ಪಿರಿಯಾಪಟ್ಟಣ: ನಾನು ಯಾವುದೇ ಲಾಭಿಯ ಹಿಂದಿಲ್ಲ, ಹೊಂದಾಣಿಕೆ-ಒಳ ಒಪ್ಪಂದ ಯಾವುದಕ್ಕೂ ನಾವು ಸಿದ್ದರಿಲ್ಲ, ನಮ್ಮ ಸ್ವಂತ ಬಲದ ಮೇಲೆ ಚುನಾವಣೆ ಎದುರಿಸಲು ಬಂದಿದ್ದೇವೆ ತಾಲ್ಲೂಕಿನ ಜನತೆ ಆಶೀರ್ವಾದ ಮಾಡಬೇಕು ಎಂದು ಬಿಜೆಪಿ ಪಕ್ಷದ ನಿಯೋಜಿತ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಮನವಿ ಮಾಡಿದರು.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಾನು 5 ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ 2 ಬಾರಿ ಸಂಸದನಾಗಿ, ಒಮ್ಮೆ ಶಾಸಕನಾಗಿ ವಿಧಾನ ಪರಿಷತ್ ಸದಸ್ಯನಾಗಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಆದರೂ ಕಳೆದ 3 ಲೋಕಸಭಾ ಚುಣಾವಣೆಗಳಲ್ಲಿ ಸೋತಿದ್ದೇನೆ. ಇದು ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ 14 ವರ್ಷದ ರಾಜಕೀಯ ವನವಾಸ ಕೊನೆಯಾಗಬೇಕು ಎಂಬ ಉದ್ದೇಶದಿಂದ ಪಿರಿಯಾಪಟ್ಟಣವನ್ನು ಆಯ್ಕೆ ಮಾಡಿಕೊಂಡು ಸ್ಪರ್ಧೆ ಮಾಡುತ್ತಿದ್ದೇನೆ ತಾಲೂಕಿನ ಜನತೆ ಸಹಕಾರ ನೀಡಬೇಕು. ತಾಲೂಕಿನಾದ್ಯಂತ ಪ್ರಚಾರ ಕೈಗೊಂಡ ವೇಳೆ ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ, ತಾಲೂಕಿನ ಜನತೆ ಈ ಬಾರಿ ಬದಲಾವಣೆ ಬಯಸಿ ನನ್ನ ಗೆಲುವಿಗೆ ಸಹಕರಿಸಲಿದ್ದಾರೆ ಈ ಮೂಲಕ ಸಂಸತ್ ಚುನಾವಣೆಯಲ್ಲಿ ಸತತ ಮೂರು ಬಾರಿ ಸೋಲುಂಡ ನನ್ನ 14 ವರ್ಷಗಳ ರಾಜಕೀಯ ವನವಾಸ ಅಂತ್ಯವಾಗುವ ಭರವಸೆ ಇದೆ ಎಂದರು.
ನಾನು ಯಾವುದೇ ಲಾಬಿಯ ಹಿಂದೆಯಿಲ್ಲ ರಿಯಲ್ ಎಸ್ಟೆಟ್ ಮೈನಿಂಗ್ ನನಗೆ ಗೊತ್ತಿಲ್ಲ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ರೈತರು ಬಡವರ ಜನಸಾಮಾನ್ಯರ ಪರ ಅಧಿಕಾರವಧಿಯಲ್ಲಿ ಶುದ್ಧ ಆಡಳಿತ ನೀಡಿದ್ದೇನೆ, 2009 ನಲ್ಲಿ ಸಂಸತ್ ಚುನಾವಣೆಯಲ್ಲಿ ಸೋತ ಬಳಿಕ ಬಿ.ಎಸ್ ಯಡಿಯೂರಪ್ಪ ಅವರು ವಿಧಾನಪರಿಷತ್ ಸದಸ್ಯನಾಗಿ ಮಾಡಿ ಅರಣ್ಯ ಸಚಿವನಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟರು ನನ್ನ ಎಲ್ಲಾ ಚುನಾವಣೆಗಳಲ್ಲೂ ಧರ್ಮದ ಆಧಾರದ ಮೇಲೆ ಚುನಾವಣಾ ಕಣದಲ್ಲಿದ್ದೇನೆ, ಪಕ್ಷದಲ್ಲಿನ ಹಿರಿತನ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಪಕ್ಷ ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು ಪಕ್ಷದ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಸಂಘಟನೆಗೆ ಒತ್ತು ನೀಡುತ್ತೇನೆ ಎಂದರು.
ಮಾಜಿ ಶಾಸಕ ಎಚ್.ಸಿ ಬಸವರಾಜು ಅವರು ಮಾತನಾಡಿ ತಾಲೂಕಿನಲ್ಲಿ ಈ ಬಾರಿ 1999 ರ ವಿಧಾನಸಭಾ ಚುನಾವಣಾ ಫಲಿತಾಂಶ ಮರುಕಳಿಸುವ ವಿಶ್ವಾಸವಿದೆ, ಅಂದಿನ ಚುನಾವಣೆಗೂ ಇಂದಿಗೂ ಬಹಳ ವ್ಯತ್ಯಾಸವಿದ್ದು ಪ್ರಸ್ತುತ ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆಯಿಂದಾಗಿ ವಿಶ್ವದಲ್ಲೇ ಹೆಸರುವಾಸಿಯಾಗಿದ್ದು ಈ ಬಾರಿ ತಾಲೂಕಿನಲ್ಲಿ ಸಿ.ಎಚ್ ವಿಜಯಶಂಕರ್ ಗೆಲ್ಲಲಿದ್ದಾರೆ ಅವರ ಗೆಲುವಿಗೆ ತಾಲೂಕಿನಾದ್ಯಂತ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದರು.
ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ಅವರು ಮಾತನಾಡಿ ರಾಜಕಾರಣದಲ್ಲಿ ನುರಿತ ಮತ್ತು ಸಜ್ಜನಿಕೆಗೆ ಹೆಸರುವಾಸಿಯಾದ ಸಿ.ಎಚ್ ವಿಜಯಶಂಕರ್ ಅವರ ಆಯ್ಕೆ ಅಭಿನಂದನೀಯ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಈ ಬಾರಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ, ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ಚುನಾವಣಾ ಫಲಿತಾಂಶ ತಕ್ಕ ಉತ್ತರ ನೀಡಲಿದೆ, ನಾವು ಯಾರನ್ನು ಗೆಲ್ಲಿಸಲು ಅಥವಾ ಸೋಲಿಸಲು ಚುನಾವಣೆ ಎದುರಿಸುತ್ತಿಲ್ಲ ನಮ್ಮ ಅಭ್ಯರ್ಥಿಯ ಪರ ಮತ ಕೇಳಿ ಗೆಲುವಿಗೆ ಶ್ರಮವಹಿಸಲಿದ್ದೇವೆ ಎಂದರು.
ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ವೀರಭದ್ರ, ಮುಖಂಡರಾದ ಆರ್.ಟಿ ಸತೀಶ್, ವಿಕ್ರಮ್ ರಾಜ್, ಅಣ್ಣಪ್ಪ, ಲೋಕಪಾಲಯ್ಯ, ಕಿರಣ್ ಜಯರಾಮೇಗೌಡ, ಪಿ.ಜೆ ರವಿ, ಚುನಾವಣಾ ಉಸ್ತುವಾರಿ ವಿಜಯಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.