ಮೈಸೂರು: ʻದಯವಿಟ್ಟು ನನ್ನನ್ನು ರಾಜಕೀಯಕ್ಕೆ ಎಳೆಯಬೇಡಿ. ರಾಜಕೀಯದಲ್ಲಿ ನಾನು ಮುಗ್ದ, ಇನ್ನೂ ಅಂಬೆಗಾಲಿಡುತ್ತಿದ್ದೇನೆʼ ಎಂದು ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ರಾತ್ರೋರಾತ್ರಿ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾದ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ, ʻರಾಜಕೀಯ ಕ್ಷೇತ್ರದಲ್ಲಿ ನಾನಿನ್ನೂ ಬೆಳೆಯುವುದಿದೆ. ಈಗಷ್ಟೆ ಅಂಬೆಗಾಲಿಡುತ್ತಿದ್ದೇನೆ. ರಾಜಕೀಯ ವಿಚಾರಗಳಿಗೆ ನನ್ನನ್ನು ಎಳೆಯಬೇಡಿ ಎಂದು ಹೇಳಿದರು.
ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಆರೋಪ ಪ್ರತ್ಯಾರೋಪ ಕುರಿತು ಪ್ರತಿಕ್ರಿಯಿಸಿ, ʻಅವರಿಬ್ಬರೂ ರಾಜ್ಯ ಮುಖ್ಯಮಂತ್ರಿಗಳಾಗಿದ್ದರು. ರಾಜಕೀಯದಲ್ಲಿ ಎಲ್ಲವನ್ನೂ ಅನುಭವಿಸಿದ್ದಾರೆ. ಈಗ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಮಾಡುತ್ತಿದ್ದು, ಅದು ಅಷ್ಟಕ್ಕೇ ಸೀಮಿತವಾಗಿದೆ. ಈ ಬಗ್ಗೆ ನಾನು ಮಾತನಾಡಲ್ಲʼ ಎಂದರು.
ಇದನ್ನೂ ಓದಿ:ಆರ್ ಎಸ್ಎಸ್ ನ ಮುಖವಾಣಿಯಾಗಿ ಬಿಜೆಪಿ ನಾಯಕರು ಕೆಲಸ ಮಾಡುತ್ತಿದ್ದಾರೆ: ನಾರಾಯಣ ಸ್ವಾಮಿ
ಆರ್.ಅಶೋಕ್ ಅವರ ನೇತೃತ್ವದಲ್ಲಿ ಈಗಾಗಲೇ ಐದು ಜಿಲ್ಲೆಗಳಿಗೆ ಭೇಟಿ ನೀಡಿದ್ದೇವೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡುತ್ತಿದ್ದೇವೆ. ಕಾರ್ಯಕರ್ತರ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಲೋಕಸಭೆ, ವಿಧಾನಸಭೆ ಚುನಾವಣೆ ಗೆಲ್ಲುವುದು ಸುಲಭ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವುದು ಕಷ್ಟ. ಅಭ್ಯರ್ಥಿಗಳ ಜನಸ್ಪಂದನೆ ಮೇಲೆ ಗೆಲುವು ನಿಶ್ಚಿತವಾಗುತ್ತಿದೆಯೇ ಹೊರತು ಹಣಕಾಸಿನಿಂದಲ್ಲ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕು ಎನ್ನವುದು ಗುರಿʼ ಎಂದು ಗ್ರಾಪಂ ಚುನಾವಣೆ ಕುರಿತು ಮಾತನಾಡಿದರು.
ಎಚ್.ವಿಶ್ವನಾಥ್ ಭೇಟಿ ಕುರಿತು ಮಾತನಾಡಿ, ಯಾರನ್ನೂ ಭೇಟಿ ಮಾಡುವ ವ್ಯವಸ್ಥೆ ಇಲ್ಲ ಎಂದು ತಿಳಿಸಿದರು.