Advertisement
ಹೀಗೆಂದು ಹೇಳಿದವರು, ವಿಧಾನ ಪರಿ ಷತ್ತು ಮಾಜಿ ಸಭಾಪತಿ, ದೇಶದಲ್ಲೇ ಸುದೀರ್ಘ ಅವಧಿಗೆ ವಿಧಾನ ಪರಿ ಷತ್ತು ಸದಸ್ಯರಾಗಿರುವ ಖ್ಯಾತಿಯ ಬಸವರಾಜ ಹೊರಟ್ಟಿ ಅವರು.
Related Articles
Advertisement
2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ಮೇಲೆ ನಂಬಿಕೆ ಇರಿಸಿ ಸಚಿವನನ್ನಾಗಿ ಮಾಡಿದರು. ವಿಜ್ಞಾನ, ತಂತ್ರಜ್ಞಾನ, ಸಣ್ಣ ಉಳಿತಾಯ ಖಾತೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸೇರಿದಂತೆ ಹಲವು ಖಾತೆ ನಿರ್ವಹಿಸಿದ್ದೇನೆ. ನನ್ನ ನೆಚ್ಚಿನ ಶಿಕ್ಷಣ ಖಾತೆಗೆ ಬೇಡಿಕೆ ಇರಿಸಿದಾಗ, ಜೆಡಿಎಸ್ ವರಿಷ್ಠರು ವಿಪಕ್ಷದಲ್ಲಿದ್ದಾಗ ಸಾಕಷ್ಟು ಹೋರಾಟ ಮಾಡಿ ಒತ್ತಾಯಿಸಿದ್ದೀರಿ, ಇದೀಗ ಸಚಿವರಾದರೆ ಅವುಗಳ ಈಡೇರಿಕೆ ಕಷ್ಟ ಸಾಧ್ಯ ಎಂದಿದ್ದರೂ ಖಾತೆ ಪಡೆದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವನಾಗಿ 1,039 ಸರಕಾರಿ ಪ್ರೌಢಶಾಲೆ, 500 ಪಿಯುಸಿ ಕಾಲೇಜುಗಳನ್ನು ಮಂಜೂರು ಮಾಡಿದ್ದೆ. ಶಾಲಾ-ಕಾಲೇಜು ಕಟ್ಟಡ ನಿರ್ಮಾಣಕ್ಕೆ 500 ಕೋಟಿ ರೂ. ಬಿಡುಗಡೆ ಮಾಡಿದ್ದೆ. ಎಸ್ಸೆಸ್ಸೆಲ್ಸಿವರೆಗೆ ಬಿಸಿಯೂಟ ವಿಸ್ತರಣೆ, 1984-94ವರೆಗಿನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವುದು, ಶಿಕ್ಷಕರ ನೇಮಕಾತಿ, ಪಾರದರ್ಶಕ ಶಿಕ್ಷಕರ ವರ್ಗಾವಣೆ ನೀತಿ ಹತ್ತು ಹಲವು..
ಶಿಕ್ಷಣ ಇಲಾಖೆಯನ್ನು ಸಮಸ್ಯೆ ರಹಿತವಾಗಿಸುವುದು ಕಷ್ಟಸಾಧ್ಯವಾದರೂ ಸಚಿವನಾಗಿದ್ದಾಗ ಶಿಕ್ಷಕ ಸಮುದಾಯಕ್ಕೆ ಮಾನಸಿಕ ನೆಮ್ಮದಿ, ಬಡ್ತಿ ಸಮಸ್ಯೆ ನಿವಾರಣೆ, ವೇತನ, ಸೇವಾ ಭದ್ರತೆ ಇನ್ನಿತರೆ ಸೌಲಭ್ಯಗಳ ವಿಚಾರದಲ್ಲಿ ಪ್ರಾಮಾಣಿಕ ಯತ್ನ ಕೈಗೊಂಡಿದ್ದೇನೆ. ಚುನಾವಣೆ ಬಂದಾಗಲೊಮ್ಮೆ ಶಿಕ್ಷಕರ ಮೇಲೆ ಮಮಕಾರ ತೋರುವ, ಪೊಳ್ಳು ಭರವಸೆ ನೀಡುವ ಪ್ರತಿನಿಧಿ ನಾನಲ್ಲ. ಚುನಾವಣೆ ಇರಲಿ, ಇಲ್ಲದಿರಲಿ ಶಿಕ್ಷಕ ಸಮುದಾಯದೊಂದಿಗಿನ ನನ್ನ ನಂಟು ಕಿಂಚಿತ್ತು ಕಡಿಮೆಯಾಗಿಲ್ಲ.
ಕಳೆದ 42 ವರ್ಷಗಳಲ್ಲಿ ಏಳು ಚುನಾವಣೆಗಳನ್ನು ಎದುರಿಸಿದ್ದೇನೆ, ಗೆಲುವು ಸಾಧಿಸಿದ್ದೇನೆ ಎನ್ನುವುದಕ್ಕಿಂತ ಶಿಕ್ಷಕರು ನನ್ನನ್ನು ಗೆಲ್ಲಿಸಿದ್ದಾರೆ. ಪ್ರತಿ ಚುನಾವಣೆ ಸಂದರ್ಭದಲ್ಲೂ ಆರು ವರ್ಷಗಳ ಅವಧಿಯಲ್ಲಿ ನಾನೇನು ಮಾಡಿದ್ದೇನೆ ಎಂಬುದರ ಅಂಕಿ-ಅಂಶದ ಮಾಹಿತಿ, ಸರಕಾರಿ ಆದೇಶಗಳ ಸಮೇತ ಕಿರುಹೊತ್ತಿಗೆ ಹೊರಡಿಸಿ ಶಿಕ್ಷಕ ಸಮುದಾಯಕ್ಕೆ ವರದಿ ಒಪ್ಪಿಸುತ್ತ ಬಂದಿದ್ದೇನೆ.
8ನೇ ಬಾರಿಯ ಸ್ಪರ್ಧೆ ವೇಳೆಯೂ ಏಳನೇ ಅವಧಿಯ ಸಾಧನೆ ಪುಸ್ತಕವನ್ನು ಶಿಕ್ಷಕ ಸಮುದಾಯದ ಮುಂದಿಟ್ಟಿದ್ದೇನೆ. ನನ್ನನ್ನು ಟೀಕಿಸುವ ವಿರೋಧಿಗಳು ಸಾಧನೆ ಇರಲಿ, ಶಿಕ್ಷಕರ ಪರ ತಾವೇನು ಹೋರಾಟ ಮಾಡಿದ್ದೇವೆ ಎಂದಾದರೂ ಹೇಳಲಿ.
ವಾಗ್ಧಾನ ಉಲ್ಲಂಘಿಸಿಲ್ಲ: ಸುಮಾರು 42 ವರ್ಷಗಳಿಂದಲೂ ನನ್ನನ್ನು ಬೆಳೆಸಿದ, ಬೆನ್ನು ತಟ್ಟಿದ ಶಿಕ್ಷಕ ಸಮುದಾಯಕ್ಕೆ ನೀಡಿದ ವಾಗ್ಧಾನವನ್ನು ಇಂದಿಗೂ ಕಿಂಚಿತ್ತು ಲೋಪವಿಲ್ಲದೆ ನಿಯತ್ತಿನಿಂದ ಪಾಲಿಸಿಕೊಂಡು ಬಂದಿದ್ದೇನೆ. ಅದು 1981ರ ಕಾಲಘಟ್ಟ. ಜುಲೈ 9ರಂದು ಪರಿಷತ್ತಿನಲ್ಲಿ ಅಂದಿನ ಸಭಾಪತಿ ಬಸವರಾಜೇಶ್ವರಿಯವರು ಮೊದಲ ಬಾರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡಿದಾಗ ಶಿಕ್ಷಕರ ಸಮಸ್ಯೆ, ಶಿಕ್ಷಣದ ಕೊರತೆ ಬಗ್ಗೆ ಗಮನ ಸೆಳೆದಿದ್ದೆ. ಅಲ್ಲಿಂದ ಇಲ್ಲಿವರೆಗೆ ಅಧಿಕಾರ ಇರಲಿ, ಇಲ್ಲದಿರಲಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ್ದೇನೆ. ಶಿಕ್ಷಕರ ಜಾತಿ ನೋಡದೆ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ಮತ ಚಲಾಯಿಸಿದ ಶಿಕ್ಷಕರಿಗೂ ಮರು ಮಾತನಾಡದೆ ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ. ಹೊಸ ಪಿಂಚಣಿ ನೀತಿ ವಿರುದ್ಧ ಧ್ವನಿ ಎತ್ತಿದ್ದೇನೆ. ಹೋರಾಟದ ಜತೆಗೆ ಅನೇಕ ಸಮಾವೇಶದಲ್ಲಿ ಭಾಗವಹಿಸಿದ್ದೇನೆ. ಇದು ದೇಶದ ಸಮಸ್ಯೆ. ಸಭಾಪತಿಯಾಗಿ ಸಿಎಂ ಜತೆ ಸಭೆ ಮಾಡಿ ಪರಿಹಾರಕ್ಕೆ ಸರಕಾರಕ್ಕೆ ನಿರ್ದೇಶನ ನೀಡಿದ್ದೇನೆ. ನನ್ನದೇ ಅಧ್ಯಕ್ಷತೆಯ ಕಾಲ್ಪನಿಕ ವೇತನ ವರದಿ ಜಾರಿಗೆ ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಅಧಿಕಾರಿಗಳು ದಾರಿ ತಪ್ಪಿಸುವ ಕೆಲಸ ಮಾಡಿದಾಗಲೂ ಸರಕಾರಕ್ಕೆ ಮನವರಿಕೆ ಮಾಡಿ ಜಾರಿಗೆ ಯತ್ನಿಸಿದ್ದೇನೆ. ಅನುದಾನ ರಹಿತ-ಅನುದಾನಿತ, ಸರಕಾರಿ ಎನ್ನದೇ ಎಲ್ಲ ಶಿಕ್ಷಕರ ನೋವಿಗೆ ಸ್ಪಂದಿಸಿದ್ದೇನೆ. ಅವರ ವಿಶ್ವಾಸಕ್ಕೆ ಆತ್ಮವಂಚನೆ ಕೆಲಸ ಇಲ್ಲಿಯವರೆಗೆ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ವಿರೋಧಿಗಳ ಕ್ಷುಲ್ಲಕ ಟೀಕೆಗಳಿಗೆ ಉತ್ತರ ಕೊಡುವ ಬದಲು, ಶಿಕ್ಷಕ ಸಮುದಾಯದ ಹಿತಕ್ಕೆ ಹೆಚ್ಚಿನ ಚಿಂತನೆ, ಸಮಯ ಮೀಸಲಿಡಲು ನಿರ್ಧರಿಸಿದ್ದೇನೆ.
ಸಂತೋಷದಿಂದಲೇ ಬಿಜೆಪಿ ಸೇರ್ಪಡೆ: ಬದಲಾದ ರಾಜಕೀಯ ಸ್ಥಿತಿ, ಶಿಕ್ಷಕರು ಅದರಲ್ಲೂ ಯುವ ಶಿಕ್ಷಕರ ಅನಿಸಿಕೆ ಮೇರೆಗೆ ಸಂತೋಷದಿಂದ ಬಿಜೆಪಿ ಸೇರಿದ್ದೇನೆ. 1980ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನ ಪರಿಷತ್ತಿಗೆ ಹೋದಾಗ ರಾಮಕೃಷ್ಣ ಹೆಗಡೆಯವರು ನನ್ನನ್ನು ಗುರುತಿಸಿದರು. 1986ರಲ್ಲಿ ಜನತಾ ಪಕ್ಷದಿಂದ ಟಿಕೆಟ್ ನೀಡಿದರು. ಅವರ ಜೀವಿತಾವಧಿವರೆಗೂ ಅವರೊಂದಿಗಿದ್ದೆ. ಲೋಕಶಕ್ತಿಯಿಂದಲೂ ಗೆಲುವು ಸಾಧಿಸಿದೆ. ನಂತರ ಜೆಡಿಎಸ್ ಸೇರಿ ಮೂರು ಬಾರಿ ಆಯ್ಕೆಯಾದೆ, ನಿಷ್ಠೆಯಿಂದ ಪಕ್ಷದಲ್ಲಿದ್ದೆ. ಇದೀಗ ರಾಜಕೀಯ ಸ್ಥಿತಿ ಬದಲಾಗಿದೆ. ಶಿಕ್ಷಕರ ಅನಿಸಿಕೆಗಳ ಹೊರತಾಗಿ ನಾನಿಲ್ಲ. ಬಿಜೆಪಿ ಸೇರಿದ್ದೇನೆ. ಬಿಜೆಪಿ ಎಲ್ಲ ನಾಯಕರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ಚುನಾವಣೆಯಲ್ಲಿ ನನ್ನ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ. ಯಾವ ಪಕ್ಷದಲ್ಲಿರುತ್ತೇನೋ ಆ ಪಕ್ಷಕ್ಕೆ ನಿಷ್ಠೆ ನನ್ನ ಜಾಯಮಾನ.
“”ರಾಜಕೀಯ ಹಿನ್ನೆಲೆಯೇ ಇಲ್ಲದ, ಸಾಮಾನ್ಯ ಶಿಕ್ಷಕನಾಗಿದ್ದ ನನ್ನನ್ನು ಏಳು ಬಾರಿ ವಿಧಾನ ಪರಿಷತ್ತು ಸದಸ್ಯನನ್ನಾಗಿಸಿ ದೇಶದಲ್ಲೇ ದಾಖಲೆಯಾಗುವಂತೆ ಮಾಡಿದ್ದು, ಸಚಿವ-ಸಭಾಪತಿ ಸ್ಥಾನಕ್ಕೇರುವಂತೆ ಮಾಡಿದ್ದು, ಶಿಕ್ಷಕರ ಬಲ ಹಾಗೂ ಆಶೀರ್ವಾದ..” – ಬಸವರಾಜ ಹೊರಟ್ಟಿ
-ಅಮರೇಗೌಡ ಗೋನವಾರ