Advertisement

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

12:14 AM Oct 16, 2024 | Team Udayavani |

ಸಂಸತ್ತಿಗೆ ಕರ್ನಾಟಕ ಕಾಂಗ್ರೆಸ್‌ನಿಂದ ಗೆದ್ದ ಹಿರಿಯರ ಪೈಕಿ ಜಾಫ‌ರ್‌ ಶರೀಫ್, ಶಂಕರಾನಂದ ಅವರನ್ನು ಬಿಟ್ಟರೆ ಬಿಟ್ಟರೆ ನಾನೇ ಅತೀ ಹೆಚ್ಚು ಬಾರಿ ಗೆದ್ದವನು. ನನಗೆ ಹಿರಿತನ ಇದ್ದೇ ಇದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯ ಶೇ.25ರಷ್ಟು ಎಸ್‌ಸಿ, ಎಸ್‌ಟಿಗಳಿದ್ದರೂ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರಿಗೂ ಈವರೆಗೆ “ದಲಿತ ಸಿಎಂ’ ಆಗುವ ಅವಕಾಶ ಸಿಕ್ಕಿಲ್ಲ. ಸುಮಾರು 25 ವರ್ಷಗಳಿಂದ ಈ ಕೂಗು ಇದೆ.

Advertisement

ಇವಿಷ್ಟೂ ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡ, ಎಡಗೈ ಸಮುದಾಯದ ಪ್ರಭಾವಿ ನಾಯಕರೂ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರೂ ಆಗಿರುವ ಕೆ.ಎಚ್‌. ಮುನಿಯಪ್ಪ ಅವರ ಮನದಾಳದ ಮಾತುಗಳು.

ರಾಜ್ಯದಲ್ಲಿ ಮುಡಾ ಹಗರಣದ ಅನಂತರ “ದಲಿತ ಮುಖ್ಯಮಂತ್ರಿ’ ಕೂಗು ಮತ್ತೆ ಭುಗಿಲೆದ್ದಿದ್ದು, ಸಚಿವರಾದ ಡಾ|ಎಚ್‌.ಸಿ. ಮಹದೇವಪ್ಪ, ಡಾ| ಜಿ. ಪರಮೇಶ್ವರ್‌, ಸತೀಶ್‌ ಜಾರಕಿಹೊಳಿ ಅವರು ಸರಣಿ ಸಭೆಗಳನ್ನು ನಡೆಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಭೇಟಿ ಮಾಡುತ್ತಿದ್ದರೆ, ಇತ್ತ ಉದಯವಾಣಿ ಪತ್ರಿಕೆಯ “ನೇರಾನೇರ’ ಪ್ರಶ್ನೆಗಳಿಗೆ ಉತ್ತರ ನೀಡಿರುವ ಹಿರಿಯ ಸಚಿವ ಕೆ.ಎಚ್‌. ಮುನಿಯಪ್ಪ ಕೂಡ ಪರೋಕ್ಷವಾಗಿ ಈ ಬಗ್ಗೆ ಒಲವು ತೋರಿದ್ದಾರೆ. ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಮುಡಾ ಹಗರಣದ ಬಳಿಕ ಸಿಎಂ ಕುರ್ಚಿ ಮೇಲೆ ನಿಮ್ಮ ಪಕ್ಷದ ಹಲವರ ಕಣ್ಣು ಬಿದ್ದಂತಿದೆ. ಸರಣಿ ಸಭೆಗಳು ನಡೆಯುತ್ತಿವೆ. ಇದರ ಮಧ್ಯೆ “ದಲಿತ ಸಿಎಂ’ ಕೂಗೂ ಎದ್ದಿದೆ. ಇದಕ್ಕೆ ಏನು ಹೇಳುವಿರಿ?
ಸುಮಾರು 25 ವರ್ಷದಿಂದ ದಲಿತ ಸಿಎಂ ಕೂಗು ಇದ್ದೇ ಇದೆ. ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಎಸ್‌ಸಿ, ಎಸ್‌ಟಿಗಳು ಶೇ.25 ರಷ್ಟು ಇದ್ದೇವೆ. ಆದರೂ ಯಾರೊಬ್ಬರೂ ಈ ಇದರ ಅವಕಾಶ ಪಡೆದು ಕೊಳ್ಳಲಾಗಿಲ್ಲ. ಇಷ್ಟೆಲ್ಲ ಇದ್ದರೂ ಇದು ಸಂದರ್ಭ ಅಲ್ಲ ಎಂಬುದು ನನ್ನ ಅಭಿಪ್ರಾಯ. ಬಿಜೆಪಿಯವರು ನಮ್ಮ ಮೇಲೆ ಆರೋಪ ಹೊರಿಸಿ, ಸರಕಾರವನ್ನೇ ತೆಗೆಯಬೇಕೆಂದಿದ್ದಾರೆ. ಅದರ ವಿರುದ್ಧ ಹೋರಾಡುವ ಈ ಸಂದರ್ಭದಲ್ಲಿ ಸಿಎಂ ವಿಷಯವೇ ಅಪ್ರಸ್ತುತ. ಬಿಜೆಪಿಯವರು ಬಹಳ ತೊಂದರೆ ಕೊಡುತ್ತಿದ್ದಾರೆ. ನಾವೀಗ ಒಗ್ಗಟ್ಟಾಗಿ ಇರಬೇಕು. ಈಗಿರುವ ಕಷ್ಟದಿಂದ ಮೊದಲು ಪಾರಾಗಬೇಕು. ಇದಿಷ್ಟೇ ನಮ್ಮ ಮುಂದಿರುವ ವಿಚಾರ.

ಹಾಗಿದ್ದರೆ ದಲಿತ ಸಿಎಂ ಕನಸು, ಕನಸಾಗಿಯೇ ಉಳಿಯ ಲಿದೆಯೇ? ಪಕ್ಷವನ್ನು ಅಧಿಕಾರಕ್ಕೆ ತರಲು “ಮಾಡಿದ ಕೆಲಸಕ್ಕೆ ಕೂಲಿ ಕೊಡಿ’ ಎನ್ನುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗಾದರೂ ಸಿಎಂ ಪಟ್ಟ ಒಲಿಯುತ್ತದೆಯೇ?
ಪ್ರಸ್ತುತ ಎಐಸಿಸಿ ಅಧ್ಯಕ್ಷರೂ, ರಾಜ್ಯಸಭಾ ವಿಪಕ್ಷ ನಾಯಕರೂ ಆಗಿ ರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ರಾಜಕಾರಣದಲ್ಲಿ ತೊಡಗಿ ಸಿಕೊಂಡಿದ್ದಾರೆ. ಅವರೂ 50 ವರ್ಷಗಳಿಂದ ರಾಜಕಾರಣ ದಲ್ಲಿದ್ದಾರೆ. ನಮ್ಮಲ್ಲಿನ ಅತ್ಯಂತ ಹಿರಿಯ ನಾಯಕರು. ಅವರಿಗೂ ಸಿಎಂ ಆಗುವ ಅವಕಾಶ ಆಗಲಿಲ್ಲ. ಸಂಸತ್ತಿಗೆ ಅತೀ ಹೆಚ್ಚು ಬಾರಿ ಗೆದ್ದು ಹೋದ ವರೆಂದರೆ ಜಾಫ‌ರ್‌ ಶರೀಫ್ ಮತ್ತು ಶಂಕರಾನಂದ ಸಾಹೇಬರು. ಅವರನ್ನು ಬಿಟ್ಟರೆ ಹೆಚ್ಚು ಬಾರಿ ಗೆದ್ದವರಲ್ಲಿ ನಾನಿದ್ದೇನೆ. ಏಳು ಬಾರಿ ಗೆದ್ದಿದ್ದೇನೆ. ನನ್ನ ಹಿರಿತನ ಇದ್ದೇ ಇದೆ. ದಲಿತ ಸಿಎಂ ವಿಚಾರವನ್ನು ಹೈಕಮಾಂಡ್‌ ಯಾವಾಗ ಯಾವ ರೀತಿ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಆದರೆ ನಾನು ಮೊದಲೇ ಹೇಳಿದಂತೆ ನಾವೀಗ ಒಗ್ಗಟ್ಟಾಗಿ ಇರಬೇಕು. ದಲಿತ ಸಿಎಂ ಇತ್ಯಾದಿ ವಿಚಾರದ ಪ್ರಚಾರಕ್ಕೆ ಹೋಗದೆ ಈಗಿರುವ ಕಷ್ಟದಿಂದ ಪಾರಾಗಬೇಕು. ತದನಂತರವೂ ಈ ವಿಷಯ ಗಳನ್ನು ಪ್ರಸ್ತಾವಿಸಬಹುದು. ಅಂತಿಮವಾಗಿ ಹೈಕಮಾಂಡ್‌ ಎಂತಹ ತೀರ್ಮಾನ ಕೈಗೊಂಡರೂ ನಾವು ಬದ್ಧರಾಗಿರಬೇಕಾಗುತ್ತದೆ. ಡಿ.ಕೆ. ಶಿವಕುಮಾರ್‌ ಪಕ್ಷದ ಅಧ್ಯಕ್ಷರು, ಡಿಸಿಎಂ ಇದ್ದಾರೆ. ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆಯೋ ಗೊತ್ತಿಲ್ಲ.

Advertisement

ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಅಧಿಕಾರಕ್ಕೆ ಬಂದ ನಿಮ್ಮ ಸರಕಾರದ ವಿರುದ್ಧವೇ ಭ್ರಷ್ಟಾ ಚಾರದ ಆರೋಪಗಳು ಬಂದಿವೆಯಲ್ಲ? ವಾಲ್ಮೀಕಿ ನಿಗಮದಲ್ಲಿ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಕೊಡು ವಂತಾಯಿತು. ಈಗ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರ ರಾಜೀನಾಮೆಗೂ ಆಗ್ರಹ ಇದೆಯಲ್ಲ?
ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲ ಎಂಬ ವಾಸ್ತವಾಂಶ ಗೊತ್ತಿದ್ದೂ ಬಿಜೆಪಿ ವಿನಾಕಾರಣ ಆರೋಪಿಸುತ್ತಿದೆ. ಸಿದ್ದರಾಮಯ್ಯ ಅವರು ವಿಪಕ್ಷ ನಾಯಕರಾಗಿ ಯಾರಿಗೂ ಪತ್ರ ಬರೆದಿರಲಿಲ್ಲ. ಯಾವ ಪ್ರಭಾವವನ್ನೂ ಬಳಸಿಲ್ಲ. ಮುಡಾ ಅಧ್ಯಕ್ಷರಾಗಿದ್ದವರೇ ಬಿಜೆಪಿಯವರು. ಈ ತೀರ್ಮಾನ ಕೈಗೊಂಡಿದ್ದು ಅವರ ಅವಧಿಯಲ್ಲಿ. ರಾಜಕೀಯ ಪ್ರೇರಣೆಯಿಂದ ಸಿದ್ದರಾಮಯ್ಯರನ್ನು ಸಿಲುಕಿಸಬೇಕು, ರಾಜೀನಾಮೆ ಕೊಡಿಸಬೇಕೆಂದು ಬಿಜೆಪಿ ಹೊರಟಿದೆ. ನಾವು, ಹೈಕಮಾಂಡ್‌ ಬಹಳ ಗಟ್ಟಿಯಾದ ತೀರ್ಮಾನ ಮಾಡಿದ್ದೇವೆ. ಯಾವುದೇ ಕಾರಣಕ್ಕೆ ರಾಜೀನಾಮೆ ಕೊಡುವ ಆವಶ್ಯಕತೆ ಇಲ್ಲ.

ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ವರದಿಯನ್ನು ಸರಕಾರ ಒಪ್ಪುತ್ತದೆಯೇ? ವರದಿಯೇ ಅವೈಜ್ಞಾನಿಕ ಎಂಬ ಆರೋಪಗಳಿವೆಯಲ್ಲವೇ?
ಯಾವುದೇ ಜಾತಿಯಲ್ಲಿನ ಉಪಜಾತಿಗಳೂ ಮುಂದುವರಿ ಯಬೇಕು. ಹಿಂದುಳಿದವರಿಗೆ ನ್ಯಾಯ ಸಿಗಬೇಕು. ಜನಸಂಖ್ಯೆ ಆಧಾರದ ಮೇಲೆ ವರ್ಗೀಕರಣ ಆದರೆ ಅನುಕೂಲ ಆಗುತ್ತದೆ. ಇದಕ್ಕಾಗಿ ಆಯಾ ಜಾತಿಗಳವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವಿಕೆ ತಿಳಿಯುವುದು ಮುಖ್ಯ. ಅದಕ್ಕಾಗಿ ಸಮೀಕ್ಷೆ ನಡೆದಿದೆ. ಅದರ ವರದಿಯನ್ನು ಸ್ವೀಕರಿಸಿದ್ದೇವೆ. ಸಂಪುಟ ಸಭೆಯ ಮುಂದಿಡುತ್ತೇವೆ. ಅಲ್ಲಿ ಚರ್ಚಿಸಿದ ಅನಂತರ ಹೊರಬರುವ ವಿಷಯಗಳನ್ನು ಹಂಚಿಕೊಳ್ಳುತ್ತೇವೆ. ಒಟ್ಟಾರೆ ಈ ಸಮೀಕ್ಷೆಯಿಂದ ಎಲ್ಲ ಜಾತಿಗೂ ನ್ಯಾಯ ನೀಡಲು ಅನುಕೂಲ ಆಗುತ್ತದೆ.

ಒಳಮೀಸಲಾತಿ ಅಧಿಕಾರವನ್ನು ರಾಜ್ಯ ಸರಕಾರಗಳಿಗೇ ಸುಪ್ರೀಂ ಕೋರ್ಟ್‌ ನೀಡಿದೆ. ಚೆಂಡು ಈಗ ನಿಮ್ಮ ರಾಜ್ಯ ಸರಕಾರದ ಅಂಗಳದಲ್ಲಿದೆ. ವಿರೋಧಗಳ ನಡುವೆಯೇ ಒಳಮೀಸಲಾತಿ ಜಾರಿ ಆಗುತ್ತದೆಯೇ?
ಜನಸಂಖ್ಯೆಯ ಆಧಾರದ ಮೇಲೆ ಒಳಮೀಸಲಾತಿ ಜಾರಿ ಆಗಲೇಬೇಕು. ಇದು ಅನಿವಾರ್ಯ ಕೂಡ. ಇದರಲ್ಲಿ ಎರಡನೇ ಮಾತೇ ಇಲ್ಲ. ಪರಿಶಿಷ್ಟ ಜಾತಿಯಲ್ಲಿ ಇರುವ 101 ಉಪಜಾತಿಯವರಿಗೂ ಸಾಮಾಜಿಕ ನ್ಯಾಯ ಸಿಗಬೇಕಿದ್ದರೆ ಜನಸಂಖ್ಯೆ ಆಧಾರದಲ್ಲಿ ವರ್ಗೀಕರಣ ಆಗಲೇಬೇಕು. 101 ಉಪಜಾತಿಯವರೂ ಮೀಸಲಾತಿ ಸಮಾನವಾಗಿ ಹಂಚಿಕೊಳ್ಳಲು ಸಿದ್ಧರಿದ್ದೇವೆ. ಯಾರ ವಿರೋಧವೂ ಇಲ್ಲ. ನಮ್ಮಲ್ಲಿ ಎಡ, ಬಲ, ಬೋವಿ, ಲಂಬಾಣಿ ಪ್ರಾಧಾನ್ಯವಾಗಿವೆ. ಕೊರಮ, ಕೊರಚ ಕೂಡ ಇವೆ. ಸ್ಪೃಶ್ಯ, ಅಸ್ಪೃಶ್ಯ ಎನ್ನುವ ಪರಿಕಲ್ಪನೆ ನಮ್ಮಲ್ಲಿ ಇಲ್ಲ. ಸದಾಶಿವ ಆಯೋಗದ ಒಂದಂಶವನ್ನು ಮಾತ್ರ ತೆಗೆದುಕೊಂಡಿದ್ದ ಹಿಂದಿನ ಬಿಜೆಪಿ ಸರಕಾರ, ಅದರಲ್ಲಿನ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಹಂಚಿಕೆ ಮಾಡಿತ್ತು. ನಾವೂ ಅದರಲ್ಲೇ ಕೊಂಚ ಬದಲಾವಣೆ ಮಾಡಿದ್ದೇವಷ್ಟೇ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಮಹತ್ತರವಾದದ್ದು. ಸಮುದಾಯದಲ್ಲಿನ ಮುಂದುವರಿದವರೇ ಮೀಸಲಾತಿ ಪಡೆದರೆ ಹಿಂದುಳಿದವರಿಗೆ ಅನ್ಯಾಯ ಆಗುತ್ತದೆ. ಉದಾಹರಣೆಗೆ ಮಾದಿಗರು ವಿದ್ಯೆ, ನೌಕರಿ ಹಾಗೂ ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಅವರ ಪಾಲು ಅವರಿಗೆ ಸಿಕ್ಕಿದರೆ ಬೇರೆಯವರಂತೆ ಸಮಾಜದಲ್ಲಿ ಸಮಾನವಾಗಿ ಬೆಳೆಯಲು ಸಾಧ್ಯ. ಇದಕ್ಕಾಗಿ 30 ವರ್ಷ ಹೋರಾಟ ನಡೆದಿದೆ.

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಅನ್ನಭಾಗ್ಯ’ದಡಿ ಆಹಾರ ಕಿಟ್‌ ಕೊಡುವ ಕಾರ್ಯಕ್ರಮ ಎಲ್ಲಿಗೆ ಬಂತು?
ರಾಷ್ಟ್ರೀಯ ಆಹಾರ ಭದ್ರತೆ ಅಡಿ ರಾಜ್ಯದಲ್ಲಿ 1.16 ಕೋಟಿ ಕಾರ್ಡುದಾರರಿದ್ದರೆ, ರಾಜ್ಯ ಆಹಾರ ಇಲಾಖೆಯಿಂದ 13ಕ್ಕೂ ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ಕೊಡಲಾಗಿದೆ. ಎರಡೂ ಸೇರಿ ಒಟ್ಟು 1.30 ಕೋಟಿ ಕಾರ್ಡುದಾರರಿದ್ದು, ಹೊಸದಾಗಿ 2.95 ಲಕ್ಷ ಅರ್ಜಿಗಳು ಬಂದಿದ್ದವು. ಮಾನದಂಡಗಳಡಿ ಪರಿಶೀಲಿಸಿ 2.30 ಲಕ್ಷ ಬಿಪಿಎಲ್‌ ಮತ್ತು 45 ಸಾವಿರ ಎಪಿಎಲ್‌ ಕಾರ್ಡುದಾರರು ಎಂದು ಗುರುತಿಸಿದ್ದು, 1.62 ಲಕ್ಷ ಕಾರ್ಡ್‌ಗಳನ್ನು ಈವರೆಗೆ ವಿತರಣೆ ಮಾಡಲಾಗಿದೆ. ಉಳಿದ ಕಾರ್ಡ್‌ಗಳ ವಿಲೇವಾರಿ ಬಾಕಿ ಇದೆ. ಈ ಮಧ್ಯೆ ನಿರಂತರವಾಗಿ ಪಡಿತರ ಪಡೆಯದ 2.75 ಲಕ್ಷ ಕಾರ್ಡುದಾರರು ಇದ್ದಾರೆ. ಇದೆಲ್ಲವನ್ನೂ ಪರಿಷ್ಕರಣೆ ಮಾಡಿದ ಅನಂತರ “ಆಹಾರ ಕಿಟ್‌’ ಒದಗಿಸಲು ಚಿಂತನೆ ನಡೆಸಿದ್ದೇವೆ. ಅಲ್ಲಿಯವರೆಗೆ ತಲಾ 170 ರೂ.ಗಳನ್ನು ಕೊಡುವ ವ್ಯವಸ್ಥೆಯೇ ಮುಂದುವರಿಯಲಿದೆ.

ಕೇಂದ್ರ ಸರಕಾರ ಅಕ್ಕಿ ಕೊಡುತ್ತಿಲ್ಲ ಎಂದು ಆರೋಪಿಸಿದ್ದೀರಿ. ಈಗ 28 ರೂ.ಗೆ ಕೆ.ಜಿ.ಅಕ್ಕಿ ಕೊಡುವ ಆಫ‌ರ್‌ ನೀಡಿದೆ. ಇದನ್ನು ರಾಜ್ಯ ಸರಕಾರ ಒಪ್ಪಿಕೊಳ್ಳುತ್ತದೆಯೋ? ಇಲ್ಲವೋ?
ಕೇಂದ್ರ ಸರಕಾರದ ಈ ಆಫ‌ರ್‌ನ್ನು ನಾವು ಒಪ್ಪಿದ್ದೇವೆ. 1.16 ಕೋಟಿ ಕಾರ್ಡುದಾರರಿಗೆ ರಾಷ್ಟ್ರೀಯ ಆಹಾರ ಭದ್ರತೆಯಡಿ ಪಡಿತರ ಬರಲಿದೆ. ರಾಜ್ಯದಿಂದ ಕೊಟ್ಟಿರುವ 13 ಲಕ್ಷಕ್ಕೂ ಅಧಿಕ ಕಾರ್ಡುದಾರರಿಗೆ ಅಗತ್ಯ ವಾಗಿರುವ ಅಕ್ಕಿ ಕೊಡುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರನ್ನು ಭೇಟಿ ಮಾಡಿ ನಾನೇ ಮನವಿ ಮಾಡಿದ್ದೆ. ಅದರಂತೆ ಮಾಸಿಕ 20 ಸಾವಿರ ಮೆಟ್ರಿಕ್‌ ಟನ್‌ ಅಕ್ಕಿಗೆ ಬೇಡಿಕೆಯನ್ನೂ ಇಡಲಾಗಿದೆ. ಅವರೂ ಕೊಡಲು ಒಪ್ಪಿದ್ದಾರೆ. ತತ್‌ಕ್ಷಣದಿಂದಲೇ ಅದನ್ನು ಖರೀದಿ ಮಾಡಲು ವ್ಯವಸ್ಥೆ ಮಾಡುತ್ತಿದ್ದೇವೆ. ರಾಜ್ಯದ ಕಾರ್ಡುದಾರರಿಗೂ “ಆಹಾರ ಕಿಟ್‌’ ಕೊಡುವವರೆಗೆ 5 ಕೆ.ಜಿ. ಅಕ್ಕಿ ಕೊಡಲೂ ಚಿಂತನೆ ನಡೆಸಿದ್ದೇವೆ.

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಆಗುತ್ತಿರುವುದು ನಿಜವಾ? ಯಾವ ಕಾರಣಗಳ ಹಿನ್ನೆಲೆಯಲ್ಲಿ ಈ ರೀತಿ ಆಗುತ್ತಿದೆ ಎಂದು ಎಂದಾದರೂ ನಿಮ್ಮ ಸರಕಾರ ಯೋಚಿಸಿದೆಯೇ?
ಮಹಾರಾಷ್ಟ್ರ ಬಿಟ್ಟರೆ ದೇಶಕ್ಕೆ ಅತೀ ಹೆಚ್ಚು ತೆರಿಗೆ ಪಾಲು ಕರ್ನಾಟಕದಿಂದ ಸಿಗುತ್ತಿದೆ. ಆದರೆ ನಮ್ಮ ಪಾಲು ನಮಗೆ ಸಿಗುತ್ತಿಲ್ಲ. 5 ಸಾವಿರ ಕೋಟಿ ರೂ. ಘೋಷಿಸಿ ಕೊಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ, ಕಾನೂನು ಚೌಕಟ್ಟಿನಲ್ಲಿ ಕೊಡಬೇಕಾದ್ದನ್ನು ಕೊಡುತ್ತಿಲ್ಲ. ಸುಪ್ರೀಂ ಕೋರ್ಟ್‌ ಆದೇಶಿಸಿದ ಅನಂತರ ಬರ ಪರಿಹಾರ ಕೊಟ್ಟರು. ರಾಜ್ಯಗಳ ಬಗ್ಗೆ ಮಲತಾಯಿ ಧೋರಣೆ ಯಾವ ಸರಕಾರವೂ ತೋರಿಲಿಲ್ಲ. ಮೋದಿ ಪ್ರಧಾನಿಯಾಗಿ ಬಂದ ಅನಂತರ ಇದು ಜಾಸ್ತಿ ಆಗಿದೆ. ನ್ಯಾಯಸಮ್ಮತವಾಗಿ ಬರಬೇಕಾದ್ದು ಬರುತ್ತಿಲ್ಲ. ಇದೇ ಕಾರಣಕ್ಕಾಗಿ ದಕ್ಷಿಣ ರಾಜ್ಯಗಳ ಸಮ್ಮೇಳನ ಆಯೋಜಿಸಲೂ ನಮ್ಮ ಸರಕಾರ ನಿರ್ಧರಿಸಿದೆ.

ಉದಯವಾಣಿ ಸಂದರ್ಶನ: ಸಾಮಗ ಶೇಷಾದ್ರಿ

Advertisement

Udayavani is now on Telegram. Click here to join our channel and stay updated with the latest news.

Next