Advertisement

Kalaburagi; ಬಿಜೆಪಿಯವರಿಗೆ ನಾನು‌ ಮನೆ ದೇವರಾಗಿದ್ದೇನೆ: ಪ್ರಿಯಾಂಕ್ ಖರ್ಗೆ

02:57 PM Jan 24, 2024 | Team Udayavani |

ಕಲಬುರಗಿ: ನಾನು ಏನೇ ಮಾಡಿದ್ದರೂ ಹಾಗೂ ಮಾತನಾಡಿದ್ದರೂ ಬಿಜೆಪಿಯವರಿಗೆ ನಾನು ಮನೆ ದೇವರಾಗಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಅವರಿಗೆ ಮನೆ ದೇವರಂತೆ ಆಗಿದ್ದೇನೆ. ಏನೇ ಇದ್ದರೂ ನನ್ನ ಬಗ್ಗೆ ಮಾತನಾಡುವವರೆಗೆ ತಿಂದ ಅನ್ನ ಕರುಗುವುದಿಲ್ಲ. ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಿದ್ದರೂ ಏನು ತಂದಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರಸಕ್ತವಾಗಿ ವ್ಯಾಪಕ ಬರ ಬಿದ್ದಿದ್ದರೂ ಪರಿಹಾರ ಬರಲಿಲ್ಲ. ಯಾವುದೇ ದೊಡ್ಡ ಯೋಜನೆ ಬರಲಿಲ್ಲ. ನರೇಗಾ 150 ದಿನಕ್ಕೆ ಹೆಚ್ಚಳ ಮಾಡಲಿಲ್ಲ. ಇವರು ಯಾವುದೇ ಲೆಸ ಮಾಡಿಲ್ಲ. ಅಯೋಗ್ಯ, ಅಸಮರ್ಥ ಪದಗಳ ಎಲ್ಲ ಸಮನಾರ್ಥಕ ಪದಗಳು ಬಿಜೆಪಿ ರಾಜ್ಯ ನಾಯಕರಿಗೆ ಸರಿಹೊಂದುತ್ತವೆ ಎಂದು ಹೇಳಿದರು.

ಶೀಘ್ರ ಪಟ್ಟಿ ಫೈನಲ್: ಎಐಸಿಸಿ ಅಧ್ಯಕ್ಷರು ಇಲ್ಲಿನವರು ಇರುವುದರಿಂದ ಕಲಬುರಗಿಯಿಂದ ಪಟ್ಟಿಗೆ ತಡೆ ಬಿದ್ದಿರಬಹುದು. ಮುಂದಿನ ಲೋಕಸಭೆ ಚುನಾವಣೆ ಟಿಕೆಟ್ ಪಟ್ಟಿಗೂ ಇಲ್ಲಿಂದಲೇ ಸಹಿ ಬೀಳಬೇಕು. ಸದ್ಯ ಕಲಬುರಗಿ ಕಾರ್ಯಕರ್ತರ ಹೆಸರು ಜಾಸ್ತಿ ಇವೆ ಎಂಬ ಕಾರಣದಿಂದ ತಡವಾಗಿಲ್ಲ. ಮೊದಲ ಪಟ್ಟಿಯಲ್ಲಿ ಹಿರಿಯ ಶಾಸಕರಿಗೆ, ಹಿರಿಯ ಕಾರ್ಯಕರ್ತರು ಹಾಗೂ ಕೆಲವು ಜಿಲ್ಲಾ ಅಧ್ಯಕ್ಷರಿಗೆ ಸ್ಥಾನ ನೀಡುವ ನಿರೀಕ್ಷೆ ಹೊಂದಿದ್ದು, ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಬಿಜೆಪಿ ಆರ್‌ಎಸ್‌ಎಸ್ ಏನೇ ಮಾಡಿದರು ನನಗೆ ಅನುಮಾನ ಇದೆ. ಕಳೆದ ಒಂಬತ್ತುವರೆ ವರ್ಷಗಳಲ್ಲಿ ಮೋದಿ ಟ್ರಾಕ್ ರಿಕಾರ್ಡ್ ನೋಡಿದರೆ ಏನು ನಂಬಬೇಕು ಎನಿಸುತ್ತಿಲ್ಲ ಎನ್ನುತ್ತಲೆ, ಪ್ರಧಾನಿ ಮೋದಿ 11 ದಿನದ ಉಪವಾಸದ ಬಗ್ಗೆ ಅನುಮಾನ ಹೊರಹಾಕಿದರು. ಮೋದಿ ಅವರು ಉಪವಾಸ ಮಾಡಿದ್ದರೆ ಒಳ್ಳೆಯದು, ಇಲ್ಲದಿದ್ದರೆ ದೇವರೆ ನೋಡಿಕೊಳ್ಳುತ್ತಾನೆ ಎಂದು ಹೇಳಿದರು.

Advertisement

ದೇಶದ ರಾಮ ಮಂದಿರ ಉದ್ಘಾಟನೆ ಬಗ್ಗೆ ನಾಲ್ಕು ಶಂಕರಾಚಾರ್ಯ ಮಠಗಳು ಕೇಳಿರುವ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡಬೇಕಾಗಿದೆ. ಯಾವ ಲಾಭಕ್ಕಾಗಿ ಮಂದಿರ ಉದ್ಘಾಟನೆ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಸಂವಿಧಾನದ ಮೇಲೆ ಭಕ್ತಿ ಇದೆ: ನನಗೆ ಯಾರ ಮೇಲೆ ಭಕ್ತಿ ಇಲ್ಲ. ಬಸವೇಶ್ವರ, ಅಂಬೇಡ್ಕರ್ ತತ್ವದ ಮೇಲೆ ಭಕ್ತಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಯಾವ ತತ್ವದಲ್ಲಿ ಸಮಾನತೆ ಎಂಬುದು ಇಲ್ಲವೋ ಅದನ್ನು ನಾನು ಒಪ್ಪುವುದಿಲ್ಲ. ರಾಮ ಅಸಮಾನತೆ ಮಾಡಿಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ಅಂಬೇಡ್ಕರ್ ಪುಸ್ತಕ ಬರೆದಿದ್ದಾರೆ ಅದನ್ನು ಬಿಜೆಪಿಯವರು ಓದಲಿ ಎಂದು ಸಲಹೆ ನೀಡಿದರು. ನಂಬಿಕೆ ಇದ್ದವರು ಅವರ ನಂಬಿಕೆಗೆ ಅನುಸಾರವಾಗಿ ಹೋಗಬಹುದಾಗಿದೆ. ನಾನು ಶರಣಬಸವೇಶ್ವರ ದೇವಸ್ಥಾನ, ದರ್ಗಾಗೆ ಭೇಟಿ ನೀಡುತ್ತೇನೆ. ಅಲ್ಲಿ ಹೋಗಬೇಡ ಇಲ್ಲಿ ಹೋಗಬೇಡ ಎಂಬ ಕಟ್ಟಳೆಗಳು ಇರುವುದಿಲ್ಲ. ಎಲ್ಲರಿಗೂ ಸಮಾನತೆಯಿಂದ ದಾಸೋಹ ನೀಡಲಾಗುತ್ತದೆ ಇಂತಹ ಸ್ಥಳಗಳಿಗೆ ನಾನು ಹೋಗುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next