ನವದೆಹಲಿ: ಇತ್ತೀಚೆಗೆ ಭಾರತದ ಚಂದ್ರಯಾನ-3 ನೌಕೆ ಚಂದ್ರನ ಮೇಲಿಳಿದ ನಂತರ ಹಲವು ಅದ್ಭುತ ಮಾಹಿತಿಗಳು ಹೊರಬಿದ್ದಿವೆ.
ಆ ಪೈಕಿ ಚಂದ್ರನ ಮೇಲೆ ಸಹಜ ಕಂಪನ ಅಥವಾ ಚಲನೆಯ ಮಾಹಿತಿಯೂ ಒಂದು. ಇದೀಗ ಚಂದ್ರನಲ್ಲಿ ನಿಯಮಿತವಾಗಿ ಕಂಪನಗಳು ಸಂಭವಿಸುತ್ತವೆ ಎಂಬುದನ್ನು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಹಿಂದೆಯೇ ಸಿಕ್ಕಿದ್ದ ಮಾಹಿತಿಯನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.
ಈ ಮಾಹಿತಿಯನ್ನು ನೀಡಿದ್ದು ಕ್ಯಾಲಿಫೋರ್ನಿಯ ತಂತ್ರಜ್ಞಾನ ವಿಶ್ವವಿದ್ಯಾಲಯದ (ಕ್ಯಾಲ್‌ಟೆಕ್) ಫ್ರಾನ್ಸಿಸ್ಕೊ ಸಿವಿಲಿನಿ ನೇತೃತ್ವದ ಸಂಶೋಧಕರ ತಂಡ. 1970ರ ಹೊತ್ತಿಗೆ ಅಪೊಲೊ 17 ಮಿಷನ್ ಮೂಲಕ ಚಂದ್ರನಲ್ಲಿ ಒಂದು ಸೀಸೊಮೀಟರ್ ಇಡಲಾಗಿತ್ತು. ಅದರಿಂದ ಚಂದ್ರನಲ್ಲಿ ಸಂಭವಿಸುವ ಕಂಪನಗಳ ಮಾಹಿತಿಗಳನ್ನು ಪಡೆಯಲಾಗಿದೆ. ಆದರೆ ಅದನ್ನು ದೀರ್ಘಕಾಲ ಗಾಢವಾದ ಅಧ್ಯಯನಕ್ಕೆ ಒಳಪಡಿಸಿರಲಿಲ್ಲ.ಅದನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪುನರಧ್ಯಯನಕ್ಕೆ ಒಳಪಡಿಸಲಾಗಿದೆ. ಇದನ್ನು ಗಮನಿಸಿದಾಗ ಚಂದ್ರನ ಮೇಲೆ ಹಗಲು ಮತ್ತು ರಾತ್ರಿಯಲ್ಲಿ ಕಂಪನ ಸಂಭವಿಸುತ್ತವೆ.
ಮುಂಜಾನೆ ಹೊತ್ತು ಇದರ ಪ್ರಮಾಣ ಜಾಸ್ತಿ. ಹಾಗೆಯೇ ರಾತ್ರಿಯಾಗುತ್ತಿದ್ದಂತೆಯೂ ಚಂದ್ರನಲ್ಲಿ ಕಂಪನದಿಂದಾಗಿ ಸಣ್ಣ ಬಿರುಕುಗಳು ಉಂಟಾಗುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.