟು ಅದರಂತೆ ನಡೆಯುತ್ತಿರುವುದರಿಂದ ಬಿಜೆಪಿ ವಿಶ್ವದಲ್ಲಿ ಅತೀ ಹೆಚ್ಚು ಕಾರ್ಯಕರ್ತರಿರುವ ರಾಜಕೀಯ ಪಕ್ಷವಾಗಿದೆ” ಎಂದರು.
”ನಾನು ಗಂಗಾವತಿಯಿಂದ ಎರಡು ಬಾರಿ ಕಾರ್ಯಕರ್ತರು, ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದ್ದರಿಂದ ಗೆಲುವು ಸಾಧಿಸಿದ್ದು 2023ರಲ್ಲಿ ಪುನಃ ಪಕ್ಷ ಟಿಕೆಟ್ ನೀಡಲಿದ್ದು, ಮತ್ತೊಮ್ಮೆ ಜನರು ಮತ್ತು ಪಕ್ಷದ ಕಾರ್ಯಕರ್ತರು, ಪ್ರಧಾನಮಂತ್ರಿ ಮೋದಿ ಅವರ ಆಶೀರ್ವಾದದಿಂದ ಗೆಲುವು ಪಡೆಯಲಿದ್ದೇನೆ”ಎಂದರು.
ಗಂಗಾವತಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಹಿರಿಯರಾದ ಗಾಲಿ ಜನಾರ್ದನ ರೆಡ್ಡಿ ಅವರು ಹನುಮಮಾಲಾ ವಿಸರ್ಜನೆ ಸಂದರ್ಭದಲ್ಲಿ ನಂತರ ದೇವಾಲಯಗಳು ಮತ್ತು ಬಿಜೆಪಿ ಮುಖಂಡರ ಮನೆಗಳಿಗೆ ಸೌಜನ್ಯದ ಭೇಟಿ ನೀಡಿದ್ದಾರೆ ಇದನ್ನೇ ಇಟ್ಟುಕೊಂಡು ಪತ್ರಿಕಾ ಮಾಧ್ಯಮಗಳು ಗಂಗಾವತಿಯಿಂದ ಗಾಲಿ ಜನಾರ್ದನ ರೆಡ್ಡಿ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಸುದ್ದಿ ವಿಶ್ಲೇಷಣೆಗಳನ್ನು ಮಾಡಿರುವುದು ನೋಡಿದ್ದೇನೆ. ಗಾಲಿ ಜನಾರ್ದನ ರೆಡ್ಡಿ ನಮ್ಮ ಪಕ್ಷದ ಗೆಲುವಿಗೆ ಕಾರಣರಾಗಿದ್ದಾರೆ. ಅವರು ಹಿರಿಯ ಮುಖಂಡರು ಹೀಗೆ ಅವರೊಂದಿಗೆ ಗಂಗಾವತಿಯ ಅನೇಕ ಮುಖಂಡರು ಕಾಣಿಸಿಕೊಂಡಿರುವುದು ಸಹಜ ಪ್ರಕ್ರಿಯೆ. ನಾನು ಕ್ಷೇತ್ರ ಜನರ ಕೆಲಸ ಕಾರ್ಯಗಳನ್ನು ನಿತ್ಯ ಬೆಂಗಳೂರಿಗೆ ತೆರಳಿದೆ ಕೇಂದ್ರ ಸ್ಥಾನದಲ್ಲಿದ್ದರೆ ನಾನು ಸಹ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಇರುತ್ತಿದ್ದೆ. ಇದರಲ್ಲಿ ಏನು ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ” ಎಂದರು.
”ಹೈಕಮಾಂಡ್ ತತ್ವ ಸಿದ್ಧಾಂತಗಳ ಆಧಾರದಲ್ಲಿ ಗೆಲುವಿನ ಆಧಾರದಲ್ಲಿ ಟಿಕೆಟ್ ಗಳನ್ನು ನೀಡುತ್ತದೆ ಗಂಗಾವತಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಂಡಿದೆ ಕೋಟ್ಯಂತರ ರೂ. ಖರ್ಚು ಮಾಡಿ ಕಾಮಗಾರಿಗಳು ನಡೆದಿವೆ. ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಮತ್ತು ಆನೆಗೊಂದಿ ಭಾಗದ ಪ್ರವಾಸೋದ್ಯಮ ತಾಣಗಳನ್ನು ಪವಿತ್ರ ಧರ್ಮ, ಪವಿತ್ರ ಕ್ಷೇತ್ರಗಳ ಸಂರಕ್ಷಣೆಯನ್ನು ಬಿಜೆಪಿ ಸರಕಾರ ಮಾಡಿದೆ. ಈ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ” ಎಂದರು. ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಎಸ್.ರಾಘವೇಂದ್ರ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.