ಮಡಿಕೇರಿ: ಕೊಡಗು ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷವನ್ನು ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಬೂತ್ ಮಟ್ಟದಿಂದ ಸಶಕ್ತವಾಗಿ ಕಟ್ಟಿ, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಾಗುತ್ತದೆ ಎಂದು ತಿಳಿಸಿರುವ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಪಕ್ಷ ಸಂಘಟನೆಯನ್ನು ಮೀರಿ ಪಕ್ಷಕ್ಕೆ ಅಗೌರವವನ್ನು, ಮುಜುಗರವನ್ನು ಉಂಟು ಮಾಡುವ ಹಾಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಪಕ್ಷದಿಂದಲೇ ಅಮಾನತುಗೊಳಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ, ಕೀಳು ಮಟ್ಟದ ರಾಜಕೀಯ ಮಾಡುವವನು ನಾನಲ್ಲ, ತಾನು ಬಿಜೆಪಿಯೊಂದಿಗೆ ಶಾಮೀಲಾಗಿದ್ದೇನೆ, ಹಿಂದಿನ ಚುನಾವಣೆಯಲ್ಲಿ ನನ್ನ ಬೂತ್‌ನಲ್ಲೆ ಜೆಡಿಎಸ್‌ಗೆ ಮತಗಳಿಲ್ಲ ಎನ್ನುವವರಿಗೆ ಬೂತ್ ಬಗ್ಗೆ ಮಾಹಿತಿ ಇಲ್ಲವೆಂದು ವ್ಯಂಗ್ಯವಾಡಿದರು.
ಯಾವುದೇ ಪಕ್ಷದಲ್ಲಿ ನೂತನ ಅಧ್ಯಕ್ಷರ ಆಯ್ಕೆಯ ಸಂದರ್ಭ ವಿರೋಧಗಳು ಸಾಮಾನ್ಯ. ಇಂದು ತನ್ನನ್ನು ವಿರೋಧಿಸುವವರು ಮುಂದೆ ಪಕ್ಷ ಸಂಘಟನೆಯ ಹಂತದಲ್ಲಿ ತನ್ನೊಂದಿಗೆ ಕೈಜೋಡಿಸುವ ವಿಶ್ವಾಸವಿದೆ. ಜಿಲ್ಲೆಯ ಜೆಡಿಎಸ್ ಮುಖ್ಯಸ್ಥರಾದ ಬಿ.ಎ.ಜೀವಿಜಯ ಅವರಿಗೆ ಅವರ ಪುತ್ರ ಸಂಜಯ್ ಜೀವಿಜಯ ಜಿಲ್ಲಾಧ್ಯಕ್ಷನಾಗಬೇಕೆನ್ನುವ ಆಕಾಂಕ್ಷೆ ಇದ್ದಿರಬಹುದು. ಆದರೆ, ನಾನು ಕೇಳದಿದ್ದರೂ ಪಕ್ಷದ ವರಿಷ್ಟರು ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ.
ಮರಳಿ ಗೂಡಿಗೆ ಆಂದೋಲನ
ಪ್ರಸ್ತುತ ಜಿಲ್ಲಾ ಜಾತ್ಯತೀತ ಜನತಾ ದಳದಿಂದ ದೂರ ಉಳಿದವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಮರಳಿ ಗೂಡಿಗೆ ಆಂದೋಲನವನ್ನು ನಡೆಸುವ ಮೂಲಕ ಪಕ್ಷದ ಬಲವರ್ಧನೆಗೆ ಮುಂದಾಗುವುದಾಗಿ ಕೆ.ಎಂ. ಗಣೇಶ್ ತಿಳಿಸಿದರು. ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ತಮ್ಮ ಆರು ದಶಕಗಳ ರಾಜಕೀಯದಲ್ಲಿ ಎಂದಿಗೂ ದುಡುಕಿ ನಿರ್ಧಾರಗಳನ್ನು ಕೈಗೊಂಡಿಲ್ಲ. ಈಗಲೂ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಬಗ್ಗೆ ರಾಜ್ಯಾಧ್ಯಕ್ಷರೊಂದಿಗೆ ಚರ್ಚಿಸಿ ಕೆ.ಎಂ.ಗಣೇಶ್ ಅವರನ್ನು ಆಯ್ಕೆಮಾಡಿದ್ದು, ಇದು ತರಾತುರಿಯ ನಿರ್ಧಾರವೂ ಅಲ್ಲವೆಂದು ಹೇಳಿದರು.
ಜೆಡಿಎಸ್ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಮತೀನ್, ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ, ಪ್ರಧಾನ ಕಾರ್ಯದರ್ಶಿ ಜಾಸಿರ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಕುಸುಮಾ ಮೊದಲಾದವರು ಉಪಸ್ಥಿತರಿದ್ದರು