ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ “ಟಾರ್ಗೆಟ್ ಕಾಂಗ್ರೆಸ್” ಮುಂದುವರಿದಿದ್ದು, ಗುರುವಾರವಷ್ಟೇ ಸಿಎಂ ಪುತ್ರ ಯತೀಂದ್ರ ಅವರ ವಿಡಿಯೋ ಆಧರಿಸಿ ಸಿದ್ದರಾಮಯ್ಯ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿದ್ದ ಅವರು, ಈಗ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕರೆಂಟ್ ಬಾಣ ಬಿಟ್ಟಿದ್ದಾರೆ.
ಅಲ್ಲದೆ “ನಾನು ದಂಡ ಕಟ್ಟಿದ್ದೇನೆ. ಈಗಲಾದರೂ ಕರೆಂಟ್ ಕಳ್ಳ ಅನ್ನೋದು ಬಿಡಿ. ನಾನು ನಿಮ್ಮಷ್ಟು ದೊಡ್ಡ ಕಳ್ಳ ಅಲ್ಲ’ ಅಂತ ಹೇಳಿರುವ ಕುಮಾರಸ್ವಾಮಿ, ನನ್ನನ್ನು ಕರೆಂಟ್ ಕಳ್ಳ ಅನ್ನುತ್ತಿರುವ ಕಾಂಗ್ರೆಸ್ ನಾಯಕರು ತಮ್ಮ ಪಕ್ಕದಲ್ಲಿಯೇ ಕೂರುವ ಮಹಾನ್ ಕಳ್ಳನ ಕಡೆಯೂ ನೋಡಬೇಕು. ಅಷ್ಟೇ ಅಲ್ಲ ಲುಲು ಮಾಲ್‌ನ ವಿದ್ಯುತ್ ಬಳಕೆ ವಿಚಾರ ಪ್ರಸ್ತಾಪಿಸಿ ಡಿಸಿಎಂ ಡಿ.ಕೆ. ಶಿವಕುಮಾರ್‌ರನ್ನು ಕಟಕಟೆಯಲ್ಲಿ ನಿಲ್ಲಿಸಿದ್ದಾರೆ.
ದೀಪಾವಳಿ ವೇಳೆ ನಮ್ಮನೆ ಹುಡುಗರು ದೀಪಾಲಂಕಾರ ಮಾಡುವಾಗ ಅಚಾತುರ್ಯ ಆಗಿತ್ತು. ಇದಕ್ಕೆ ನಾನೇ ವಿಷಾದ ವ್ಯಕ್ತಪಡಿಸಿ ದಂಡ ಪಾವತಿಸುವುದಾಗಿ ಹೇಳಿದ್ದೆ. ನನ್ನ ಮೇಲಿನ ವಿದ್ಯುತ್ ಕಳ್ಳತನ ಆರೋಪಕ್ಕೆ 68 ಸಾವಿರ ರೂ. ದಂಡ ಕಟ್ಟಿದ್ದೇನೆ. ಆದರೆ, ಆರಂಭಕ್ಕೂ ಮುನ್ನ 6 ತಿಂಗಳು ವಿದ್ಯುತ್ ಬಿಲ್ ಕಟ್ಟದ ಲುಲು ಮಾಲ್ ಕತೆ ಏನು ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ನನ್ನ “ಗುಲಗಂಜಿ’ ವಿಚಾರವನ್ನು ಬೆಟ್ಟದಷ್ಟು ಮಾಡಲಾಗಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.
ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಂಡ ಪಾವತಿಸಿದ ರಸೀದಿ ಪ್ರದರ್ಶಿಸಿದ ಕುಮಾರಸ್ವಾಮಿ, ಲುಲು ಮಾಲ್ ಆರಂಭಕ್ಕೆ ಮೊದಲು 6 ತಿಂಗಳು ವಿದ್ಯುತ್ ಬಿಲ್ ಕಟ್ಟಲು ಬಿಟ್ಟಿಲ್ಲ. ಹಾಗಾದರೆ, ಅವರು ಎಲ್ಲಿಂದ ವಿದ್ಯುತ್ ಬಳಸಿದರು. ಆಕಾಶದಿಂದ ವಿದ್ಯುತ್ ಉತ್ಪಾದನೆ ಮಾಡಿದ್ರಾ? ಇವರ ಯೋಗ್ಯತೆಗೆ ನನ್ನನ್ನು ಕಳ್ಳ ಕಳ್ಳ ಅಂತಾರೆ ಎಂದರು.
ಲುಲು ಮಾಲ್ ಆರಂಭಕ್ಕೂ ಮುನ್ನ 6 ತಿಂಗಳು ಬಳಕೆ ಮಾಡಿದ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂ ವಿಚಕ್ಷಣ ದಳ ಮಾಹಿತಿ ನೀಡುತ್ತಾ? ಅದರ ಮಾಹಿತಿ ಬಹಿರಂಗ ಮಾಡುತ್ತಾರಾ? ಲುಲುಗೆ ಬಳಸಿದ್ದ ಬಿಲ್‌ಗೆ ದಂಡ ಕಟ್ಟಿದ್ದಾರಾ? ಮಾಲ್ ಕೆಳಗಡೆ ಹೈ ಟೆನ್ಷನ್ ವೈರ್ ಅಂಡರ್ ಗ್ರೌಂಡ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ಅವರು ಎಷ್ಟು ಹಣ ಕಟ್ಟಿದ್ದಾರೆ? ಸುಜಾತ ಟಾಕೀಸ್ ಮುಂದೆ ಇದ್ದ ಹೈ ಟೆನ್ಷನ್ ವೈರ್ ಹೇಗೆ ಅಂಡರ್ ಗ್ರೌಂಡ್‌ಗೆ ಹೋಯಿತು? ಇದನ್ನು ಜನರಿಗಾಗಿ ಮಾಡಿದರಾ ಅಥವಾ ಸ್ವಾರ್ಥಕ್ಕಾಗಿ ಮಾಡಿದರಾ ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಈ ಬಗ್ಗೆ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು.
ಬೆಸ್ಕಾಂ ವಿರುದ್ಧ ಎಚ್‌ಡಿಕೆ ಕಿಡಿ
ಬೆಸ್ಕಾಂ ವಿಧಿಸಿರುವ ದಂಡದ ಮೊತ್ತ ಲೋಪದಿಂದ ಕೂಡಿದ್ದು ಈ ಬಗ್ಗೆ ತಮಗೆ ಸ್ಪಷ್ಟನೆ ಕೊಡಬೇಕು ಎಂದು ಇಂಧನ ಇಲಾಖೆಯನ್ನು ಒತ್ತಾಯಿಸಿರುವ ಕುಮಾರಸ್ವಾಮಿ, ಜೆ.ಪಿ.ನಗರದ ತಮ್ಮ ಮನೆಗೆ ಕಂಬದಿಂದ ವಿದ್ಯುತ್ ಪಡೆದಿರುವುದಕ್ಕೆ ಬೆಸ್ಕಾಂ ವಿಚಕ್ಷಣಾ ದಳ ವಿಧಿಸಿರುವ ದಂಡವೇ ಅಕ್ರಮ ಎಂದು ಆರೋಪ ಮಾಡಿದ್ದಾರೆ. ನನ್ನ ಮನೆಗೆ ನಾನು 33ಕೆವಿ ಅನುಮತಿ ಪಡೆದಿದ್ದೇನೆ. ವಿದ್ಯುತ್ ಕಳವು ಆರೋಪದಲ್ಲಿ 2.5 ಕೆವಿ ವಿದ್ಯುತ್ ಪಡೆಯಲಾಗಿದೆ ಎಂದು ಬೆಸ್ಕಾಂ ಹೇಳಿದೆ. ಅಸಲಿಗೆ 1 ಕೆವಿ ವಿದ್ಯುತ್ ಮಾತ್ರ ನಮ್ಮ ಮನೆಯ ಲೈಟಿಂಗ್‌ಗೆ ಬಳಕೆ ಮಾಡಲಾಗಿತ್ತು. ಆದರೂ ಬೆಸ್ಕಾಂ ಅಧಿಕಾರಿಗಳು 2.5 ಕೆವಿ ಅಂತ ಸುಳ್ಳು ಲೆಕ್ಕ ತೋರಿಸಿದ್ದಾರೆ. ಯಾರದ್ದೋ ಒತ್ತಡಕ್ಕೆ ಮಣಿದು ಹೀಗೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.