ಅಹಮ್ಮದಾಬಾದ್:ನಾನು ಭಗವಾನ್ ಮಹಾವಿಷ್ಣುವಿನ 10ನೇ ಅವತಾರವಾದ ಕಲ್ಕಿ..ಜಗತ್ತನ್ನು ಪರಿವರ್ತನೆ ಮಾಡಬೇಕಾಗುವುದರಿಂದ ಪ್ರಾಯಶ್ಚಿತ್ತ ಮಾಡುತ್ತಿದ್ದುದರಿಂದ ನನಗೆ ಕಚೇರಿಗೆ ಬಂದು ಸಮಯ ಹಾಳು ಮಾಡಲು ಇಷ್ಟವಿಲ್ಲ! ಇದು ಕಚೇರಿಗೆ ಗೈರುಹಾಜರಾಗಿದ್ದ ಗುಜರಾತ್ ನ ಸರ್ಕಾರಿ ಅಧಿಕಾರಿಯೊಬ್ಬರಿಗೆ ನೀಡಲಾದ ಶೋಕಾಸ್ ನೋಟಿಸ್ ಗೆ ನೀಡಿದ ಉತ್ತರ!
ಗುಜರಾತ್ ನ ಸರ್ದಾರ್ ಸರೋವರ್ ಪುನರ್ವಸತಿ ಏಜೆನ್ಸಿ(ಎಸ್ ಎಸ್ ಪಿಎ)ಯ ಸುಪರಿಂಟೆಂಡಿಂಗ್ ಎಂಜಿನಿಯರ್ ರಮೇಶ್ಚಂದ್ರ ಫೆಫಾರ್ ಕಳೆದ ಎಂಟು ತಿಂಗಳುಗಳಲ್ಲಿ ಕೇವಲ 16 ದಿನ ಮಾತ್ರ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಬಗ್ಗೆ ಪ್ರಶ್ನಿಸಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು.
ತಮ್ಮ ಪ್ರಾಯಶ್ಚಿತ್ತ ಕ್ರಿಯೆಗೆ ಧನ್ಯವಾದ ಹೇಳಿದ್ದು, ಇದರಿಂದ ದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದಾಗಿ ರಮೇಶ್ಚಂದ್ರ ನೋಟಿಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಗುಜರಾತ್ ಸರ್ಕಾರಿ ಅಧಿಕಾರಿ ನೋಟಿಸ್ ಗೆ ನೀಡಿರುವ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಷ್ಟೇ ಅಲ್ಲ ಒಂದು ವೇಳೆ ನೀವು ನಂಬದಿದ್ದರೂ ಕೂಡಾ ನಾನು ವಿಷ್ಣುವಿನ 10ನೇ ಅವತಾರ ಹೌದು ಎಂಬುದನ್ನು ಮುಂದಿನ ದಿನಗಳಲ್ಲಿ ಸಾಬೀತುಪಡಿಸುತ್ತೇನೆ ಎಂಬುದಾಗಿ ರಮೇಶ್ಚಂದ್ರ ಹೇಳಿದ್ದಾರೆ.
2010ನೇ ಇಸವಿಯ ಮಾರ್ಚ್ ನಲ್ಲಿ ನಾನು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ನಾನು ಕಲ್ಕಿಯ ಅವತಾರ ಎಂಬುದು ಮನದಟ್ಟಾಯಿತು. ಅಂದಿನಿಂದ ನನಗೆ ದಿವ್ಯ ಶಕ್ತಿಯೊಂದು ಪಡೆದುಕೊಂಡಿದ್ದೇನೆ ಎಂದು ರಾಜ್ ಕೋಟ್ ನ ತನ್ನ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.