Advertisement

ಹತ್ತೇ ನಿಮಿಷದಲ್ಲಿ ನಗರಕ್ಕೆ ಬನ್ನಿ

02:37 PM Sep 28, 2020 | Suhan S |

ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ, ಯಾವುದೇ ಬುಲೆಟ್‌ ರೈಲು, ಮೆಟ್ರೋ ರೈಲುಗಳ ಸೌಲಭ್ಯವಿಲ್ಲದೆ, ವಿಮಾನಕ್ಕಿಂತ ವೇಗವಾಗಿ ನೀವು ನಗರದ ಹೃದಯಭಾಗದಿಂದ ದೂರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬಹುದು. ನಗರಕ್ಕೂ ಬರಬಹುದು.

Advertisement

ಹೌದು, ಬೆಂಗಳೂರು ನಗರ- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್‌)ದ ನಡುವೆ ಹೈಪರ್‌ ಲೂಪ್‌ ಕಾರಿಡಾರ್‌ ನಿರ್ಮಿಸಲು ಚಿಂತನೆ ನಡೆದಿದ್ದು,ಈ ಸಂಬಂಧಕಾರ್ಯ ಸಾಧ್ಯತೆಯ ಅಧ್ಯಯನ ನಡೆಸಲು ಜಾಗತಿಕ ಮಟ್ಟದಲ್ಲಿ ಹೈಪರ್‌ಲೂಪ್‌ ತಂತ್ರಜ್ಞಾನ ಮಾರ್ಗದಲ್ಲಿ ಮುಂಚೂಣಿಯಲ್ಲಿರುವ ವರ್ಜಿನ್‌ ಹೈಪರ್‌ ಲೂಪ್‌ ಸಂಸ್ಥೆ ಮುಂದೆಬಂದಿದ್ದು, ತಿಂಗಳಲ್ಲಿ ವರದಿ ಕೂಡ ಸಲ್ಲಿಸಲಿದೆ.

ತಜ್ಞರ ಪ್ರಕಾರ ಈ ಯೋಜನೆ ಸಾಕಾರಗೊಂಡರೆ, ಗಂಟೆಗೆ 1,080 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ಮಾರ್ಗದಲ್ಲಿ ಕೇವಲ ಹತ್ತು ನಿಮಿಷಗಳಲ್ಲಿ ಪ್ರಯಾಣಿಕರು ನಗರದಿಂದ ವಿಮಾನ ನಿಲ್ದಾಣ ತಲುಪಲಿದ್ದಾರೆ. ಇದು ವಿಮಾನಗಳ ವೇಗ (ಗಂಟೆಗೆ 980 ಕಿ.ಮೀ. ಅಂದಾಜು)ಕ್ಕಿಂತ ತ್ವರಿತವಾಗಿರಲಿದ್ದು, ಯಾವುದೇ ಸಂಚಾರದಟ್ಟಣೆಕಿರಿಕಿರಿಯೂ ಇರುವುದಿಲ್ಲ. ಈ ವಿನೂತನ ವ್ಯವಸ್ಥೆಯ ಅನುಷ್ಠಾನದ ಸಾಧ್ಯಾ ಸಾಧ್ಯತೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ವರ್ಜಿನ್‌ ಹೈಪರ್‌ಲೂಪ್‌ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ಭಾನುವಾರ ವರ್ಚುವಲ್‌ ಸಭೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬಿಐಎಎಲ್‌ ನಿರ್ದೇಶಕರ ಮಂಡಳಿ ಅಧ್ಯಕ್ಷ ಟಿ.ಎಂ. ವಿಜಯ್‌ ಭಾಸ್ಕರ್‌, ಮೂಲಸೌಕರ್ಯ ಅಭಿವೃದ್ದಿ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್‌ ಮೋಹನ್‌ ಉಪಸ್ಥಿತರಿದ್ದರು.

ಎರಡು ಹಂತಗಳಲ್ಲಿ ಪೂರ್ಣ: ಈ ಸಂದರ್ಭದಲ್ಲಿ ಮಾತನಾಡಿದ ವರ್ಜಿನ್‌ ಹೈಪರ್‌ಲೂಪ್‌ ಮತ್ತು ಡಿಪಿ ವರ್ಲ್ಡ್ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌, “ಕಾರ್ಯಸಾಧ್ಯತಾ ಅಧ್ಯಯನಕ್ಕೆ ಪೂರ್ವವಾಗಿ ತಾಂತ್ರಿಕ, ಆರ್ಥಿಕ ಮತ್ತು ಮಾರ್ಗದ ಸಾಧ್ಯತೆಗಳತ್ತ ಗಮನಹರಿಸಿ ಅಧ್ಯಯನ ನಡೆಸಲಾಗುವುದು. ಇದನ್ನು ಆರು ತಿಂಗಳ ಅವಧಿಯಲ್ಲಿ ಎರಡು ಹಂತಗಳಲ್ಲಿ ಮುಗಿಸುವ ನಿರೀಕ್ಷೆ ಇದೆ. ಗಂಟೆಗೆ 1,080 ಕಿ.ಮೀ. ವೇಗ ಹೊಂದಿರುವ ಹೈಪರ್‌ಲೂಪ್‌ ಬೆಂಗಳೂರು ವಿಮಾನ ನಿಲ್ದಾಣದಿಂದ ನಗರದ ಕೇಂದ್ರಭಾಗಕ್ಕೆ ಸಾವಿರಾರು ಪ್ರಯಾಣಿಕರನ್ನು 10 ನಿಮಿಷದ ಒಳಗಡೆ ಸಾಗಿಸುತ್ತದೆ’ ಎಂದು ತಿಳಿಸಿದರು.

ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಹರಿ ಮರಾರ್‌ ಮಾತನಾಡಿ, “ಸಾರಿಗೆ ಕೇಂದ್ರವಾಗಿ ಬೆಂಗಳೂರು ವಿಮಾನ ನಿಲ್ದಾಣವನ್ನು ಪರಿವರ್ತಿಸುವುದರೊಂದಿಗೆ ಅದನ್ನು ಭಾರತದ ನೂತನ ಪ್ರವೇಶ ದ್ವಾರವನ್ನಾಗಿ ಮಾಡುವ ದೃಷ್ಟಿಕೋನ ಹೊಂದಿದ್ದೇವೆ. ವಿಶ್ವದರ್ಜೆಯ ಸಾರಿಗೆ ಕೇಂದ್ರ ನಿರ್ಮಿಸಿ ಸುಸ್ಥಿರವಾಗಿ ಉಳಿಸಿಕೊಳ್ಳಲು ಹೈಪರ್‌ಲೂಪ್‌ ನಂತಹ ತಂತ್ರಜ್ಞಾನ ನವೀನತೆ ಮುಖ್ಯ. ಇದು ಪರಿಸರ ಸ್ನೇಹಿ ಜತೆಗೆ ಅತ್ಯುತ್ತಮ ಸೇವೆ ಕೂಡ ಪ್ರಯಾಣಿಕರಿಗೆ ದೊರೆಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಏನಿದು ಹೈಪರ್‌ಲೂಪ್‌? : ಇದು ಎಲೆಕ್ಟ್ರೋಮ್ಯಾಗ್ನೆಟಿಕ್‌ ತಂತ್ರಜ್ಞಾನವಾಗಿದೆ. ರಸ್ತೆಯ ಮೇಲೆ ಮೆಟ್ರೋ ಎತ್ತರಿಸಿದ ಮಾರ್ಗಕ್ಕಾಗಿ ನಿರ್ಮಿಸಿರುವ ಕಂಬಗಳಂತೆಯೇ ಇಲ್ಲಿಯೂ ಕಂಬಗಳನ್ನು ನಿರ್ಮಿಸಿ, ಅದರ ಮೇಲೆ ಕೊಳವೆ ರೂಪದ ಎಲೆಕ್ಟ್ರೋಮ್ಯಾಗ್ನೆಟಿಕ್‌ ಕೊಳವೆ ನಿರ್ಮಿಸಲಾಗುತ್ತದೆ. ಅದರಲ್ಲಿ ಪಾಡ್‌ಗಳು ಸಂಚರಿಸುತ್ತವೆ. ಪ್ರತಿ ಪಾಡ್‌ನ‌ಲ್ಲಿ 40-50 ಜನ ಸಂಚರಿಸಬಹುದು (ಗಾತ್ರ ದ ಮೇಲೆ ಅವಲಂಬಿತ).ಕಾರ್ಯಸಾಧು ಎಂದಾದರೆ, ಮಾರ್ಗ ಮತ್ತು ಅದಕ್ಕೆ ಅಗತ್ಯವಿರುವ ಭೂಸ್ವಾಧೀನ ಮತ್ತಿತರ ಅಂಶಗಳಕುರಿತು ಚರ್ಚೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next