Advertisement

ನಾನೂ ಟಿಕೆಟ್‌ ಆಕಾಂಕ್ಷಿ: ಪೂಜಾರಿ

12:30 AM Mar 15, 2019 | Team Udayavani |

ಮಂಗಳೂರು: ನಾನು ಈ ಬಾರಿಯೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಯಾಗಿದ್ದೇನೆ. ಇನ್ನೆರಡು ದಿನಗಳಲ್ಲಿ ಹೊಸದಿಲ್ಲಿಗೆ ತೆರಳಿ ಕಾಂಗ್ರೆಸ್‌ ವರಿಷ್ಠ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಎ.ಕೆ. ಆ್ಯಂಟನಿ ಅವರನ್ನು ಭೇಟಿಯಾಗಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕೇಳುತ್ತೇನೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದ್ದಾರೆ.

Advertisement

ನಗರದ ವುಡ್‌ಲ್ಯಾಂಡ್ಸ್‌ ಹೊಟೇಲ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಟಿಕೆಟ್‌ ನೀಡಿದರೆ ಸ್ಪರ್ಧೆ ಮಾಡುವುದು ನಿಶ್ಚಿತ. ನಾನು ಸ್ಪರ್ಧೆ ಮಾಡಬೇಕು. ಭ್ರಷ್ಟಾಚಾರ ರಹಿತ ವ್ಯಕ್ತಿತ್ವವನ್ನು ಹೊಂದಿರುವ ನಾನೇ ಅಭ್ಯರ್ಥಿಯಾಗಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಈ ಕ್ಷೇತ್ರದಲ್ಲಿ 4 ಬಾರಿ ನಿರಂತರ ಜಯ ಗಳಿಸಿದ್ದೇನೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅಥವಾ ಐವನ್‌ ಡಿ’ಸೋಜಾ ಅವರಿಗೆ ಟಿಕೆಟ್‌ ನೀಡುವುದಕ್ಕೆ ನನ್ನ ತೀವ್ರ ವಿರೋಧವಿದೆ. ಒಂದೊಮ್ಮೆ ಟಿಕೆಟ್‌ ನೀಡಿದರೆ ನಾನು ಬಂಡಾಯವಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.

ರಾಜೇಂದ್ರ ಕುಮಾರ್‌  ಹಾಗೂ ಐವನ್‌ ಡಿಸೋಜಾರನ್ನು ಹೊರತುಪಡಿಸಿ ರಮಾನಾಥ ರೈ, ಬಿ.ಕೆ. ಹರಿಪ್ರಸಾದ್‌ ಅಥವಾ ವಿನಯ ಕುಮಾರ್‌ ಸೊರಕೆ ಸಹಿತ ಯಾರಿಗೂ ಟಿಕೆಟ್‌ ನೀಡುವುದಕ್ಕೆ ನನ್ನ ವಿರೋಧವಿಲ್ಲ ಎಂದು ತಿಳಿಸಿದರು.

ಟಿಕೆಟ್‌ ಆಕಾಂಕ್ಷಿ
ನರೇಂದ್ರ ಮೋದಿ ಅವರು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಅಂಥ ನಾಯಕರು ಬೆಳೆಯಬೇಕು. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದವರು ಹೇಳಿದರು.

Advertisement

ಬಿಜೆಪಿ ಟೀಕೆಗೆ ಖಂಡನೆ
ಹಾಸನದಲ್ಲಿ ಜೆಡಿಎಸ್‌ ಸಮಾವೇಶ ದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕಣ್ಣೀರು ಹಾಕಿರುವುದನ್ನು ಬಿಜೆಪಿ ಟೀಕೆ ಮಾಡಿರುವುದು ಸರಿಯಲ್ಲ. ನಾನು ಇದನ್ನು ಖಂಡಿಸುತ್ತೇನೆ ಎಂದು ಜನಾರ್ದನ ಪೂಜಾರಿ ಹೇಳಿದರು. ದೇವೇಗೌಡರು ಹಿರಿಯ ನಾಯಕರು. ಕೆಲವು ಬಾರಿ ಭಾವನಾತ್ಮಕ ವಿಚಾರಗಳು ಬಂದಾಗ ಕಣ್ಣೀರು ಬರುತ್ತದೆ. ನಾನು ಕೂಡ ಕೆಲವು ಬಾರಿ ಭಾವನಾತ್ಮಕ ವಿಚಾರ ಮಾತನಾಡುವಾಗ ಕಣ್ಣೀರು ಸುರಿಸಿದ್ದೇನೆ ಎಂದವರು ಹೇಳಿದರು.ಮಾಜಿ ಶಾಸಕ ವಿಜಯ ಕುಮಾರ್‌ ಶೆಟ್ಟಿ, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ: ನಿರ್ಧಾರ ಬದಲಿಸಲು ಆಗ್ರಹ
ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವ ನಿರ್ಧಾರ ಸರಿಯಲ್ಲ. ಈ ನಿರ್ಧಾರ ಬದಲಾಗಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ. ಹೊಸದಿಲ್ಲಿ ಭೇಟಿ ಸಂದರ್ಭದಲ್ಲಿ ಇದನ್ನು ಪಕ್ಷದ ಹೈಕಮಾಂಡ್‌ ಗಮನಕ್ಕೆ ತರುತ್ತೇನೆ ಮತ್ತು ಕಾಂಗ್ರೆಸ್‌ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಜನಾರ್ದನ ಪೂಜಾರಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next