ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೋ ಗುರುವಾರ ಇನ್ನೊಂದು ಮಹ್ವತದ ಸಾಧನೆ ಮಾಡಿದ್ದು,ಹೈಸಿಸ್ ಉಪಗ್ರಹವನ್ನು ಇತರ 30 ಉಪಗ್ರಹಗಳೊಂದಿಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಬೆಳಗ್ಗೆ 9.58 ರ ವೇಳೆಗೆ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಸಿ43 ಮೂಲಕ ಉಡಾಯಿಸಲಾಗಿದ್ದು ಉಪಗ್ರಹಗಳು ಕಕ್ಷೆಯನ್ನು ಸೇರುವಲ್ಲಿ ಯಶಸ್ವಿಯಾಗಿವೆ.
ಪಿಎಸ್‌ಎಲ್‌ವಿ ಸಿ43 ಮೂಲಕ ಉಡಾಯಿಸಲಾದ ಹೈಸಿಸ್ HysIS(hyperspectral imaging satellite) ಮತ್ತು ವಿದೇಶಗಳ 30 ಉಪಗ್ರಹಗಳು ಯಶಸ್ವಿಯಾಗಿ ನಿಗದಿ ಪಡಿಸಿದ ಕಕ್ಷೆಯನ್ನು ಸೇರಿರುವುದಾಗಿ ಇಸ್ರೋ ವಿಜ್ಞಾನಿಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಉಪಗ್ರಹಗಳು ಕಕ್ಷೆಯನ್ನು ಸೇರಿಕೊಂಡ ಬಳಿಕ ಇಸ್ರೋ ಅಧ್ಯಕ್ಷ ಕೆ ಸಿವನ್ ಸೇರಿದಂತೆ ವಿಜ್ಞಾನಿಗಳು ಸಂಭ್ರಮಿಸಿದರು.
8 ದೇಶಗಳ 30 ಉಪಗ್ರಹಗಳನ್ನು ಉಡಾಯಿಸಲಾಗಿದ್ದು ಆಪೈಕಿ 29 ನ್ಯಾನೋ ಉಪಗ್ರಹಗಳಾಗಿದ್ದು, ಒಂದು ಮೈಕ್ರೋ ಉಪಗ್ರಹವಾಗಿದೆ. ಒಟ್ಟು 261.3ಕೆಜಿ ತೂಕ ಹೊಂದಿದ್ದವು. 30 ರ ಪೈಕಿ 29 ಅಮೆರಿಕದ್ದಾಗಿದ್ದವು.
ಕೃಷಿ ಕ್ಷೇತ್ರ, ಅರಣ್ಯಸಂಪತ್ತಿನ ಸಂರಕ್ಷಣೆ, ಕರಾವಳಿ ಪ್ರದೇಶ, ಒಳನಾಡು ಜಲ ಮಾರ್ಗಗಳು, ಮಣ್ಣಿನ ಫಲವತ್ತತೆ ಸೇರಿದಂತೆ ಹಲವು ಭೌಗೋಳಿಕ ಅಂಶಗಳ ಖಚಿತ ಮಾಹಿತಿ ನೀಡುವ ಕಾರ್ಯವನ್ನು ಹೈಸಿಸ್ ಮಾಡಲಿದೆ.