Advertisement

ನಾನೂ ಸಿಎಂ ಸ್ಥಾನದ ಆಕಾಂಕ್ಷಿ: ಸಚಿವ ಸತೀಶ ಜಾರಕಿಹೊಳಿ

01:14 AM Feb 03, 2019 | |

ಬೆಳಗಾವಿ: ‘ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ,. ಆದರೆ ಅದಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಒಂದು ವೇಳೆ ಪಕ್ಷ ಇಂತಹ ಜವಾಬ್ದಾರಿ ನೀಡಿದರೆ ಅದನ್ನು ನಿಭಾಯಿಸುವ ಶಕ್ತಿ ಇದೆ’ ಎಂದು ಹೇಳುವ ಮೂಲಕ ಅರಣ್ಯ ಸಚಿವ ಸತೀಶ ಜಾರಕಿಹೊಳಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಎಡೆಮಾಡಿಕೊಟ್ಟರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಮುಖ್ಯ ಮಂತ್ರಿಯಾಗಬೇಕು ಎಂಬುದು ನನ್ನ ಕ್ಷೇತ್ರದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಆಸೆ. ಆದರೆ ಸದ್ಯಕ್ಕೆ ಅದು ಸಾಧ್ಯವಿಲ್ಲ. ಇದಕ್ಕೆ ಪಕ್ಷದ ಹೈಕಮಾಂಡ್‌ ಹಾಗೂ ಶಾಸಕರ ಸಹಕಾರ, ಒಪ್ಪಿಗೆ ಬೇಕು’ ಎಂದರು. 10 ವರ್ಷಗಳ ಅವಧಿಯಲ್ಲಿ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಈಗ ಮಹತ್ತರ ಜವಾಬ್ದಾರಿ ನೀಡಿದರೆ ಅದನ್ನೂ ನಿಭಾಯಿಸುತ್ತೇನೆ. ಪಕ್ಷ, ಹೈಕಮಾಂಡ್‌, ಶಾಸಕರು ಹಾಗೂ ಮುಖಂಡರು ಈ ಬಗ್ಗೆ ನಿರ್ಧರಿಸುತ್ತಾರೆಂದು ಹೇಳಿದರು.

ಜಾಲತಾಣಗಳಲ್ಲಿ ಆರಂಭವಾಗಿರುವ ‘ನನ್ನ ಸಿಎಂ ಸತೀಶ ಜಾರಕಿಹೊಳಿ’ ಅಭಿಯಾನದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯದಲ್ಲಿ ಒಂದು ಹಂತಕ್ಕೆ ಬಂದ ಮೇಲೆ ಮುಂದೆ ಹೋಗಬೇಕು ಎನ್ನುವ ಆಸೆ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ಅಭಿಮಾನಿಗಳು ಈ ಕುರಿತಂತೆ ಅಭಿಯಾನ ಆರಂಭಿಸಿದ್ದಾರೆ. ಮುಂದೆ ಏನಾಗುತ್ತದೋ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

ಸಿಎಂಗೆ ಕಾಂಗ್ರೆಸ್‌ನಿಂದ ಒತ್ತಡ ಇಲ್ಲ: ಕೃಷ್ಣ ಬೈರೇಗೌಡ

ಹುಬ್ಬಳ್ಳಿ: ಸಿಎಂ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ನಿಂದ ಯಾವುದೇ ರೀತಿ ತೊಂದರೆ, ಒತ್ತಡವಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿದ್ದವರಿಗೆ ಸ್ವಾಭಾವಿಕವಾಗಿ ಆಡಳಿತದ ಒತ್ತಡ ಇರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ನಾಯಕರು. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ, ಡಾ| ಜಿ. ಪರಮೇಶ್ವರ ಕೂಡ ಪಕ್ಷದ ನಾಯ ಕರೇ. ಸಿಎಂ ಎಲ್ಲಿಯೂ ಸಹ ಕಾಂಗ್ರೆಸ್‌ನಿಂದ ಒತ್ತಡ, ಕಿರುಕುಳ ಇದೆ ಎಂದು ಹೇಳಿಲ್ಲ. ಅವರಿಗೆ ಪಕ್ಷದಿಂದ ತೊಂದರೆ, ಒತ್ತಡವಿಲ್ಲ. ಸ್ವಾಭಾವಿಕವಾಗಿ ಎಲ್ಲ ಶಾಸಕರಿಂದ ತಮ್ಮ ಕ್ಷೇತ್ರದ ಕೆಲಸಗಳ ಬಗ್ಗೆ ನಿರೀಕ್ಷೆ ಅಪಾರವಾಗಿರುತ್ತದೆ ಹಾಗೂ ವೈಯಕ್ತಿಕ ಕಾರ್ಯಗಳು ಇರುತ್ತವೆ. ಹೀಗಾಗಿ ಸಿಎಂ ಮೇಲೆ ಒತ್ತಡ ಬೀಳುತ್ತದೆ. ಆ ಸ್ಥಾನವೇ ಹಾಟ್ಶೀಟ್. ಕಾಂಗ್ರೆಸ್‌ನಿಂದ ಅವರಿಗೆ ತೊಂದರೆ ಕೊಡಲ್ಲ. ಜವಾಬ್ದಾರಿಯುತವಾದ ರಾಷ್ಟ್ರೀಯ ಪಕ್ಷವಾಗಿದ್ದು, ಪಕ್ಷದ ವರಿಷ್ಠರು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಬೇಕೆಂದು ಬದ್ಧರಾಗಿದ್ದಾರೆ ಎಂದರು. ಕೇಂದ್ರದ ಬಜೆಟ್ ಕೇವಲ ಚುನಾವಣಾ ಗಿಮಿಕ್‌ ಆಗಿದೆ. ದೇಶದಲ್ಲಿ ರೈತರ ಬಿಕ್ಕಟ್ಟು ವ್ಯಾಪಕವಾಗಿದೆ. ಕೇಂದ್ರವು ರೈತರಿಗೆ ಪ್ರತಿ ಹೆಕ್ಟೇರ್‌ಗೆ ವರ್ಷಕ್ಕೆ ಕೇವಲ 6 ಸಾವಿರ ನೀಡುವ ಮೂಲಕ ಮೊಸಳೆ ಕಣ್ಣೀರು ಹಾಕುವ ಗಿಮಿಕ್‌ ಮಾಡಿದೆ ಎಂದರು.

ಜಿಲ್ಲಾವಾರು ಸರಣಿ ಸಭೆಗೆ ಮುಂದಾದ ಕಾಂಗ್ರೆಸ್‌

ಬೆಂಗಳೂರು: ಲೋಕಸಭೆ ಚುನಾವಣೆ ಸಜ್ಜಾಗುತ್ತಿರುವ ಕಾಂಗ್ರೆಸ್‌ ಜಿಲ್ಲಾವಾರು ಸರಣಿ ಸಮಾವೇಶ ನಡೆಸಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವಿಜಯಪುರ, ಹಾವೇರಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಮಾಸಾಂತ್ಯದೊಳಗೆ ಆರಂಭಿಕ ಸಭೆ ನಡೆಯಲಿದೆ. ಜಿಲ್ಲಾ ಸಮಾವೇಶ ಆಯೋಜಿಸಲು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲೆಯ ಮುಖಂಡರಿಗೆ ದಿನೇಶ್‌ ಗುಂಡೂರಾವ್‌ ಸೂಚಿಸಿದ್ದಾರೆ.

ಸರ್ವ ಸದಸ್ಯರ ಸಭೆ: ಫೆ. 6ರಂದು ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದಲ್ಲಿ ಪ್ರದೇಶ ಕಾಂಗ್ರೆಸ್‌ ಸರ್ವ ಸದಸ್ಯರ ಸಭೆ ನಡೆಯಲಿದೆ. ಲೋಕಸಭೆ ಚುನಾವಣೆ ಸಿದ್ಧತೆ ಹಾಗೂ ಜೆಡಿಎಸ್‌ ಜತೆಗಿನ ಮೈತ್ರಿಯಲ್ಲಿ ಉಂಟಾಗಿರುವ ಗೊಂದಲ ಕುರಿತು ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೆಪಿಸಿಸಿ ಪದಾಧಿಕಾರಿಗಳು, ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಎಐಸಿಸಿ ಪ್ರತಿನಿಧಿಗಳು, ಸಚಿವ ಸಂಪುಟದ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ಜೆಡಿಎಸ್‌ ವರ್ತನೆ ಬಗ್ಗೆ ಹೈಕಮಾಂಡ್‌ಗೆ ದೂರು’
ಮದ್ದೂರು:
ಲೋಕಸಭಾ ಚುನಾವಣೆ ಸಂಬಂಧ ಜೆಡಿಎಸ್‌ ನಾಯಕರು ಅವರವರ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ. ಅದೆಲ್ಲವೂ ಹೈಕಮಾಂಡ್‌ ಗಮನದಲ್ಲಿದೆ. ನಾವೂ ಅವರ ವರ್ತನೆಯನ್ನು ಹೈಕಮಾಂಡ್‌ ಗಮನಕ್ಕೆ ತಂದಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದರು. ಇಲ್ಲಿಗೆ ಸಮೀಪದ ಶಿವಪುರದಲ್ಲಿ ಮಾತನಾಡಿ, ಫೆ.6ರಂದು ಬೆಂಗಳೂರಿ ನಲ್ಲಿ ಎಲ್ಲಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಅಲ್ಲಿ ಅಭಿಪ್ರಾಯ, ಸಲಹೆ ತಿಳಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದರು. ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಮೈತ್ರಿ ಮುಂದುವರಿಸಬೇಕೇ, ಬೇಡವೇ, ಕಾಂಗ್ರೆಸ್‌ ಸ್ವತಂತ್ರವಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆಯೇ ಎಂಬುದು ಹೈಕಮಾಂಡ್‌ ತೀರ್ಮಾನಕ್ಕೆ ಬಿಟ್ಟ ವಿಚಾರ. ಇದಕ್ಕೂ ಮುನ್ನ ಈ ವಿಷಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಅಭಿ ಪ್ರಾಯ ಪಡೆದು, ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ಪಕ್ಷದ ವರಿಷ್ಠರು ಅಂತಿಮ ತೀರ್ಮಾನ ಮಾಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next