Advertisement

ಜೈನ ಧರ್ಮದವನಲ್ಲ ನಾನು ಹಿಂದೂ ವೈಷ್ಣವ

08:35 AM Apr 07, 2018 | Karthik A |

ಮುಂಬಯಿ: ‘ನಾನು ಹಿಂದೂ ವೈಷ್ಣವನೇ ಹೊರತು, ಜೈನ ಧರ್ಮಕ್ಕೆ ಸೇರಿದವನಲ್ಲ’. ಹೀಗೆಂದು ಹೇಳಿರುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ. ಇವರು ತಮ್ಮ ಧರ್ಮದ ಬಗ್ಗೆ ಸ್ಪಷ್ಟನೆ ನೀಡಲು ಕಾರಣ ಕರ್ನಾಟಕದ ಸಿಎಂ ಸಿದ್ದರಾಮಯ್ಯ. ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟದಲ್ಲಿ ಇತ್ತೀಚೆಗೆ ಶಾ ವಿರುದ್ಧ ವಾಗ್ಧಾಳಿ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಅಮಿತ್‌ ಶಾ ಹಿಂದೂ ಅಲ್ಲ, ಅವರು ಜೈನ ಧರ್ಮಕ್ಕೆ ಸೇರಿದವರು. ಈ ಬಗ್ಗೆ ಅವರು ಮೊದಲು ಸ್ಪಷ್ಟಪಡಿಸಲಿ’ ಎಂದು ಹೇಳಿಕೆ ನೀಡಿದ್ದರು. ಅದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಶಾ, ನಾನು ಜೈನ ಅಲ್ಲ, ಹಿಂದೂ ವೈಷ್ಣವ ಎಂದು ಹೇಳಿದ್ದಾರೆ.

Advertisement

ಬಿಜೆಪಿಯ 38ನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ಮುಂಬಯಿಯಲ್ಲಿ ನಡೆದ Rallyಯಲ್ಲಿ ಶಾ ಈ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ, ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನು ಪ್ರಸ್ತಾಪಿಸಿರುವ ಶಾ, ‘ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂಥ ಕರ್ನಾಟಕ ಸರಕಾರದ ನಿರ್ಧಾರವು ಹಿಂದೂಗಳನ್ನು ವಿಭಜಿಸುವ ತಂತ್ರವಾಗಿದೆ. ಯಡಿಯೂರಪ್ಪ ಅವರು ಸಿಎಂ ಆಗುವುದನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೆಲ್ಲ ಚುನಾವಣಾ ಗಿಮಿಕ್‌’ ಎಂದೂ ಹೇಳಿದ್ದಾರೆ.

ಮೀಸಲಾತಿ ರದ್ದು ಮಾಡಲ್ಲ: ಎಸ್‌.ಸಿ., ಎಸ್‌.ಟಿ.ಗಳಿಗೆ ನೀಡಲಾಗುವ ಮೀಸಲಾತಿಯನ್ನು ಬಿಜೆಪಿ ರದ್ದು ಮಾಡುತ್ತದೆ ಎಂದು ರಾಹುಲ್‌ ಬಾಬಾ ಮತ್ತಿತರರು ಹೇಳಿಕೊಂಡು ಹೋಗುತ್ತಿದ್ದಾರೆ. ಆದರೆ, ಮೀಸಲಾತಿ ರದ್ದು ಮಾಡುವ ಯೋಚನೆಯೇ ನಮಗಿಲ್ಲ. ಬೇರೆ ಯಾರಾದರೂ ರದ್ದು ಮಾಡಲು ಮುಂದಾದರೂ ನಾವದಕ್ಕೆ ಅವಕಾಶ ನೀಡುವುದಿಲ್ಲ ಎಂದೂ ಶಾ ಸ್ಪಷ್ಟಪಡಿಸಿದ್ದಾರೆ.

ವಿಪಕ್ಷಗಳನ್ನು ನಾಯಿ, ಬೆಕ್ಕುಗಳಿಗೆ ಹೋಲಿಸಿದ ಶಾ


ಇದೇ ವೇಳೆ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಂದಾಗಲು ಮುಂದಾಗಿರುವ ವಿಪಕ್ಷಗಳನ್ನು ಹಾವು, ಮುಂಗುಸಿ, ನಾಯಿ, ಬೆಕ್ಕುಗಳಿಗೆ ಹೋಲಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೆ ಪ್ರತಿಕ್ರಿಯಿಸಿದ ಅವರು, ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘2019ರ ಲೋಕಸಭೆ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ವಿಪಕ್ಷಗಳೆಲ್ಲ ಒಗ್ಗಟ್ಟಾಗಲು ಹೊರಟಿವೆ. ದೊಡ್ಡ ಮಟ್ಟದ ಪ್ರವಾಹ ಉಂಟಾದಾಗ, ಉಳಿದೆಲ್ಲವೂ ಕೊಚ್ಚಿಹೋಗುತ್ತವೆ. ಕೇವಲ ಆಲದ ಮರವಷ್ಟೇ ಉಳಿಯುತ್ತದೆ. ಮೇಲೇಳುವ ನೀರಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಪ್ರಾಣಿಗಳೆಲ್ಲ ಮರವನ್ನೇರಲು ಆರಂಭಿಸುತ್ತವೆ. ಮೋದಿ ಪ್ರವಾಹದಿಂದಾಗಿ, ಹಾವು, ಮುಂಗುಸಿ, ನಾಯಿ, ಬೆಕ್ಕುಗಳೆಲ್ಲ ಒಂದಾಗಿ, ಚುನಾವಣೆ ಎದುರಿಸಲು ಮುಂದಾಗಿವೆ’ ಎಂದು ಹೇಳಿದ್ದರು. ಶಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ, ಅವರ ಹೇಳಿಕೆಯಲ್ಲಿ ಆಕ್ಷೇಪಾರ್ಹ ಅಂಶಗಳೇನೂ ಇರಲಿಲ್ಲ ಎಂದು ಹೇಳಿತ್ತು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಶಾ, ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸುವ ಉದ್ದೇಶ ನನಗಿರಲಿಲ್ಲ  ಎಂದಿದ್ದಾರೆ.

ವಿಪಕ್ಷಗಳನ್ನು ಪ್ರಾಣಿಗಳಿಗೆ ಹೋಲಿಸಿರುವುದು ಅಮಿತ್‌ ಶಾ ಅವರ ಮನಃಸ್ಥಿತಿಯನ್ನು ತೋರಿಸುತ್ತದೆ. ಇದೊಂದು ನಾಚಿಕೆಗೇಡಿನ ವಿಷಯ.
– ಆನಂದ್‌ ಶರ್ಮಾ, ಕಾಂಗ್ರೆಸ್‌ ವಕ್ತಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next