Advertisement

ನಾನು ನನ್ನ ಪ್ರೇಯಸಿ!

06:35 AM Oct 26, 2018 | |

ಹೆಚ್ಚಿನವರು ನನ್ನ  ಬಳಿ ಕೇಳ್ಳೋರು, “ಮಗಾ, ಲವ್‌ ಇದ್ಯಾ ನಿಂಗೆ?’ ಆದರೆ, ನಾನು ಮಾತ್ರ ಹೇಳುತ್ತ ಬಂದಿರುವುದು, “ನನಗೂ ಲವ್ವಿಗೂ ಆಗಿಬರುವುದಿಲ್ಲ’ ಆದ್ರೆ ಇವತ್ತಿನವರೆಗೂ ಒಂದು ವಿಷಯವನ್ನು ಮುಚ್ಚಿಟ್ಟಿದ್ದೆ. ಅದನ್ನು ಇವತ್ತು ಜಗಜ್ಜಾಹೀರು ಮಾಡಿಬಿಡುತ್ತೇನೆ. ಆವತ್ತು ಕಾಲೇಜು ಸೇರಿದ ಎರಡು-ಮೂರು ವಾರ ಆಗಿರಬಹುದೇನೋ, ಅಲ್ಲಿಯವರೆಗೆ ಮೇಡಮ್‌ ಇಲ್ಲ ಎಂದು ಪತ್ರಿಕೋದ್ಯಮ ಕ್ಲಾಸ್‌ ನಮಗೆ ಸಿಗುತ್ತ ಇರಲಿಲ್ಲ.

Advertisement

ಹೀಗಿರುವಾಗ, ಆ ದಿನ ಮೇಡಮ್‌ ಬಂದೇಬಿಟ್ಟರು. ಆ ಮೊದಲ ಕ್ಲಾಸಿಗೆ ತೃತೀಯ-ದ್ವಿತೀಯ ವಿದ್ಯಾರ್ಥಿಗಳೆನ್ನದೆ ಎಲ್ಲರೂ ಬಂದಿದ್ದರು. ಮಾತುಕತೆಯೇ ಮಾತುಕತೆ, ಹೊಸತಾಗಿ ನೋಡುವ ನಮ್ಮ ಕೌತುಕದ ಕಣ್ಣುಗಳಿಗೆ ಹೊಸ ಪ್ರಪಂಚವೇ ಮುಂದೆ ಮೂಡಿತ್ತು. ಇವೆೆಲ್ಲದರ ನಡುವೆ ನನಗೆ ಕಂಡದ್ದು ಆ ಮಾಟಗಾತಿ!

ಅವಳ ಸುತ್ತ ತೃತೀಯ ವರ್ಷದ ವಿದ್ಯಾರ್ಥಿಗಳು ಸೇರಿದ್ದರು. ಅವಳನ್ನು ಮುಟ್ಟಿ ಏನೋ ಚರ್ಚೆಯಲ್ಲಿ  ತಲ್ಲೀನರಾಗಿದ್ದರು! ನನಗೆ ಅವಳಲ್ಲಿ ತುಂಬಾ ಇಷ್ಟವಾದದ್ದು ಅವಳ ಕಣ್ಣು. ಆ ಕಣ್ಣನ್ನು ವರ್ಣಿಸಲು ಸಾಧ್ಯವಿಲ್ಲ . ಕೇವಲ ಅವಳ ಕಣ್ಣಿನ ವರ್ಣನೆಗಾಗಿಯೇ ಜಗದ ಕವಿಗಳನ್ನು ಕೂರಿಸಿ ಪದ್ಯ ಬರೆಸಬೇಕೆಂದು ಆ ಸಮಯ ನನ್ನಲ್ಲಿ ಬಯಕೆ ಮೂಡಿತ್ತು. ನನಗೆ ಪತ್ರಿಕೋದ್ಯಮ ಅಂದರೆ, ತುಂಬ ಇಷ್ಟವಾದದ್ದೇ  ಅವಳ ಕಣ್ಣು ನನ್ನನ್ನು ಆಕರ್ಷಿಸಿದ ಸಮಯದಲ್ಲಿ. ಈಗ ಅವಳ ಎದುರಲ್ಲಿ ನಿಂತು ಅವಳ ಕಣ್ಣನ್ನು ಕಣ್ಣಿಟ್ಟು ನೋಡಬೇಕೆನ್ನುವ ಬಯಕೆ ದಿನೇ ದಿನೇ ಹೆಚ್ಚುತ್ತಿದ್ದದ್ದು ಸುಳ್ಳಲ್ಲ. ನನ್ನ ಬಯಕೆ ಈಡೇರುವುದೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೆ, ಅವಳ ಸುತ್ತ ದಿನಾ ನನ್ನ ಸೀನಿಯರ್ಸ್‌ ಇರುತ್ತಿದ್ದುದರಿಂದ ಅವಳ ಎದುರು ನಿಲ್ಲುವುದಕ್ಕೂ ಭಯವಾಗುತ್ತಿತ್ತು.

ಕೆಲವೊಮ್ಮೆ ನಮ್ಮ ಸೀನಿಯರ್ಸ್‌ ರಿಪೋರ್ಟ್‌ಗೆಂದು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹೋದಾಗ ಅವಳನ್ನು ಕರೆದುಕೊಂಡು ಹೋಗುತ್ತಿರುವುದು ನೋಡಿ ನನ್ನಲ್ಲಿ ಮತ್ಸರ ಮೂಡುತ್ತಿತ್ತು. ಅವಳು ನನಗೆ ಅದೇ ರೀತಿ ಸಿಗುತ್ತಾಳೆ ಅನ್ನುವುದು ನನಗೆ ಅದೊಂದು  ಮೂಡನಂಭಿಕೆಯಾಗಿಯೇ  ಆಗಿತ್ತು.

ಆದರೆ, ಆವತ್ತು ಮೇಡಮ್‌,””ವಿಶ್ವಾಸ್‌, ನೀನು ಈ ದಿನ ಇವಳ ಜೊತೆ ರಿಪೋರ್ಟ್‌ಗೆ ಹೋಗು” ಎಂದು ಹೇಳಿದರು. ಆ ದಿನದ ಖುಷಿಗೆ ಪಾರವೇ ಇಲ್ಲ. ನೋಡಿ, ಪ್ರತಿದಿನ ನಾನು ಬಯಸುತ್ತಿದ್ದ  ಕನಸಿನ ಕನ್ಯೆಯವಳು, ಇಂದು ನನ್ನ ಜೊತೆಗೆ ಬರುತ್ತಾಳೆ ಅಂದಾಗ ನನ್ನ ಮನಸ್ಸು ಹೇಗೆ ಕುಣಿಯುತ್ತಿರಬೇಡ! ಹೌದು, ತುಂಬ ಖುಷಿಯಾಗಿತ್ತು. ಗೊತ್ತಿಲ್ಲದೆ ನನ್ನ ಭುಜಕ್ಕೆ ಕೈ ಹಾಕಿ ತಟ್ಟಿದ ಆ ದಿನವನ್ನು ಮರೆಯುವ ಹಾಗಿಲ್ಲ.

Advertisement

ಅಂದಿನಿಂದ ಅವಳ ಜೊತೆ ಶುರುವಾದ ಒಡನಾಟ ಮತ್ತೂ ಮುಂದುವರಿದಿತ್ತು. ಕಾಲೇಜಿನ ಪ್ರತೀ ರಿಪೋರ್ಟ್‌ ಮಾಡಬೇಕೆನ್ನುವಲ್ಲಿ ಅವಳು ನನ್ನ ಪಕ್ಕ ಹಾಜರಿ! ಅವಳಂದ್ರೆ ಕಾಲೇಜಿನ ಎಲ್ಲರ ಕ್ರಶ್‌ ಆಗಿದು . ನಾನು ಕೆಲವೊಮ್ಮೆ ಅವಳ ಜೊತೆ ಹೋಗುತ್ತಿರುವಾಗ ಎಲ್ಲರೂ ಅವಳನ್ನೇ ನೋಡುವುದನ್ನು ನೋಡಿ ನನಗೆ ತುಂಬ ಹೆಮ್ಮೆ ಎನಿಸುತ್ತಿತ್ತು. ಅವಳನ್ನು ನೋಡಿ ಹಲ್ಲು ಕಿಸಿಯುವವರು ಒಬ್ಬಿಬ್ಬರಲ್ಲ ! ಅವಳಿಗೆ ತುಂಬ ಫ್ಯಾನ್‌ಗಳು ಇದ್ದಾರೋ ಏನೋ! ಆದ್ರೆ ಅವಳ ಗುಣ ನನಗೂ ಇಷ್ಟವಾಗುತ್ತಿತ್ತು.

“ಹೂಂ’ ಅಂದ್ರೆ ಮಾತ್ರ ಅವಳನ್ನು ನೋಡಿ ನಗುವ ಚಾನ್ಸ್‌ ಸಿಗ್ತಿತ್ತು ಕಾಲೇಜಿನ ಶೋಕಿ ವಿದ್ಯಾರ್ಥಿಗಳಿಗೆಲ್ಲ! ಅವಳನ್ನು ನೋಡಿ ಸುಮ್ಮನೆ ನಗುವುದಕ್ಕೂ ಜನ ಸಾಲಾಗಿ ನಿಲ್ಲುತ್ತಿದ್ದರು. ನಾನು ಅವಳನ್ನು ಎಷ್ಟು ಹಚ್ಚಿಕೊಂಡಿದ್ದೆ ಅಂದರೆ, ಒಂದು ದಿನವೂ ಮಿಸ್‌ ಮಾಡಿಕೊಳ್ಳುವುದಕ್ಕೆ ನನಗೆ ಇಷ್ಟ ಆಗುತ್ತಿರಲಿಲ್ಲ. ಹೀಗೆ ದಿನಗಳು ಕಳೆಯುತ್ತ ತೃತೀಯ ವರ್ಷದವರೆಗೆ ಬಂದು ನಿಂತಿದ್ದೇನೆ. ಅವಳನ್ನು ಕೊನೆ ಭೇಟಿಯಾಗಿದ್ದು ಕಾಲೇಜ್‌ ಡೇಯಂದು. ಯಾಕೋ ತುಂಬಾ ಹುಷಾರಿಲ್ಲದ ಹಾಗೆ ಇದ್ದಳು. ಆದರೂ ಸ್ವಲ್ಪ ಹೊತ್ತು ಜೊತೆಯಲ್ಲಿರಬೇಕಿತ್ತು. ನಾನು ಕಾಲೇಜ್‌ ಡೇಯಂದು  Prize ಪಡೆಯುವಾಗಲೂ ನನ್ನನ್ನೇ ನೋಡ್ತಿದ್ದದ್ದು ಈಗ್ಲೂ ಆ ದೃಶ್ಯ ಕಣ್ಣಿನ ಹತ್ತಿರ ಸುಳಿದ ಹಾಗೆ ಅನ್ನಿಸುತ್ತೆ. ನಿನ್ನ ಗೆಳೆತೆನದಿಂದ ನಿನ್ನಲ್ಲಿನ ಅನೇಕ ಗುಣಗಳನ್ನು ತಿಳಿದುಕೊಂಡೆ. ನಿನ್ನಲ್ಲಿರುವುದು ಪ್ರತಿಯೊಬ್ಬರನ್ನೂ ಆಕರ್ಷಿಸುವಂಥ ಅದ್ಭುತ ವ್ಯಕ್ತಿತ್ವ. ಆದರೆ, ಇನ್ನು ನಿನ್ನ ಜೊತೆ ಬರುವಂತಿಲ್ಲ ನನ್ನ ನಿನ್ನ ಬಂಧಗಳು ಮುಗಿದೇ ಹೋದವು. ನಾಳೆಯ ನಮ್ಮ ಕಾಲೇಜಿನ ಬೀಳ್ಕೊಡುಗೆಯ ದಿನ ಪವನ್‌ ಜೊತೆ ನೀನು ಬರುವೆ ಎಂದು ಗೊತ್ತಾಯಿತು. ಇನ್ನು ನಾನು ನೀನು ಓಡಾಡಿದ ದಿನಗಳು ನೆನಪಷ್ಟೇ.ಹಾ! ಅವಳ ಹೆಸರೇ ಹೇಳಲು ಮರೆತು ಬಿಟ್ಟಿದ್ದೇ cannon DSLR.

– ವಿಶ್ವಾಸ್‌ ಅಡ್ಯಾರ್‌
ಪತ್ರಿಕೋದ್ಯಮ ವಿಭಾಗ,
ವಿ. ವಿ. ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next