Advertisement

ಸರ್ಕಾರ ಕೆಡವಿದ್ದು ನಾನಲ್ಲ, ಕಾಂಗ್ರೆಸ್‌ ನಾಯಕರು

10:46 PM Nov 27, 2019 | Team Udayavani |

ಮೈತ್ರಿ ಸರ್ಕಾರದ ಪತನದಲ್ಲಿ ಮುಂಚೂಣಿ ನಾಯಕರು ಎಂದೇ ಗುರುತಿಸಿಕೊಂಡಿದ್ದ ಗೋಕಾಕದ ರಮೇಶ ಜಾರಕಿಹೊಳಿ ಜನರ ಮನದಿಂದ ದೂರವಾಗಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ. ಬಿಡುವಿಲ್ಲದ ಪ್ರಚಾರದ ನಡುವೆಯೂ ರಮೇಶ ಜಾರಕಿಹೊಳಿ “ಉದಯವಾಣಿ’ ಕೇಳಿದ ಪಂಚ ಪ್ರಶ್ನೆಗೆ ಉತ್ತರಿಸಿದರು.

Advertisement

1. ಚುನಾವಣೆ ಸ್ಪರ್ಧೆಯನ್ನು ಯಾವ ವಿಷಯ ಆಧರಿಸಿ ಎದುರಿಸುತ್ತೀರಿ?

2. ಮತದಾರರು ನಿಮ್ಮನ್ನು ಮರು ಆಯ್ಕೆ ಯಾಕೆ ಮಾಡಬೇಕು?

3. ಅನರ್ಹರು ಎಂದು ಕರೆಯಿಸಿಕೊಳ್ಳಲು ಮುಜುಗರ ಆಗುವುದಿಲ್ಲವೇ?

4. ಗೆದ್ದರೆ ಇಷ್ಟು ದಿನ ನೀವು ವಿರೋಧಿಸಿದ್ದ ಸಿದ್ಧಾಂತ ಈಗ ಅಪ್ಪಿಕೊಂಡಿರುವ ಬಿಜೆಪಿ ಸಿದ್ಧಾಂತ ಹೊಂದಾಣಿಕೆ ಆಗುತ್ತದೆಯೇ? ಸೋತರೆ ರಾಜಕೀಯ ವನವಾಸವೇ?

Advertisement

5. ಸರ್ಕಾರ ಉರುಳಿಸಲು ಮತ್ತು ಸೃಷ್ಟಿಸಲು ನಿಮ್ಮ ಹಿಂದೆ ಇದ್ದ ಶಕ್ತಿ ಯಾವುದು?

1. ಗೋಕಾಕ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಚುನಾವಣೆಯ ಮುಖ್ಯ ವಿಷಯ. ಏನೇ ಆರೋಪ ಮಾಡುವುದಿದ್ದರೂ ಅದು ರಾಜಕೀಯಕ್ಕೆ ಮಾತ್ರ. ಅದರೆ ಜನರ ಅಭಿವೃದ್ಧಿ ಬಿಟ್ಟು ಬೇರೆ ವಿಷಯ ನಾನು ಪ್ರಸ್ತಾಪ ಮಾಡುತ್ತಿಲ್ಲ. ಮುಖ್ಯವಾಗಿ ನೆರೆ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಬೇಕಿದೆ. ಅದನ್ನು ಚುನಾವಣೆಯಲ್ಲಿ ಪ್ರಸ್ತಾಪ ಮಾಡಿ ಜನರಿಗೆ ಧೈರ್ಯ ಹೇಳುತ್ತಿದ್ದೇನೆ. ಕ್ಷೇತ್ರವನ್ನು ನೀರಾವರಿಗೆ ಒಳಪಡಿಸಬೇಕಿದೆ.

2. ಕ್ಷೇತ್ರದ ಸುಧಾರಣೆಗೆ ನನಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದೇನೆ. ಜನರ ಮನಸ್ಸು ಗೆದ್ದಿದ್ದೇನೆ. ಅದೇ ನನ್ನ ದೊಡ್ಡ ಸಾಧನೆ. ಸತತ ಐದು ಬಾರಿ ಜನರು ನನಗೆ ಆಶೀರ್ವಾದ ಮಾಡಿದರು. ಕೆಲಸ ಮಾಡದೇ ಇದ್ದರೆ ಈ ರೀತಿ ಅವಕಾಶ ಸಿಗುತ್ತಿರಲಿಲ್ಲ. ಈಗಲೂ ಸಹ ಜನರಿಗೆ ನನ್ನ ಮೇಲೆ ವಿಶ್ವಾಸವಿದೆ. ಕ್ಷೇತ್ರವನ್ನು ಎಲ್ಲ ರೀತಿಯಿಂದ ಸುಧಾರಣೆ ಮಾಡುವ ಕನಸಿದೆ. ಬಿಜೆಪಿ ಸರ್ಕಾರದಲ್ಲಿ ಇದು ಸಾಧ್ಯವಾಗುವುದರಿಂದ ನನ್ನನ್ನು ಮರು ಆಯ್ಕೆ ಮಾಡಿ ಎಂದು ಕೇಳುತ್ತಿದ್ದೇನೆ.

3. ಸ್ವಾಮಿ ನಾವು ಅನರ್ಹರಲ್ಲ. ಅದನ್ನು ಜನರು ತೀರ್ಮಾನ ಮಾಡುತ್ತಾರೆ. ಕ್ಷೇತ್ರದ ಜನರು ನನ್ನನ್ನು ಅನರ್ಹ ಎಂದು ಕರೆದಿಲ್ಲ. ಅವರೇ ನನ್ನನ್ನು ಅಪ್ಪಿಕೊಂಡಿರುವಾಗ ಮುಜುಗರದ ಮಾತು ಎಲ್ಲಿಂದ ಬಂತು. ಚುನಾವಣೆಯಲ್ಲಿ ಗೆದ್ದು ಬಂದು ನಾವು ಅನರ್ಹರಲ್ಲ ಎಂದು ತೋರಿಸುತ್ತೇವೆ.

4. ರಾಜಕಾರಣಿಗಳು ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದಿರುತ್ತಾರೆ. ಆಗ ಬೇರೆ ಪಕ್ಷದಲ್ಲಿದ್ದರಿಂದ ಚುನಾವಣೆಯಲ್ಲಿ ವಿರೋಧ ಮಾಡಿದ್ದೆ. ಆದರೆ, ಹಿಂದಿನ ಸರ್ಕಾರದಲ್ಲಿ ನಮ್ಮ ನಿರೀಕ್ಷೆಯಂತೆ ಕೆಲಸಗಳು ಆಗಲಿಲ್ಲ, ಬಿಜೆಪಿ ಅಭಿವೃದ್ಧಿ ಪರ ಇರುವ ಪಕ್ಷ. ಸ್ಥಿರ ಸರ್ಕಾರ ಇರುತ್ತದೆ. ಕ್ಷೇತ್ರದ ಪ್ರಗತಿ ನಮಗೆ ಮುಖ್ಯವಾಗಿರುವುದರಿಂದ ನಮಗೆ ಬಿಜೆಪಿ ಸಿದ್ಧಾಂತದಲ್ಲಿ ಯಾವುದೇ ಸಮಸ್ಯೆ ಇಲ್ಲ. ನಾವು ಆಲೋಚನೆ ಮಾಡಿಯೇ ಬಿಜೆಪಿಗೆ ಬಂದಿದ್ದೇವೆ.

5. ಸೋಲಿನ ಮಾತೇ ಇಲ್ಲ. ಅಧಿಕಾರದ ಆಸೆಗಾಗಿ ನಾನು ರಾಜಕೀಯ ಮಾಡುತ್ತಿಲ್ಲ. ಗೆಲ್ಲುವ ದೃಢ ವಿಶ್ವಾಸವಿದೆ. ಹೀಗಿರುವಾಗ ರಾಜಕೀಯದಿಂದ ದೂರ ಉಳಿಯುವುದು ಅಸಾಧ್ಯದ ಮಾತು. ರಾಜಕೀಯ ವನವಾಸದ ಪ್ರಶ್ನೆಯೇ ಇಲ್ಲ. ಸರ್ಕಾರ ಉರುಳಿಸಲು ಅಥವಾ ಸೃಷ್ಟಿಸಲು ನಮ್ಮ ಹಿಂದೆ ಯಾವ ಶಕ್ತಿಯೂ ಇರಲಿಲ್ಲ. ಇದನ್ನು ನಾನು ಸಾಕಷ್ಟು ಸಲ ಹೇಳಿದ್ದೇನೆ. ಕಾಂಗ್ರೆಸ್‌ ನಾಯಕರಿಂದಲೇ ಸರ್ಕಾರ ಉರುಳಿತು. ನಾವು ಬೇಸತ್ತು ಅದರಿಂದ ಹೊರ ಬಂದಿದ್ದೇವೆ. ಸರ್ಕಾರ ಉರುಳಿಸುವ ಅಥವಾ ಸೃಷ್ಟಿಸುವ ಕೆಲಸವನ್ನು ನಾವು ಮಾಡಿಲ್ಲ. ಅದಕ್ಕೆ ನಮಗೆ ಯಾರೂ ಶಕ್ತಿಯಾಗಿಯೂ ನಿಂತಿಲ್ಲ. ಅದೆಲ್ಲ ಊಹಾಪೋಹದ ಮಾತು. ನಮಗೆ ನಾವು ನಂಬಿದ ದೇವರು. ತಂದೆ-ತಾಯಿ ಹಾಗೂ ಜನರು ನಮ್ಮ ಹಿಂದಿರುವ ದೊಡ್ಡ ಶಕ್ತಿ.

Advertisement

Udayavani is now on Telegram. Click here to join our channel and stay updated with the latest news.

Next