Advertisement
ಸ್ವಲ್ಪ ಸಮಯದ ಬಳಿಕ, ದೂರವಾಣಿ ಇಲಾಖೆಯಲ್ಲಿ ನೌಕರಿ ದೊರೆಯಿತು. ಅಲ್ಲಿ ಮೂವತ್ತೆಂಟು ವರ್ಷಗಳ ಕಾಲ, ತಾಂತ್ರಿಕ, ಮೇಲ್ವಿಚಾರಣೆ, ಆಡಳಿತದಂಥ ವಿವಿಧ ಮುಖ್ಯ ಹುದ್ದೆಗಳನ್ನು ನಿರ್ವಹಿಸಿ, ಸಂತೃಪ್ತಿಯಿಂಲೇ ನಿವೃತ್ತಿ ಹೊಂದಿದೆ. ಆ ಬಳಿಕ ಅನಾಯಾಚಿತವಾಗಿ ಶಿಕ್ಷಕಿಯಾಗುವ ಸುಯೋಗ ಒದಗಿ ಬಂತು. ವೃತ್ತಿಯಲ್ಲದಿದ್ದರೂ, ಪ್ರವೃತ್ತಿಯಲ್ಲಿ ನಾನೀಗ ಶಿಕ್ಷಕಿ ಅನ್ನಲು ಖುಷಿಯಾಗುತ್ತದೆ. ನಿಜವಾಗಿ ನೋಡಿದರೆ, ಮಕ್ಕಳಿಗೆ ಪಾಠ ಮಾಡಿದ ಯಾವುದೇ ಅನುಭವ ನನಗಿಲ್ಲ.
Related Articles
Advertisement
ಜೀವನದಲ್ಲಿ ಮೊದಲ ಬಾರಿಗೆ, ಬೋರ್ಡ್‌ನಲ್ಲಿ ಬರೆದು ಮಕ್ಕಳಿಗೆ ಪಾಠ ಮಾಡುವ ಅವಕಾಶ ನೀಡಿದ್ದಕ್ಕೆ ಮನದಲ್ಲೇ ದೇವರಿಗೆ ವಂದಿಸಿ, ಉತ್ಸಾಹದಿಂದ ಆರಂಭಿಸಿದೆ. ಗಣಿತದ ಸೂತ್ರಗಳು, ಗಣಿತವನ್ನು ಸರಳವಾಗಿ ಹೇಳಿಕೊಡುವ ವಿಧಾನ ಇತ್ಯಾದಿಗಳು ತನ್ನಿಂದ ತಾನಾಗಿಯೇ ಹೊಳೆಯುತ್ತಾ ಹೋಗಿದ್ದು ಮಾತ್ರ ದೈವಕೃಪೆಯೇ ಇರಬೇಕು. ಒಂದು ಪಾಠವಾದ ಕೂಡಲೇ ಮಕ್ಕಳಲ್ಲಿ ಅರ್ಥವಾಯಿತೇ ಇಲ್ಲವೇ ಎಂದು ವಿಚಾರಿಸಿದಾಗ, ಸರಿಯಾಗಿ ಅರ್ಥವಾಯ್ತೆಂದು ಎಲ್ಲರೂ ಹೇಳಿದಾಗಲೇ ಸಮಾಧಾನವಾಗಿದ್ದು. ಜೊತೆಗೇ ಒಂದು ಅವರ್ಣನೀಯ ಧನ್ಯತಾ ಭಾವ.
ಶಾಲೆಯ ರಜಾದಿನಗಳಲ್ಲಿ ಮಾತ್ರ ಆಶ್ರಮಕ್ಕೆ ಹೋಗಿ, 2-3 ಗಂಟೆಗಳಷ್ಟು ಹೊತ್ತು ಪಾಠ ಮಾಡುತ್ತಿದ್ದೆ. ಸಮಯಾವಕಾಶ ಕಡಿಮೆ ಇದ್ದುದರಿಂದ, ಪೂರ್ತಿ ಮಾಡಲಾಗದಿದ್ದರೂ, ಮಕ್ಕಳಿಗೆ ಅವರ ಕ್ಲಾಸಿನಲ್ಲಿ ಅರ್ಥವಾಗದ ಭಾಗಗಳನ್ನು ವಿವರಿಸುತ್ತಿದ್ದೆ. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳು ಬಂದಾಗ ಎಲ್ಲರಿಗೂ ಆಗಾಗ ಪೆನ್ನು, ಪುಸ್ತಕಗಳ ಉಡುಗೊರೆ ಕೊಟ್ಟು ಹುರಿದುಂಬಿಸುವುದೂ ನಡೆದಿತ್ತು. ಮಧ್ಯದಲ್ಲೊಮ್ಮೆ, ನನ್ನ ಹುಟ್ಟಿದ ದಿನಾಂಕವನ್ನು ಅದು ಹೇಗೋ ತಿಳಿದು, ಮಕ್ಕಳೆಲ್ಲರೂ ಅವರದೇ ರೀತಿಯಲ್ಲಿ ಶುಭಾಶಯ ಕೋರಿದರು. ಆ ದಿನ ಮಾತ್ರ ತುಂಬಾ ಭಾವುಕಳಾಗಿಬಿಟಿದ್ದೆ.
ಕೋಣೆಯನ್ನು, ಬಣ್ಣ ಬಣ್ಣದ ನಾಲ್ಕೈದು ಬಲೂನುಗಳನ್ನು ಕಟ್ಟಿ ಅಲಂಕರಿಸಿದ್ದರು. ಮಕ್ಕಳು ತುಂಬಾ ಸಂಕೋಚದಿಂದ, ತಮ್ಮ ಕೈಯಾರೆ ಬಿಡಿಸಿದ ಚಿತ್ರ, ಅಲ್ಲೇ ಸಿಕ್ಕಿದ ಹೂ, ಹುಲ್ಲುಗಳ ಚಂದದ ಗುತ್ಛ, ಪೆನ್ನು, ಇತ್ಯಾದಿಗಳನ್ನು ಬೇಡವೆಂದರೂ ಕೊಟ್ಟು ಆಶೀರ್ವಾದ ಪಡೆದರು. ಆ ಮಕ್ಕಳೆಲ್ಲರೂ ಕಷ್ಟಪಟ್ಟು ಅಭ್ಯಾಸ ಮಾಡಿ, ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿ ಪಡೆದುದು ಹೆಮ್ಮೆಯ ಸಂಗತಿ. ನನ್ನ ಈ ಅರೆ ಶಿಕ್ಷಕಿ ಕಾರ್ಯವು ಈಗ ಐದನೇ ವರ್ಷಕ್ಕೆ ಕಾಲಿಟ್ಟಿದೆ. ಮನೆ ಹತ್ತಿರದ ಕೆಲ ಮಕ್ಕಳೂ, ತಿಳಿಯದ ವಿಷಯಗಳನ್ನು ಅರಿತುಕೊಳ್ಳಲು ಬರುತ್ತಿರುತ್ತಾರೆ.
ಎಷ್ಟೇ ಹೊತ್ತಿಗೆ ಬಂದರೂ, ಖುಷಿಯಿಂದ, ಅರ್ಥವಾಗುವಂತೆ ವಿವರಿಸುತ್ತೇನೆ. ಇಪ್ಪತ್ತು ಕಿ.ಮೀ. ದೂರದ ಗುರುಕುಲದಲ್ಲಿ ಆಗಾಗ್ಗೆ ಹೋಗಿ ಪಾಠ ಮಾಡಿ ಬರುತ್ತೇನೆ. ಹೊಟ್ಟೆಪಾಡಿಗಾಗಿ ಸಾವಿರ ಕೆಲಸಗಳನ್ನು ಮಾಡಬಹುದು. ಆದರೆ, ತುಂಬು ಹೃದಯದಿಂದ ಮಾಡುವ ಶಿಕ್ಷಕ ವೃತ್ತಿಯಲ್ಲಿ ಸಿಗುವ ಸಂತೃಪ್ತಿ ಬೇರೆ ಯಾವುದರಲ್ಲಿಯೂ ಸಿಗದು. ನಾಲ್ಕು ದಶಕಗಳ ಕಾಲ ನಾನು ಮಾಡಿದ ಬೇರೆಲ್ಲ ಕೆಲಸಕ್ಕಿಂತ, ನಿವೃತ್ತಿ ನಂತರ ಮಾಡುತ್ತಿರುವ ಈ ಕೆಲಸ ನನಗೆ ಬಹಳ ನೆಮ್ಮದಿ ನೀಡಿದೆ.
* ಶಂಕರಿ ಶರ್ಮ