Advertisement

ನೋವಿನಿಂದ ಅಧಿಕಾರ ಸ್ವೀಕಾರ, ಅಚ್ಚರಿಯ ರಾಜಕೀಯ ಬೆಳವಣಿಗೆ; HDK

11:31 AM May 23, 2018 | Team Udayavani |

ಮೈಸೂರು:ಸಾಲಮನ್ನಾ ವಿಚಾರದಲ್ಲಿ ನಾನು ಯೂಟರ್ನ್ ತೆಗೆದುಕೊಂಡಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಕಲ್ಪನೆಗಳ ಜತೆ ಯಾವುದೇ ರಾಜೀ ಆಗಲ್ಲ. ಈ ಬಗ್ಗೆ ಯಾವುದೇ ಅನುಮಾನ ಇಟ್ಟುಕೊಳ್ಳಬೇಡಿ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಬುಧವಾರ ಪತ್ನಿ ಅನಿತಾಕುಮಾರಸ್ವಾಮಿ ಜತೆ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು.

ಮನಸ್ಸಿನಲ್ಲಿ ಒಂದಷ್ಟು ನೋವು ತುಂಬಿಕೊಂಡೇ ಅಧಿಕಾರ ಸ್ವೀಕರಿಸುತ್ತಿದ್ದೇನೆ. ಜನರ ಸಂಪೂರ್ಣ ಆಶೀರ್ವಾದದೊಂದಿಗೆ ಮುಖ್ಯಮಂತ್ರಿ ಆಗಬೇಕು ಎಂದು ನಿರೀಕ್ಷಿಸಿದ್ದೆ. ಆದರೆ ಜನರು ಅದಕ್ಕೆ ಸಹಕಾರ ನೀಡಲಿಲ್ಲ. ಯಾರೂ ಊಹಿಸದ ಅಚ್ಚರಿಯ ರಾಜಕೀಯ ಬೆಳವಣಿಗೆ ಇದು ಎಂದರು.

ನಾನೀಗ ಸಮ್ಮಿಶ್ರ ಸರ್ಕಾರದಲ್ಲಿ ಇದ್ದೇನೆ. ಕಾಂಗ್ರೆಸ್ ಪಕ್ಷ ಕೂಡಾ ಪ್ರಣಾಳಿಕೆಯಲ್ಲಿ ಹಲವು ಭರವಸೆ ಕೊಟ್ಟಿದೆ. ಹೀಗಾಗಿ ಕಾಂಗ್ರೆಸ್ ಜತೆ ಚರ್ಚಿಸಿ ನಮ್ಮ ಭರವಸೆಗಳ ಈಡೇರಿಸಬೇಕಾಗುತ್ತದೆ. ಹಾಗೂ ಆರ್ಥಿಕ ಪರಿಸ್ಥಿತಿಗೆ ಧಕ್ಕೆಯಾಗದಂತೆ ಸಾಲಮನ್ನಾ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇತ್ತು ಆದರೆ ಈ ರೀತಿ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರಲಿಲ್ಲ ಎಂದು ಹೇಳಿದರು.

Advertisement

ಜಾತಿಯ ವ್ಯಾಮೋಹ ಬಿಡಿ ಎಂದು ಹೇಳಿರುವ ಕುಮಾರಸ್ವಾಮಿ, ನಾನು ಒಂದು ವರ್ಗಕ್ಕೆ ಸೀಮಿತವಾದ ಮುಖ್ಯಮಂತ್ರಿ ಆಗಿರಲ್ಲ. ರಾಜ್ಯದ ಆರೂವರೆ ಕೋಟಿ ಜನರ ಜನಸೇವಕ ನಾನು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next