ಚಿತ್ತೂರ್ : ತೆಲುಗು ದೇಶಂ ಪಕ್ಷದ ಕ್ರೈಸ್ತ ಶಾಸಕಿ ವಂಗಲಪುಡಿ ಅನಿತಾ ಅವರನ್ನು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ)ಯ ಓರ್ವ ಸದಸ್ಯೆಯನ್ನಾಗಿ ನೇಮಕ ಮಾಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.
ತಾನೋರ್ವ ಹಿಂದು ಎಂದು ಹೇಳಿಕೊಂಡು ತನ್ನ ನೇಮಕಾತಿಯನ್ನು ಸಮರ್ಥಿಸಿಕೊಂಡಿರುವ ಹೊರತಾಗಿಯೂ ಅನಿತಾ ಅವರು ತನ್ನ ನೇಮಕಾತಿಯನ್ನು ಹಿಂಪಡೆಯುವಂತೆ ಟಿಡಿಪಿ ಮುಖ್ಯಸ್ಥ ಮತ್ತು ಅಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿರುವ ಎನ್ ಚಂದ್ರಬಾಬು ನಾಯ್ಡು ಅವರನ್ನು ಕೋರಿದ್ದಾರೆ.
ನಾಯ್ಡು ಅವರಿಗೆ ಬರೆದಿರುವ ಪತ್ರದಲ್ಲಿ ಶಾಸಕಿ ಅನಿತಾ ಅವರು “ನಾನು ಸರಕಾರಕ್ಕೆ ಯಾವುದೇ ರೀತಿಯ ಇರುಸು ಮುರುಸು ಉಂಟು ಮಾಡಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ. ಎಎನ್‌ಐ ಸುದ್ದಿ ಸಂಸ್ಥೆಯ ಶಾಸಕಿ ಅನಿತಾ ಅವರ ಈ ಪತ್ರವನ್ನು ಟ್ವೀಟ್ ಮಾಡಿದೆ.
“ನನ್ನನ್ನು ಟಿಟಿಡಿ ಸದಸ್ಯೆಯನ್ನಾಗಿ ನೇಮಕ ಮಾಡಿರುವುದನ್ನು ಅನುಸರಿಸಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಅದನ್ನೊಂದು ಅತ್ಯಂತ ಅಹಿತಕರ ಮತ್ತು ಜುಗುಪ್ಸೆಯ ವಿವಾದವನ್ನಾಗಿ ಮಾಡಿರುವುದು ನನಗೆ ತುಂಬಾ ನೋವುಂಟುಮಾಡಿದೆ. ನಾನೋರ್ವ ಹಿಂದು ಮತ್ತು ಪರಿಶಿಷ್ಠ ಜಾತಿಗೆ ಸೇರಿದವಳಾಗಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ. ನನ್ನ ಈ ನೇಮಕಾತಿಯಿಂದ ಸರಕಾರಕ್ಕೆ ಇರಿಸು ಮುರಿಸಿನ ಸ್ಥಿತಿ ಒದಗುವುದನ್ನು ನಾನು ಇಷ್ಟಪಡುವುದಿಲ್ಲ. ಆದುದರಿಂದ ಟಿಟಿಡಿ ಮಂಡಳಿಯಲ್ಲಿನ ನನ್ನ ಸದಸ್ಯತ್ವವನ್ನು ಹಿಂಪಡೆಯುವಂತೆ ನಾನು ನಿಮ್ಮಲ್ಲಿ ಕೋರುತ್ತೇನೆ” ಎಂದು ಅನಿತಾ ಅವರು ಪತ್ರದಲ್ಲಿ ಬರೆದಿದ್ದಾರೆ.
ಟಿಟಿಡಿ ಮಂಡಳಿಗೆ ಕ್ರೈಸ್ತರನ್ನು ನೇಮಕಮಾಡಿರುವುದು ಹಿಂದುಗಳಿಗೆ ಮಾಡಲಾಗಿರುವ ಅವಮಾನವಾಗಿದೆ ಎಂದು ಬಿಜೆಪಿ ಆಕ್ಷೇಪಿಸಿದೆ. ಬಿಜೆಪಿಯ ಯುವ ದಳವಾಗಿರುವ ಬಿಜೆವೈಎಂ, ಶಾಸಕಿ ಅನಿತಾ ಅವರನ್ನು ತತ್‌ಕ್ಷಣವೇ ಟಿಟಿಡಿ ಮಂಡಳಿ ಸದಸ್ಯತ್ವದಿಂದ ವಜಾ ಮಾಡುವಂತೆ ಆಗ್ರಹಿಸಿದೆ.