ಬೆಂಗಳೂರು: ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಅವರು ಒಂದಲ್ಲ ಒಂದು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವರು. ಪುನೀತ್ ಅವರು ನಡೆಸುತ್ತಿದ್ದ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ 1,800 ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದರು.
ಇದೀಗ ತಮಿಳು ನಟ ವಿಶಾಲ್ ಅವರು ಪುನೀತ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ತಾನು ಹೊರುವುದಾಗಿ ಹೇಳುವ ಮೂಲಕ ಹೃದಯ ವೈಶಾಲ್ಯತೆ ಮೆರೆದು ಕನ್ನಡಿಗರ ಮನ ಗೆದ್ದಿದ್ದಾರೆ.
ನಟ ವಿಶಾಲ್ ತಮಿಳು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಪುನೀತ್ ರಾಜ್ ಕುಮಾರ್ ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ವಿಶಾಲ್ ಅಗಲಿದ ಗೆಳೆಯ ಪುನೀತ್ ರಾಜ್ ಕುಮಾರ್ ರನ್ನು ನೆನೆದು ಭಾವುಕರಾದರು. ನನ್ನ ಸ್ನೇಹಿತ ಪುನೀತ್ ಒಳ್ಳೆಯ ನಟ ಮಾತ್ರ ಅಲ್ಲ. ಉತ್ತಮ ಸ್ನೇಹಿತ, ಉತ್ತಮ ವ್ಯಕ್ತಿ. ಇಂದು ಪುನೀತ್ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ. ಅವರ ಅಗಲಿಕೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಭಾರತ ಸಿನಿಮಾ ರಂಗಕ್ಕೆ ದೊಡ್ಡ ನಷ್ಟ. ಪುನೀತ್ ರಾಜ್‍ಕುಮಾರ್ ಅವರಿಗೆ ಅವರೇ ಸಾಟಿ. ಅವರಂತಹ ಮತ್ತೊಬ್ಬ ವ್ಯಕ್ತಿ ಬರಲು ಸಾಧ್ಯವಿಲ್ಲ. ಐ ಮಿಸ್ ಯೂ ಅಪ್ಪು ಎಂದು ಭಾವುಕರಾದರು.
ಇದನ್ನೂ ಓದಿ:ಯಾರೂ ಆತ್ಮ ಹತ್ಯೆ ಮಾಡಿಕೊಳ್ಳಬೇಡಿ
ಪುನೀತ್ 1,800 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಬಗ್ಗೆ ನನಗೆ ಗೊತ್ತಿದೆ. ಅದರ ಜೊತೆಗೆ ಅನಾಥಶ್ರಮ, ವೃದ್ದಾಶ್ರಮ, ಗೋಶಾಲೆ ಸೇರಿ ಇನ್ನೂ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಅವರು ಸಾವಿನ ಬಳಿಕವೂ ನೇತ್ರ ದಾನ ಮಾಡಿದ್ದಾರೆ. ಗೆಳೆಯನಾಗಿ ಅವರಿಗೆ ಮಾತು ಕೊಡುತ್ತಿದ್ದೇನೆ. 1,800ಮಕ್ಕಳಿಗೆ ನಾನು ವಿದ್ಯಾಭ‍್ಯಾಸ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ನಟ ವಿಶಾಲ್ ಹೃದಯ ವೈಶಾಲ್ಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗಿದೆ.