Advertisement

ನಾನು ಕೃಷಿ ಮಾತ್ರವಲ್ಲ, ಅಭಿವೃದ್ಧಿ ಪರವೂ ಹೌದು

11:35 AM Jun 16, 2018 | Team Udayavani |

ಬೆಂಗಳೂರು: “ನಾನು ಬರೀ ರೈತರ ಪರ ಅಲ್ಲ; ಅಭಿವೃದ್ಧಿ ಪರವೂ ಹೌದು’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಬೆಂಗಳೂರು ಶಾಖೆ ಹಮ್ಮಿಕೊಂಡಿದ್ದ 15ನೇ ರಾಜ್ಯಮಟ್ಟದ ಲೆಕ್ಕಪರಿಶೋಧಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

Advertisement

“ಕೇವಲ ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂಬ ಭಾವನೆ ಬೇಡ. ಅಭಿವೃದ್ಧಿ ಪರವಾಗಿಯೂ ಕೆಲಸ ಮಾಡುತ್ತೇನೆ. ಈ ಹಿಂದೆ 20 ತಿಂಗಳ ಅವಧಿಯಲ್ಲಿ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳೇ ಇದಕ್ಕೆ ಸಾಕ್ಷಿ. ಆದರೆ, ಆ ಕೆಲಸಗಳನ್ನು ಮಾರ್ಕೆಟಿಂಗ್‌ ಮಾಡಲಿಲ್ಲ,’ ಎಂದು ಹೇಳಿದರು. 

“ಮೆಟ್ರೋಗೆ ತ್ವರಿತಗತಿಯಲ್ಲಿ ಅನುಮೋದನೆ ನೀಡಿ ಅಂದಿನ ಪ್ರಧಾನಿಯಿಂದ ಚಾಲನೆ ಕೊಡಿಸಿದ್ದು, ರಸ್ತೆ ವಿಸ್ತರಣೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ಎತ್ತರಿಸಿದ ರಸ್ತೆ ನಿರ್ಮಾಣ ಸೇರಿ ಹಲವಾರು ಯೋಜನೆಗಳಿಗೆ ಚಾಲನೆ ದೊರೆತದ್ದು ನನ್ನ ಆ 20 ತಿಂಗಳ ಅವಧಿಯಲ್ಲೇ. ಅಷ್ಟೇ ಅಲ್ಲ, ರಾಜಕಾಲುವೆಗಳ ಮೇಲೆ ಎತ್ತರಿಸಿದ ಮಾರ್ಗ, ಟನಲ್‌ ರಸ್ತೆಗೆ ಟೆಂಡರ್‌, ಹೊರವರ್ತುಲ ರಸ್ತೆಯಲ್ಲಿ ಪೆರಿಫ‌ರಲ್‌ ರಸ್ತೆ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದರು.

ಅಭಿವೃದ್ಧಿಗೆ “ವಿಜನ್‌’: ಮೂಲ ಸೌಕರ್ಯ ಸೇರಿ ಹಲವಾರು ಸಮಸ್ಯೆಗಳು ಬೆಂಗಳೂರನ್ನು ಕಾಡುತ್ತಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ “ವಿಜನ್‌’ ಹೊಂದಿದ್ದು, ಹಂತ-ಹಂತವಾಗಿ ಕಾರ್ಯರೂಪಕ್ಕೆ ತರಲಾಗುವುದು. ತೆರಿಗೆದಾರರ ಹಣ ಯಾವುದೇ ಕಾರಣಕ್ಕೂ ದುರ್ಬಳಕೆ ಆಗಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.

ರಾಜ್ಯದ ತೆರಿಗೆ ಪಾಲನ್ನು ಸರ್ಕಾರ ಪಡೆಯುವಲ್ಲಿ ಲೆಕ್ಕಪರಿಶೋಧಕರ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆ ಬೆಂಗಳೂರು ಶಾಖೆ ನಿಕಟಪೂರ್ವ ಅಧ್ಯಕ್ಷ ಕೋಟಾ ಎಸ್‌. ಶ್ರೀನಿವಾಸ್‌, ಉಪಾಧ್ಯಕ್ಷ ಜೆ.ಸಿ. ಶರ್ಮಾ, ಕಾರ್ಯದರ್ಶಿ ರವೀಂದ್ರ ಎಸ್‌. ಕೋರೆ ಮತ್ತಿತರರು ಉಪಸ್ಥಿತರಿದ್ದರು. 

Advertisement

ವಸಂತನಗರ ರಸ್ತೆಯಲ್ಲಿರುವ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಕಟ್ಟಡದ ಜಾಗವನ್ನು ಶಾಶ್ವತವಾಗಿ ಆ ಸಂಸ್ಥೆಗೇ ನೀಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. 1991ರಲ್ಲಿ ಈ ಜಾಗವನ್ನು ಸಂಸ್ಥೆ ಲೀಸ್‌ ರೂಪದಲ್ಲಿ ಪಡೆದಿದ್ದು, ಈಗ ಲೀಸ್‌ ಅವಧಿ ಪೂರ್ಣಗೊಳ್ಳುತ್ತಿದೆ.

ಲೀಸ್‌ ನವೀಕರಣಕ್ಕಿಂತ ಸೂಕ್ತ ದರ ನಿಗದಿ ಮಾಡಿ, ತಮಗೇ ಸ್ವತ್ತು ಮಾಡಿಕೊಡಲು ಸರ್ಕಾರ ತಯಾರಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ಸಂಸ್ಥೆ ಅಧ್ಯಕ್ಷ ಶ್ರವಣ್‌ ಗುಡತೂರ್‌, ಲೆಕ್ಕಪರಿಶೋಧಕರ ಸಂಸ್ಥೆಗೆ ಸ್ವಂತ ಕಟ್ಟಡ ಕೂಡ ಇಲ್ಲ. ಈಗಿರುವ ಕಟ್ಟಡವು ಗುತ್ತಿಗೆ ರೂಪದಲ್ಲಿದ್ದು, ಗುತ್ತಿಗೆ ಅವಧಿ ಕೂಡ ಪೂರ್ಣಗೊಳ್ಳುತ್ತಿದೆ. ಸ್ವಂತ ಕಟ್ಟಡ ಅಥವಾ ಗುತ್ತಿಗೆ ನವೀಕರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next