ಹುಬ್ಬಳ್ಳಿ: ಬಿಜೆಪಿ ಸರಕಾರಕ್ಕೆ ತೊಂದರೆಯಾದರೆ ನಾನಿದ್ದೇನೆ ಎಂದಿರುವುದು ಅಧಿಕಾರ ಹಂಚಿಕೊಳ್ಳಲು ಅಲ್ಲ. ಮಧ್ಯಂತರ ಚುನಾವಣೆ ಎದುರಾಗಿ ಸಂತ್ರಸ್ತರು, ರೈತರಿಗೆ ತೊಂದರೆ ಆಗದಿರಲಿ ಎಂಬುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ಹೇಗಾದರೂ ವ್ಯಾಖ್ಯಾನ ಮಾಡಿಕೊಳ್ಳಲಿ. ಫೋನ್ ಕದ್ದಾಲಿಕೆ ಹಾಗೂ ಐಎಂಎ ಪ್ರಕರಣಗಳ ಹಿನ್ನೆಲೆಯಲ್ಲಿ ಬಿಜೆಪಿ ಓಲೈಕೆಗೆ ಇಂತಹ ಹೇಳಿಕೆ ನೀಡಿದ್ದೇನೆ ಎಂದು ಕೆಲವರು ಹೇಳುತ್ತಾರೆ. ಯಾವುದೇ ಹೆದರಿಕೆ ಬೆದರಿಕೆಗೆ ಜಗ್ಗುವ ಶರಣಾಗುವ ಜಾಯಮಾನ ನನ್ನದಲ್ಲ ಎಂದರು.
ರಾಜ್ಯದ ಜನತೆಗೆ ಮತ್ತೊಂದು ಮಧ್ಯಂತರ ಚುನಾವಣೆ ಬೇಡ ನೆರೆ, ಬರ ಸಮಸ್ಯೆಗಳಿಗೆ ಸಮರ್ಪಕ ಸ್ಪಂದನೆ ಇಲ್ಲವಾಗಿದೆ. ಇಂತಹದ್ದರಲ್ಲಿ ರಾಷ್ಟ್ರಪತಿ ಆಳ್ವಿಕೆ ಬಂದರೆ ಅಧಿಕಾರಿಗಳ ದರ್ಬಾರು ಆರಂಭವಾಗಿ ಸಂತ್ರಸ್ತರು ರೈತರ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ ಎಂಬುದು ನನ್ನ ಕಾಳಜಿಯೇ ವಿನಹ, ಬಿಜೆಪಿ ಬಗ್ಗೆ ಮೃದು ಧೋರಣೆ ಇಲ್ಲ. ಸಂತ್ರಸ್ತರು, ರೈತರ ಬಗ್ಗೆ ಕಾಳಜಿ ತೋರುವ ಯಾವುದೇ ಪಕ್ಷದ ಸರಕಾರಕ್ಕೂ ಇದೇ ಹೇಳುತ್ತೇನೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಯಾಗಲಿ ನಾನೇಕೆ ಬೇಡ ಎನ್ನಲಿ. ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿದರೆ ಸಾಕು ಎಂದರು.
ನೆರೆ ಸಂತ್ರಸ್ತರು, ರೈತರ ಸ್ಥಿತಿ ಬಗ್ಗೆ ನಾನು ಕೈಗೊಂಡ ಪ್ರವಾಸ ವೇಳೆ ಜನರಿಂದ ಪಡೆದ ಮಾಹಿತಿ ನೀಡಲು ಮುಖ್ಯಮಂತ್ರಿಯವರ ಸಮಯ ಕೇಳುವೆ ಸಮಯ ನೀಡಿದರೆ ಚರ್ಚಿಸುವೆ ಎಂದರು.
ವಿಧಾನಸಭೆ ವಿಪಕ್ಷ ನಾಯಕನ ಸಿದ್ದರಾಮಯ್ಯನವರು ಇತ್ತೀಚೆಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವೆಲ್ಲ ಜಾತಿವಾದಿ, ಕೋಮುವಾದಿಗಳು ಅವರಷ್ಟೇ ಜಾತ್ಯತೀತವಾದಿ ಎಂದು ವ್ಯಂಗ್ಯವಾಡಿದರು.